ADVERTISEMENT

ಯಾದಗಿರಿ: ಅತಿಕ್ರಮಣಕ್ಕೆ ಫುಟ್‌ಪಾತ್‌ಗಳೇ ಮಾಯ!

ವಿಸ್ತರಣೆಯಾಗದ ರಸ್ತೆಗಳು; ಬೀದಿ ಬದಿ ವ್ಯಾಪಾರಿಗಳಿಗೆ ಸಿಗದ ಪ್ರತ್ಯೇಕ ವ್ಯಾಪಾರ ಸ್ಥಳ

ಮಲ್ಲಿಕಾರ್ಜುನ ನಾಲವಾರ
Published 5 ಜನವರಿ 2026, 5:55 IST
Last Updated 5 ಜನವರಿ 2026, 5:55 IST
ಸುರಪುರ ನಗರದ ಬಸ್‍ ನಿಲ್ದಾಣ ರಸ್ತೆಯ ಪಾದಚಾರಿ ಮಾರ್ಗದ ದುಸ್ಥಿತಿ
ಸುರಪುರ ನಗರದ ಬಸ್‍ ನಿಲ್ದಾಣ ರಸ್ತೆಯ ಪಾದಚಾರಿ ಮಾರ್ಗದ ದುಸ್ಥಿತಿ   

ಯಾದಗಿರಿ: ನಿದ್ರೆಯಲ್ಲಿ ಮೈಮರೆತಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳಿಗೆ ಒತ್ತುವರಿಯಾಗಿರುವ ಪಾದಚಾರಿ ಮಾರ್ಗದ ಕಡೆ ಗಮನವೇ ಇಲ್ಲ. ಒತ್ತುವರಿಯನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟ ಹಾಗೂ ವ್ಯಾಪಾರಿಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸುವ ಇಚ್ಛಾಶಕ್ತಿಯೂ ಇಲ್ಲವಾಗಿದೆ.

ಒಂದುಕಡೆ ಹೊಸದಾಗಿ ರಸ್ತೆಗೆ ಇಳಿಯುತ್ತಿರುವ ವಾಹನಗಳ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಮತ್ತೊಂದು ಕಡೆ ಅವುಗಳ ಸಂಖ್ಯೆಗೆ ತಕ್ಕಂತೆ ಸಂಚಾರದ ಮೂಲಸೌಕರ್ಯಗಳು ಅಭಿವೃದ್ಧಿ ಆಗುತ್ತಿಲ್ಲ. ಇನ್ನೊಂದಡೆ ಸಮರ್ಪಕ ಪಾದಚಾರಿ ಮಾರ್ಗವಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇವುಗಳ ನಡುವೆಯೇ ಬೀದಿ ಬದಿ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು ಅಲ್ಲಲ್ಲಿ ಫುಟ್‌ಪಾತ್‌ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದರೂ ಕೇಳುವವರು ಇಲ್ಲದಂತೆ ಆಗಿದೆ.

ಯಾದಗಿರಿ, ಶಹಾಪುರ, ಸುರಪುರ ನಗರಗಳು, ಕೆಂಭಾವಿ, ಕಕ್ಕೇರಾ, ಗುರುಮಠಕಲ್‌, ಹುಣಸಗಿ ಪಟ್ಟಣಗಳಲ್ಲಿ ಬೀದಿಬದಿ ವ್ಯಾಪಾರಿಗಳಷ್ಟೇ ಅಲ್ಲದೆ ದೊಡ್ಡ ಅಂಗಡಿಯವರು, ಹೋಟೆಲ್‌ನವರೂ ಫುಟ್‌ಪಾತ್‌ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಜನರಿಗೆ ನಡೆದಾಡಲು ತೊಂದರೆಯಾಗುತ್ತಿದೆ ಎಂಬ ದೂರು ಸಾಮಾನ್ಯವಾಗಿದೆ.

ADVERTISEMENT

ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಚಿತ್ತಾಪುರ ರಸ್ತೆ, ಗಾಂಧಿ ಚೌಕ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳ ಮಾರಾಟ ಮಳಿಗೆ ಮುಂಭಾಗ ಬೈಕ್ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಮನಬಂದಂತೆ ನಿಲ್ಲಿಸಲಾಗುತ್ತದೆ. ಜೊತೆಗೆ ಮಳಿಗೆಗಳ ಬೋರ್ಡ್‌ಗಳನ್ನೂ ಫುಟ್‌ಪಾತ್‌ನಲ್ಲಿ ಇರಿಸಲಾಗಿದೆ. ಇದರಿಂದಾಗಿ ಪಾದಚಾರಿಗಳು ಓಡಾಡಲು ಜಾಗವೇ ಇಲ್ಲದಂತೆ ಆಗಿದೆ.

‘ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಬಹುತೇಕರು ಬಡವರೇ ಇದ್ದಾರೆ. ಜೊತೆಗೆ ಕಾಲ್ನಡಿಗೆಯಲ್ಲಿ ಓಡಾಡುವವರು ಸಹ ಬಡವರು. ನಗರಸಭೆ ಇಬ್ಬರಿಗೂ ಅನುಕೂಲಾಗುವಂತೆ ರಸ್ತೆ ವಿಸ್ತರಣೆ ಮಾಡಬೇಕು. ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವು ಮಾಡಿ, ವ್ಯಾಪಾರಿಗಳಿಗೆ ಪ್ರತ್ಯೇಕವಾದ ವ್ಯವಸ್ಥೆಯೂ ಕಲ್ಪಿಸಬೇಕು. ಅದಕ್ಕೂ ಮುನ್ನ ಒತ್ತುವರಿ ಮಾಡಿಕೊಂಡವರಿಗೆ ಅವರ ತಪ್ಪುಗಳ ಮನವರಿಕೆ ಮಾಡಿ, ಪೊಲೀಸ್ ಹಾಗೂ ನಗರಸಭೆ ನೋಟಿಸ್ ಕೊಟ್ಟು ತಿಳಿ ಹೇಳಬೇಕು’ ಎನ್ನುತ್ತಾರೆ ನಗರದ ನಿವಾಸಿ ಜಾಫರ್ ಹುಸೇನ್.

‘ಗಾಂಧಿ ಚೌಕ್‌ ಸಮೀಪದ ಹಳೇ ಮಾರುಕಟ್ಟೆಯ ಕೋವಿಡ್ ವೇಳೆ ಬಂದ್ ಆಗಿತ್ತು. ಅಲ್ಲಿ ವ್ಯಾಪಾರ ಮಾಡುತ್ತಿದ್ದ 120ಕ್ಕೂ ಅಧಿಕ ಮಂದಿ ಹೊರ ಬಂದು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ರಸ್ತೆಗಳ ವಿಸ್ತರಣೆ ಮಾಡಿ, ಪ್ರತ್ಯೇಕವಾದ ವ್ಯಾಪಾರದ ವ್ಯವಸ್ಥೆ ಮಾಡಿದರೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೂ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಬೀದಿ ವ್ಯಾಪಾರಿ ಸುನಿಲ್ ಕುಮಾರ್. 

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ್ ಕುಲಕರ್ಣಿ

ಹುಣಸಗಿ ಪಟ್ಟಣದ ರಸ್ತೆ ಬದಿಯಲ್ಲಿನ ತಳ್ಳುವ ಬಂಡಿಗಳು
ಪಾದಚಾರಿ ಮಾರ್ಗ ತೆರವುಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು
ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ಕೊಡಲಾಗಿದೆ. ಗಾಂಧಿ ಚೌಕ್‌ ರಸ್ತೆಯ ಒತ್ತುವರಿ ತೆರವಿಗೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು
ಉಮೇಶ ಚವ್ಹಾಣ್ ಯಾದಗಿರಿ ನಗರಸಭೆ ಪೌರಾಯುಕ್ತ
ಬೀದಿಬದಿ ವ್ಯಾಪಾರಿಗಳಿಗೆ ಹಲವು ನೋಟಿಸ್ ನೀಡಿದರೂ ಪ್ರಯೋಜವಾಗುತ್ತಿಲ್ಲ. ತೆರವುಗೊಳಿಸಲು ಹೋದರೆ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ
ವೆಂಕಟೇಶ ಕಲಬುರಗಿ ನಗರಸಭೆ ಕಂದಾಯ ಅಧಿಕಾರಿ
ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಅಧಿಕಾರ ನಗರಸಭೆಗೆ ಇದೆ. ತೆರವು ಕಾರ್ಯಾಚರಣೆಗೆ ಪೊಲೀಸ್ ಭದ್ರತೆ ಒದಗಿಸಲು ಸಿದ್ಧ
ಕೃಷ್ಣ ಸುಬೇದಾರ ಪಿಎಸ್‍ಐ ಸುರಪುರ
ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ನೀಡಬೇಕು. ಅಲ್ಲಿ ವ್ಯಾಪಾರ ಆಗುವಂತಿರಬೇಕು. ಒಕ್ಕಲೆಬ್ಬಿಸಿದರೆ ನಮ್ಮ ಕುಟುಂಬ ಬೀದಿಗೆ ಬೀಳುತ್ತದೆಮಲ್ಲಪ್ಪ ದೀವಳಗುಡ್ಡ
ಸುರಪುರದ ಬೀದಿಬದಿ ವ್ಯಾಪಾರಿ
ಬೀದಿಬದಿ ವ್ಯಾಪಾರ ಒಂದು ದೊಡ್ಡ ಸಮಸ್ಯೆ. ಒಬ್ಬರ ಸಮಸ್ಯೆ ಪರಿಹರಿಸಲು ಇನ್ನೊಬ್ಬರು ತ್ಯಾಗ ಮಾಡಬೇಕು. ನಗರಸಭೆ ಪರ್ಯಾಯ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು
ರಾಘವೇಂದ್ರ ಭಕ್ರಿ ಸಾಮಾಜಿಕ ಕಾರ್ಯಕರ್ತ

ಇದ್ದೂ ಇಲ್ಲದಂತಾದ ಪಾದಚಾರಿ ಮಾರ್ಗ‌

ಶಹಾಪುರ: ಶಹಾಪುರ-ಸುರಪುರ-ಯಾದಗಿರಿ ಹೆದ್ದಾರಿ ಅಕ್ಕಪಕ್ಕದಲ್ಲಿ ಪಾದಚಾರಿಗಳಿಗಾಗಿ ಓಡಾಡಲು ಜಾಗದ ವ್ಯವಸ್ಥೆ ಕಲ್ಪಿಸಿದರೂ ಎರಡೂ ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಆವರಿಸಿಕೊಂಡಿದ್ದಾರೆ. ಇದರಿಂದ ಪಾದಾಚಾರಿಗಳಿಗೆ ತೊಂದರೆಯಾಗಿದೆ. ಕೂಡು ರಸ್ತೆ ಇಲ್ಲದೆ ಇರುವುದು ನಗರಕ್ಕೆ ದೊಡ್ಡ ಸಮಸ್ಯೆಯಾಗಿದೆ.

ಪ್ರತಿಯೊಂದು ಬಡಾವಣೆಯ ವಾಹನಗಳು ಮುಖ್ಯ ರಸ್ತೆ ಮೂಲಕವೇ ಓಡಾಡಬೇಕು. ಜನನಿಬಿಡ ಪ್ರದೇಶವಾದ ಹಳೇ ಬಸ್ ನಿಲ್ದಾಣ ಬಸವೇಶ್ವರ ವೃತ್ತ ಸಿ.ಬಿ.ಕಮಾನ್ ಹೊಸ ಬಸ್ ನಿಲ್ದಾಣ ವಾಲ್ಮೀಕಿ ಚೌಕ್‌ ಕಡೆ ಸಾಕಷ್ಟು ಕಿರಿಕಿರಿಯನ್ನು ಪಾದಚಾರಿಗಳು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ನಗರದ ನಿವಾಸಿಗರು. ಪೊಲೀಸರು ಪಾದಚಾರಿ ಡಬ್ಬಾ ತೆಗೆಯುವಂತೆ ಇಲ್ಲ. ಅಲ್ಲದೆ ನಗರಸಭೆ ಸಿಬ್ಬಂದಿ ತೆರವಿಗೆ ಮುಂದಾದರೆ ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರು ತಡೆಯುತ್ತಾರೆ. ಪಾದಚಾರಿ ತೆರವುಗೊಳಿಸುವುದು ಕಗ್ಗಂಟಾಗಿಯೇ ಉಳಿದುಕೊಂಡಿದೆ. ಬಡ ವ್ಯಾಪಾರಿಗಳು ‘ನಮ್ಮ ಹೊಟ್ಟೆಯ ಮೇಲೆ ಹೊಡೆದು ಡಬ್ಬಾಗಳನ್ನು ತೆರವು ಮಾಡಬೇಡಿ. ದೊಡ್ಡ ಅಂಗಡಿ ಮಾಲೀಕರು ವಾಹನ ನಿಲುವ ಜಾಗದಲ್ಲಿ  ಅಂಗಡಿ ತೆರೆದರೂ ಯಾರು ಕೇಳಲ್ಲ. ನಮಗೆ ಏಕೆ’ ಎನ್ನುತ್ತಾರೆ ವ್ಯಾಪಾರಿ ಮಾನಪ್ಪ.

ವಿಸ್ತರಣೆಯಾಗದ ರಸ್ತೆಗಳು

ಸುರಪುರ: ನಗರದ ಮುಖ್ಯ ರಸ್ತೆಗಳು ಇಕ್ಕಟ್ಟಾಗಿದ್ದು ಸಮರ್ಪಕವಾದ ಫುಟ್‌ಪಾತ್‌ಗಳೂ ಇಲ್ಲ. ದಶಕಗಳ ಹಿಂದಿನ ರಸ್ತೆಗಳ ವಿಸ್ತರಣೆಯೂ ಸಮರ್ಪಕವಾಗಿ ಆಗಿಲ್ಲ. ಸಹಜವಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಅರಮನೆ ರಸ್ತೆ ಬಸ್‍ ನಿಲ್ದಾಣ ರಸ್ತೆ ತಹಶೀಲ್ದಾರ್ ಕಚೇರಿ ರಸ್ತೆ ವೇಣುಗೋಪಾಲಸ್ವಾಮಿ ಗುಡಿ ರಸ್ತೆ ಸೇರಿದಂತೆ ಇತರೆಡೆ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ ಎಲ್ಲಿಂದೆ ಎಂದು ಹುಡುಕಬೇಕಿದೆ. ವ್ಯಾಪಾರಸ್ಥರು ಮಾರಾಟದ ವಸ್ತುಗಳನ್ನು ತಮ್ಮ ಅಂಗಡಿ ಮುಂದೆ ಇರುವ ಪಾದಚಾರಿ ಮಾರ್ಗದಲ್ಲಿ ಇರಿಸುತ್ತಾರೆ. ಕೆಲವೆಡೆ ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿದ್ದಾರೆ.

ವಾಹನ ದಟ್ಟಣೆ ಅಧಿಕವಾಗಿದೆ. ಎಲ್ಲೆಂದರಲ್ಲಿ ದ್ವಿಚಕ್ರ ಮತ್ತು ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಹೀಗಾಗಿ ನಿತ್ಯ ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿದೆ  ವೃದ್ಧರು ಮಕ್ಕಳು ಮಹಿಳೆಯರು ರಸ್ತೆ ದಾಟಲು ಪರದಾಡುವಂತಾಗಿದೆ. ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಲು ಆಗುತ್ತಿಲ್ಲ. ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆ ಆಗುತ್ತಿದೆ. ಪೊಲೀಸರಿಗೆ ಟ್ರಾಫಿಕ್ ನಿಯಂತ್ರಿಸಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಸರಿಯಾದ ವ್ಯವಸ್ಥೆ ಇಲ್ಲ ಫುಟ್‌ಪಾತ್

ಹುಣಸಗಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಮಹಾಂತ ಸ್ವಾಮಿ ವೃತ್ತದವರೆಗೆ ಪಾದಚಾರಿ ರಸ್ತೆ ನಿರ್ಮಿಸುವ ಜೊತೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ತಾಲ್ಲೂಕು ಕೇಂದ್ರಕ್ಕೆ ಗ್ರಾಮೀಣ ಭಾಗದಿಂದ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಸಮರ್ಪಕ ಪಾದಚಾರಿ ಮಾರ್ಗ ಇಲ್ಲದೆ ಪರದಾಡುತ್ತಾ ಓಡಾಡುತ್ತಿದ್ದಾರೆ. ದೇವಪುರ– ಮನಗೂಳಿ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ವಾಹನಗಳು ಬಸ್‌ಗಳು ಸಂಚರಿಸುತ್ತವೆ. ಆದರೆ ಬಸ್ ನಿಲ್ದಾಣ ಪಕ್ಕದ ರಸ್ತೆಯಲ್ಲಿ ಗೂಡುಂಗಡಿ ತರಕಾರಿ ತಳ್ಳುಗಾಡಿಗಳು ಇರುವುದರಿಂದ  ಪಾದಚಾರಿಗಳು ತೊಂದರೆ ಆಗುತ್ತಿದೆ ಎನ್ನುತ್ತಾರೆ ರವಿ ಕುಲಕರ್ಣಿ ಕಾಮನಟಗಿ.

‘ರಸ್ತೆಯ ಬದಿಯಲ್ಲಿ ಅನಧಿಕೃತ ತಳ್ಳುಬಂಡಿಗಳ ವ್ಯಾಪಾರ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಿಂದ ಪಾದಚಾರಿಗಳಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಪಾದಚಾರಿ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿದ್ದರಾಮೇಶ್ವರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.