
ಗುರುಮಠಕಲ್: ಪಟ್ಟಣದಲ್ಲಿ ಶುಕ್ರವಾರ (ಅ.31) ಸಂಜೆ 4ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥ ಸಂಚಲನ ಜರುಗಲಿದ್ದು, ಪಥಸಂಚಲನಕ್ಕೆ ಸಿದ್ಧತೆ ಬಿರುಸುಗೊಂಡಿದೆ.
ಪಟ್ಟಣದಲ್ಲಿ ಸಿದ್ದತೆ ಆರಂಭವಾಗಿದ್ದು, ಪಥ ಸಂಚಲನದ ಮಾರ್ಗದಲ್ಲಿ ಕೇಸರಿ ಪರಾರಿ, ಸ್ವಾಗತಕೋರುವ ಬ್ಯಾನರ್, ಸ್ವತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಅಳವಡಿಕೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ.
ಆರ್‌ಎಸ್‌ಎಸ್ ಹಿತೈಷಿ ಮನೆಗಳ ಮುಂದೆ ಸ್ವಯಂಪ್ರೇರಿತ ರಂಗೋಲಿ ಹಾಕುವುದು, ಪಥಸಂಚಲನಕ್ಕೆ ಪುಷ್ಪವೃಷ್ಟಿ, ತಮ್ಮ ಮನೆಗಳ ಮುಂದೆ ಸ್ವಚ್ಛತೆ ಮತ್ತು ಚಳಿ ಹೊಡೆಯುವುದು ಸೇರಿದಂತೆ ಸ್ವಾಗತ, ಶುಭಾಶಯ, ಜಯಘೋಷದ ತಯಾರಿ ನಡೆಸಲಾಗುತ್ತಿದೆ.
ಈ ಮೊದಲು ಅ.25 ರಂದು ಪಥಸಂಚಲನಕ್ಕೆ ಚಿಂತಿಸಲಾಗಿತ್ತು. ಆದರೆ, ಅನುಮತಿ ಸಿಗದ ಕಾರಣ ಮುಂದೂಡಲಾಗಿತ್ತು. ನಿಯಮಾನುಸಾರ ಅನುಮತಿ ಕೋರಿ ಆರ್‌ಎಸ್‌ಎಸ್ ಸಂಚಾಲಕರು ಸಕ್ಷಮ ಪ್ರಾಧಿಕಾರಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ಪೊಲೀಸ್ ಇಲಾಖೆಯಿಂದ ವರದಿ ಪಡೆದ ನಂತರ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಶುಕ್ರವಾರ (ಅ.31) ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.
ಪಥಸಂಚಲನ ಮಾರ್ಗ: ಪಟ್ಟಣದ ಲಕ್ಷ್ಮೀಬಾಯಿ ನರೇಂದ್ರ ರಾಠೋಡ ಲೇಔಟ್‌ನಲ್ಲಿ ಸಂಪತ (ಜಮಾವಣೆ), ಕನಕವೃತ್ತ (ಕಾಕಲವಾರ ವೃತ್ತ), ಬಸವೇಶ್ವರ ವೃತ್ತ (ಎಪಿಎಂಸಿ ವೃತ್ತ), ಹನುಮ ಮಂದಿರ (ಅಂಬಿಗರ ಚೌಡಯ್ಯ ವೃತ್ತದ ಹತ್ತಿರ), ಮಲ್ಲಯಕಟ್ಟಾ, ನೀರೆಟಿ ಓಣಿ, ಬಡಿಗೇರ ಓಣಿ, ನಗರೇಶ್ವರ ದೇವಸ್ಥಾನ ಮಾರ್ಗದಲ್ಲಿ ಮುಂದುವರೆಯಲಿದೆ.
ವೀರಭದ್ರೇಶ್ವರ ದೇವಸ್ಥಾನ, ನಾನಾಪುರ ಬಡಾವಣೆ, ಕುಂಬಾರವಾಡಿ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ ವೃತ್ತ, ಗಂಗಾಪರಮೇಶ್ವರಿ ವೃತ್ತ(ಸಿಹಿನೀರಬಾವಿ), ಬಸ್ ನಿಲ್ದಾಣದ ಮಾರ್ಗವಾಗಿ ರಾಮನಗರ ಬಡಾವಣೆಯ ರತ್ನಮ್ಮ ಈರಾರೆಡ್ಡಿ ಚಪೇಟ್ಲಾ ಲೇಔಟ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಆರ್‌ಎಸ್‌ಎಸ್ ತಿಳಿಸಿದೆ.
ಪೊಲೀಸ್ ನಿಯೋಜನೆ: ಶುಕ್ರವಾರದ ಪಥಸಂಚಲನಕ್ಕೆ ಗುರುಮಠಕಲ್ ಪಿಐ ವೀರಣ್ಣ ದೊಡ್ಡಮನಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ 2, ಪಿಎಸ್‌ಐ 5, ಎಎಸ್‌ಐ 12, ಹೆಡ್ ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್ 30 ಸೇರಿದಂತೆ ಜಿಲ್ಲಾ ಮೀಸಲು ಪಡೆಯ 2 ಪಾರ್ಟಿ ಮತ್ತು ವ್ಯಾನ್‌ಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಗುರುಮಠಕಲ್‌ನಲ್ಲಿ ಶುಕ್ರವಾರ ಜರುಗುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಣವೇಶದಲ್ಲಿ ಭಾಗವಹಿಸಬೇಕು-ಸುರೇಶ ಅಂಬಿಗೇರ ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷ
ಬ್ಯಾನರ್-ಬಂಟಿಗ್ಸ್‌ಗೆ ಪುರಸಭೆಯಿಂದ ಅನುಮತಿ ಪಡೆಯಲಾಗಿದೆ. ಶುಕ್ರವಾರ ಮಧ್ಯಾಹ್ನ 3ಕ್ಕೆ ಸಂಪತ 4 ರಿಂದ ಪಥ ಸಂಚಲನ ಪ್ರಾರಂಭವಾಗಲಿದೆ.-ಬಸ್ಸಪ್ಪ ಸಂಜನೋಳ ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರ ಪ್ರಮುಖ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.