
ಕಾಳೆಬೆಳಗುಂದಿ(ಸೈದಾಪುರ): ಭಕ್ತರ ಇಷ್ಟಾರ್ಥವನ್ನು ಪೂರೈಸುವ ಈ ಭಾಗದ ಆರಾಧ್ಯದೈವ ಕಾಳೆಬೆಳಗುಂದಿಯ ಭದ್ರಕಾಳಿ ಬನದೇಶ್ವರರ ಭವ್ಯ ರಥೋತ್ಸವವು ಬುಧವಾರ ಬೆಳಗಿನ ಜಾವ ಕೊರೆಯುವ ಚಳಿಯಲ್ಲಿಯೂ ಸಹಸ್ರಾರು ಭಕ್ತರ ಜೈ ಘೋಷಗಳ ನಡುವೆ ಅದ್ಧೂರಿಯಾಗಿ ನೆರವೇರಿತು.
ಕಾಳೆಬೆಳಗುಂದಿ ಗ್ರಾಮದಲ್ಲಿ ನೆಲೆಸಿರುವ ಭದ್ರಕಾಳಿ ಬನದೇಶ್ವರರಿಗೆ ಪಂಚಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ನಂದಿಕೋಲು ಹಾಗೂ ಪುರವಂತರ ಸೇವೆ ಮಾಡಿದರು. ಮಂದಿರದಿಂದ ಬನದೇಶ್ವರ ಹಾಗೂ ಭದ್ರಕಾಳಮ್ಮ ದೇವಿಯ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ದೇವಸ್ಥಾನ ಹಾಗೂ ಭವ್ಯ ರಥದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ನಂತರ ಮೂರ್ತಿಯನ್ನು ರಥದಲ್ಲಿಟ್ಟು ವೈಭವದ ರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಯುವ ಸಮೂಹವು ರಥೋತ್ಸವದ ಉದ್ಧಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಸುಕಿನ 5ಗಂಟೆ ಸುಮಾರಿಗೆ ಜರುಗಿದ ರಥೋತ್ಸವಕ್ಕೆ ಬಣ್ಣ ಬಣ್ಣದ ಹೂ, ತೆಂಗಿನ ಗರಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವದ ನಂತರ ಬೆಳಗ್ಗೆ 7ಗಂಟೆ ಸುಮಾರಿಗೆ ಬನದೇಶ್ವರ ಮಂದಿರದಿಂದ ಬಂಡೇರಾಚೋಟಿ ದೇವಸ್ಥಾನದವರೆಗೆ ಪಲ್ಲಕ್ಕಿ ಹಾಗೂ ಪುರವಂತರ ಸೇವೆ ಜರುಗಿತು.
ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ 11 ಗಂಟೆಯಿಂದ ಗ್ರಾಮೀಣ ಸೊಗಡಿನ ಕೈಕುಸ್ತಿ, ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಕಲ್ಲು ಗುಂಡು, ಮರುಳಿನ ಚೀಲ ಎತ್ತುವ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬೆಳ್ಳಿ ಉಂಗುರ, ಕಡಗ, ಕಾಯಿಯನ್ನು ನೀಡಿ ಗೌರವಿಸಲಾಯಿತು.
ಜಾತ್ರೆಯ ಅಂಗವಾಗಿ ನೆರವೇರಿಸಿದ ವೈಭವದ ರಥೋತ್ಸವಕ್ಕೆ ನೆರೆಯ ಸೈದಾಪುರ, ಮಾಧ್ವಾರ, ಬಳಿಚಕ್ರ, ಕಣೇಕಲ್, ನೀಲಹಳ್ಳಿ, ಮೈಲಾಪುರ, ಕೂಡ್ಲೂರು, ಗೌಡಗೇರಾ, ನಾಗರಬಂಡಿ, ಯಲ್ಹೇರಿ, ಕಂದಕೂರು ಗ್ರಾಮಗಳು ಸೇರಿದಂತೆ ನೆರೆಯ ರಾಯಚೂರು, ಕಲಬುರಗಿ, ಇತರ ಜಿಲ್ಲೆಗಳ ಭಕ್ತರು ಮಾತ್ರವಲ್ಲದೆ ಪಕ್ಕದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಬನದೇಶ್ವರ ದರ್ಶನ ಪಡೆದು ಪುನಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.