ADVERTISEMENT

ಸುರಪುರ: ಸದ್ಗುರು ಸಹಜಾನಂದ ಸರಸ್ವತಿ ಸ್ವಾಮೀಜಿ 91ನೇ ಪುಣ್ಯಾರಾಧನೆ ಮಹೋತ್ಸವ

ಅಶೋಕ ಸಾಲವಾಡಗಿ
Published 21 ಜನವರಿ 2026, 4:20 IST
Last Updated 21 ಜನವರಿ 2026, 4:20 IST
ಸುರಪುರ ಸಮೀಪದ ರಂಗಂಪೇಟೆಯ ಸಹಜಾನಂದ ಸರಸ್ವತಿ ದೇಗುಲ ಉತ್ಸವಕ್ಕೆ ಸಿದ್ಧಗೊಂಡಿರುವುದು
ಸುರಪುರ ಸಮೀಪದ ರಂಗಂಪೇಟೆಯ ಸಹಜಾನಂದ ಸರಸ್ವತಿ ದೇಗುಲ ಉತ್ಸವಕ್ಕೆ ಸಿದ್ಧಗೊಂಡಿರುವುದು   

ಸುರಪುರ: ಅಸಂಖ್ಯ ಭಕ್ತ ಸಮೂಹ ಹೊಂದಿರುವ ಸಮೀಪದ ರಂಗಂಪೇಟೆ ತಿಮ್ಮಾಪುರದ ಸದ್ಗುರು ಸರಸ್ವತಿ ಮಹಾಸ್ವಾಮಿಗಳ ಆರಾಧನೆಗೆ ದೇಗುಲ ಸಜ್ಜುಗೊಂಡಿದೆ.

ನರನಿಂದ ನಾರಾಯಣನಾಗುವ ಬಗೆಯನ್ನು ತಮ್ಮ ಸರಳ, ಸುಂದರ, ಸಾತ್ವಿಕತೆಯಿಂದ ಜನಸಾಮಾನ್ಯರಿಗೆ ಮಾರ್ಗದರ್ಶನ ಮಾಡಿದ ಖ್ಯಾತಿ ಸಹಜಾನಂದ ಸ್ವಾಮೀಜಿಗಳದ್ದು. ಸುರಪುರದ ಪ್ರಸಿದ್ಧ ಪಂಚಾಂಗಕರ್ತರಾದ ರಾಮಶಾಸ್ತ್ರಿ ಹೆಬ್ಬಾಳ ಮತ್ತು ಜಾನಕಿಬಾಯಿ ಉದರಲ್ಲಿ ಜನಿಸಿದರು. ದಾಯಾದಿಗಳು ಪಾಲು ನಿರಾಕರಿಸಿದ್ದರಿಂದ ಈಶ್ವರನ ಇಚ್ಛೆ ಎಂದು ಬಗೆದು ಸುರಪುರ ಬಿಟ್ಟು ರಂಗಂಪೇಟೆಯ ನಗರೇಶ್ವರ ಗುಡಿಯಲ್ಲಿ ನೆಲೆಸಿದರು.

ಪೂರ್ವಾಶ್ರಮದ ಹೆಸರು ಗೋಪಾಲಭಟ್ಟ. ಪತ್ನಿಯ ಕಾಲಾನಂತರ ವೈರಾಗ್ಯ ಪ್ರಾಪ್ತಿಯಾಯಿತು. ಸನ್ಯಾಸ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಒಂದು ದಿನ ಅವರಿಗೆ ಗಂವ್ಹಾರದ ದೇವರೆಂದೇ ಜನಜನಿತರಾಗಿದ್ದ ತ್ರಿವಿಕ್ರಮಾನಂದ ಸ್ವಾಮಿಗಳ ದರ್ಶನವಾಯಿತು. ಸಿಂದಗಿಯ ಭೀಮಾಶಂಕರ ಸ್ವಾಮೀಜಿ ಮತ್ತು ಗಂವ್ಹಾರದ ತ್ರಿವಿಕ್ರಮಾನಂದ ಸ್ವಾಮೀಜಿಯನ್ನು ಗುರುಗಳಾಗಿ ಸ್ವೀಕರಿಸಿದರು.
ಸಹಜಾನಂದರಲ್ಲಿದ್ದ ಅಲೌಕಿಕ ಜ್ಞಾನ ಕಂಡುಕೊಂಡು ತ್ರಿವಿಕ್ರಮಾನಂದರು ಎಲ್ಲ ವಿದ್ಯೆಗಳನ್ನು ಉಪದೇಶಿಸಿದರು. ಸಹಜಾನಂದರು ತಮ್ಮ ಇಡೀ ಜೀವನವನ್ನು ಪಾರಮಾರ್ಥಕ್ಕೆ ಮೀಸಲಿರಿಸಿದರು. ತಮ್ಮನ್ನು ಅರಸಿ ಬಂದ ಭಕ್ತರನ್ನು ಉದ್ಧರಿಸಿದರು.

ADVERTISEMENT

ಒಮ್ಮೆ ವಿಷಮಶೀತ ಜ್ವರದಿಂದ ಬಳಲುತ್ತಿದ್ದರು. ಅರ್ಧ ಪ್ರಜ್ಞಾವಸ್ಥೆಯಲ್ಲಿದ್ದರು. ದಿನಾಲೂ ತಣ್ಣೀರು ಸ್ನಾನ ಮಾಡುವ ಪರಿಪಾಠ ಹೊಂದಿದ್ದ ಅವರು ತಮ್ಮ ಶಿಷ್ಯರಿಗೆ ತಮ್ಮ ತಲೆಯ ಮೇಲೆ ತಣ್ಣೀರು ಸುರಿಯಲು ಹೇಳಿದರು. ಪವಾಡವೆಂಬಂತೆ ಅವರ ಜ್ವರ ಮಾಯಯವಾಯಿತು.

‘ಮೋಹವನ್ನು ಬಿಡುವುದೇ ಮೋಕ್ಷ’ ಎಂದು ಸಾರಿದರು. ಸದಾಚಾರಕ್ಕೆ ಸುಸಂಸ್ಕಾರಗಳಿಗೆ ಪ್ರಾಮುಖ್ಯತೆ ನೀಡಿದರು. ವಾಕ್‍ಸಿದ್ಧಿ ಹೊಂದಿದ್ದರು. ಭಕ್ತಿಪಂಥ, ಆದಿನಾಥ ಪರಂಪರೆಯನ್ನು ಬೋಧಿಸಿದರು.
ಮಾನವ ಜೀವನದ ಪ್ರಥಮ ಗುರಿ ಜನಸೇವೆ ಎಂದು ಬೋಧಿಸಿದರು. ಗಿಡ, ಬಳ್ಳಿ, ನಕ್ಷತ್ರ, ಸೂರ್ಯ, ಚಂದ್ರ, ಸಾಗರ ಮತ್ತು ಸಕಲ ಜೀವರಾಶಿಗಳಲ್ಲಿ ಪ್ರೇಮದ ದಿವ್ಯಾನುಭೂತಿಯನ್ನು ಗುರುತಿಸಬೇಕು’ ಎಂದು ಸಾರಿದರು.

ನಮ್ಮ ಆತ್ಮ ಪರಮಾತ್ಮನ ಮಿಲನಕ್ಕಾಗಿ ಕಾತರ ಪಡುವುದೇ ನಮ್ಮ ಕರ್ತವ್ಯವಾಗಿರಬೇಕು. ಮಾನವೀಯ ಸೇವೆಯಿಂದ ಜನರಲ್ಲಿ ಜನಾರ್ದನನನ್ನು ಕಾಣಬೇಕು. ಸೇವೆಯ ಭಾಗ್ಯಕ್ಕಿಂತ ಇನ್ನೊಂದು ಶ್ರೇಷ್ಠ ಧರ್ಮವಿಲ್ಲ. ಭಕ್ತಿ ಮತ್ತು ಪ್ರೇಮ ಒಂದೇ ನಾಣ್ಯದ ಎರಡು ಮುಖಗಳು ಎಂದು ಉಪದೇಶಿಸಿದರು.

ಯೋಗ ಸಾಧನೆಯಿಂದ ಅವರಿಗೆ ದಿವ್ಯ ತೇಜಸ್ಸು ಪ್ರಾಪ್ತಿಯಾಗಿತ್ತು. ತಾವು ದೇಹ ತ್ಯಾಗ ಮಾಡುವ ಬಗ್ಗೆ 6 ತಿಂಗಳು ಮೊದಲೇ ಶಿಷ್ಯರಿಗೆ ಹೇಳಿದ್ದರು. ಅನ್ನದಾನ ಶ್ರೇಷ್ಠ ಎಂದು ಸಾರುತ್ತಿದ್ದ ಅವರು ಎಲ್ಲರನ್ನೂ ಅನ್ನದಾನದಿಂದ ತೃಪ್ತಿಪಡಿಸುತ್ತಿದ್ದರು.

91 ವರ್ಷಗಳ ಹಿಂದೆ ಮಾಘ ಶುದ್ಧ ಪಂಚಮಿಯಂದು ಜೀವಂತ ಸಮಾಧಿಯಾದರು. ತ್ಯಾಗ ಯೋಗಗಳ ಸಮನ್ವಯದ ಗುರುಗಳು. ಜಾತಿಭೇದ ಇರಲಿಲ್ಲ. ಇವರ ಭಕ್ತ ಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ‘ಸಾಳಿ’ ಸಮುದಾಯದವರು. ಈಗಲೂ ತಮಗೆ ಉಪಾಸನೆ ಮಾಡಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಭಕ್ತರು ಇವರನ್ನು ಕಲಿಯುಗದ ಕಾಮಧೇನು, ಕಲ್ಪವೃಕ್ಷವೆಂದೇ ಪರಿಗಣಿಸಿದ್ದಾರೆ.

ಸಹಜಾನಂದ ಸರಸ್ವತಿ ಸ್ವಾಮೀಜಿ
ಸಹಜಾನಂದ ಸರಸ್ವತಿ ಸ್ವಾಮೀಜಿ ನಮ್ಮ ಆದಿನಾಥ ಪರಂಪರೆಯವರು. ಅವರು ಅಪರೋಕ್ಷ ಜ್ಞಾನಿಗಳು. ನಮ್ಮ ಗುರುಗಳ ಶಿಷ್ಯರು
ಸೋಪಾನನಾಥ ಸ್ವಾಮೀಜಿ ಗಂವ್ಹಾರ
ಸಹಜಾನಂದ ಸರಸ್ವತಿ ಸ್ವಾಮೀಜಿ ಆರಾಧನೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೂರು ದಿನ ಭಕ್ತಿಯಿಂದ ತನು ಮನ ಧನದಿಂದ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ
ಹೊನ್ನಪ್ಪ ಹಳಿಜೋಳ ಸಮಿತಿಯ ಅಧ್ಯಕ್ಷರು

ಕಾರ್ಯಕ್ರಮಗಳ ವಿವರ

ಜ. 22 ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ಪಾರಂಪರಿಕ ಅಖಂಡ ಭಜನೆ ಬೆಳಿಗ್ಗೆ 9 ಗಂಟೆಗೆ ಅನ್ನಪೂರ್ಣೇಶ್ವರಿ ಮತ್ತು ಉಗ್ರಾಣ ಪೂಜೆ. ರಾತ್ರಿ 7 ಗಂಟೆಗೆ ಮಹಾಪ್ರಸಾದ. ಶರಣಪ್ಪ ಕಮ್ಮಾರ ಶಿವಶರಣಯ್ಯ ಬಳ್ಳುಂಡಗಿಮಠ ಮಾರುತಿ ಭಜನಾ ಮಂಡಳಿ ಅವರಿಂದ ಅಹೋರಾತ್ರಿ ಭಜನೆ. ಜ. 23 ರಂದು ಬೆಳಿಗ್ಗೆ 8 ಗಂಟೆಗೆ ಭಜನೆ ಸಮಾಪ್ತಿ 9 ಗಂಟೆಗೆ ರುದ್ರಾಭಿಷೇಕ ಮಧ್ಯಾಹ್ನ 12 ಗಂಟೆಗೆ ಸಹಜಾನಂದ ಸ್ವಾಮೀಜಿ ಬೆಳ್ಳಿ ಭಾವಚಿತ್ರದೊಂದಿಗೆ ರಥೋತ್ಸವ 2 ಗಂಟೆಗೆ ಸೋಪಾನನಾಥ ಸ್ವಾಮಿಗಳಿಗೆ ಗುರು ಪಾದಪೂಜೆ ಗುರುಗಳಿಂದ ಅಶೀರ್ವಚನ ಸಂಜೆ 7 ಗಂಟೆಗೆ ಮಹಾಪ್ರಸಾದ. ಜ. 24 ರಂದು ಮಧ್ಯಾಹ್ನ 1 ಗಂಟೆಗೆ ಭಜನೆ ಮತ್ತು ಸತ್ಸಂಗ ನಂತರ ಗೋಪಾಳ ಕಾವಲಿ ಮತ್ತು ಅವಭೃತ ಸ್ನಾನ ಶ್ರೀಗಳಿಂದ ಆಶೀರ್ವಚನ ರಾತ್ರಿ 7 ಗಂಟೆಗೆ ಮಹಾಪ್ರಸಾದದೊಂದಿದೆ ಅರಾಧನೆ ಸಂಪನ್ನಗೊಳ್ಳಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.