
ಶಹಾಪುರ: ತಾಲ್ಲೂಕಿನ ಆಲ್ದಾಳ ಗ್ರಾಮಕ್ಕೆ ಹತ್ತು ದಿನದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ಜೆಸ್ಕಾಂ ಕಚೇರಿಗೆ ಮುಳ್ಳು ಬಡಿದು ಪ್ರತಿಭಟನೆ ನಡೆಸಿದರು.
‘ಬೇಸಿಗೆ ಕಾಲ ಆರಂಭವಾಗಿದೆ ಮತ್ತಷ್ಟು ಸಂಕಷ್ಟ ಎದುರಿಸುತ್ತಿದ್ದೇವೆ. ರಾತ್ರಿ ಸಮಯದಲ್ಲಿ ವಿದ್ಯುತ್ ದೀಪದ ಬೆಳಕಿನ ಭಾಗ್ಯ ನಾವು ಕಂಡಿಲ್ಲ. ಅಲ್ಲದೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಬೆಳೆದು ನಿಂತ ಬೆಳೆ ಹಾನಿಯಾಗುತ್ತಲಿದೆ. ಕುಡಿಯುವ ನೀರಿಗೂ ಪರದಾಟವಾಗಿದೆ. ಸಾಕಷ್ಟು ಬಾರಿ ಜೆಸ್ಕಾಂ ಸಿಬ್ಬಂದಿಗೆ ಮನವಿ ಮಾಡಿದರು ಸಹ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು ಆರೋಪಿಸಿದರು.
‘ವಿದ್ಯುತ್ ಪರಿವರ್ತಕ ಯಂತ್ರ (ಟಿಸಿ) ಸುಟ್ಟಿದೆ ತುಸು ಸಮಸ್ಯೆಯಾಗಿದೆ ತ್ವರಿತವಾಗಿ ದುರಸ್ತಿಗೊಳಿಸಿ ಸಾಧ್ಯವಾದಷ್ಟು ಸಮರ್ಪಕವಾಗಿ ವಿದ್ಯುತ್ ವಿತರಿಸಲಾಗುವುದು. ಇದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಸಮಸ್ಯೆ ಉಂಟಾಗಿದೆ ಗ್ರಾಹಕರು ಸಹಕರಿಸಬೇಕು’ ಎಂದು ಜೆಸ್ಕಾಂ ಎಂಜಿನಿಯರ್ ನಾಗರಾಜ ನಂದಿಕೋಲ ತಿಳಿಸಿದರು.
ಗ್ರಾಮದ ಮುಖಂಡರಾದ ವೆಂಕಟೇಶ ಮಕಾಶಿ ಆಲ್ದಾಳ, ಮಲ್ಲಣ್ಣಗೌಡ ಪಾಟೀಲ, ಸಿದ್ದಣ್ಣಗೌಡ ಶಿವನಗೌಡ, ಶ್ರೀನಿವಾಸ ನಾಯಕ, ಮಹಾದೇವಪ್ಪ ದೊರೆ, ಮಾನಯ್ಯ ದೊರೆ, ಮುದಕಪ್ಪ ಗೌಡಗೇರಿ, ಬಸವರಾಜ ದೊರೆ, ನಬಿಸಾಬ್ ಮುಲ್ಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.