ADVERTISEMENT

ಯಾದಗಿರಿ: ಸಾವಿರಾರು ಹೆಕ್ಟೇರ್‌ ಹತ್ತಿ ಫಸಲಿಗೆ ಕಂಟಕವಾದ ವರುಣ

ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ, ಮಳೆಯಿಂದ ಆತಂಕದಲ್ಲಿ ಅನ್ನದಾತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:40 IST
Last Updated 7 ನವೆಂಬರ್ 2025, 7:40 IST
ಸೈದಾಪುರ ಸಮೀಪದ ಕೊಂಡಾಪುರ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬೆಳೆದ ಹತ್ತಿ ಫಸಲು ಬಿಡಿಸಿಕೊಳ್ಳಲು ಸಾಧ್ಯವಾಗಿದೆ ಮಳೆಗೆ ತುತ್ತಾಗಿರುವುದು
ಸೈದಾಪುರ ಸಮೀಪದ ಕೊಂಡಾಪುರ ಗ್ರಾಮದ ರೈತರೊಬ್ಬರ ಹೊಲದಲ್ಲಿ ಬೆಳೆದ ಹತ್ತಿ ಫಸಲು ಬಿಡಿಸಿಕೊಳ್ಳಲು ಸಾಧ್ಯವಾಗಿದೆ ಮಳೆಗೆ ತುತ್ತಾಗಿರುವುದು   

ಸೈದಾಪುರ: ಕಳೆದೆರಡು ಮೂರು ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣವು ಕೈಗೆ ಬಂದ ಹತ್ತಿ ಫಸಲಿನ ಲಾಭ, ಬಾಯಿಗೆ ಬಾರದೆ ಮಳೆಯಲ್ಲಿ ಕೊಚ್ಚಿ ಹೋಗುತ್ತಿರುವುದು ಅನ್ನದಾತರಲ್ಲಿ ಆತಂಕ ಮೂಡಿಸಿದೆ.

ಸೈದಾಪುರ ಹೋಬಳಿಯಲ್ಲಿ ಸುಮಾರು 13,900 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದ ಮಳೆ ಸುರಿಯುತ್ತಿರುವುದು ಹತ್ತಿ ಫಸಲು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮಳೆಗೆ ಹತ್ತಿ ಗಿಡದಿಂದ ನೆಲಕ್ಕೆ ಜಾರಿ ಬೀಳುತ್ತಿದೆ. ಅಲ್ಲದೆ ಗಿಡದಲ್ಲಿ ಹತ್ತಿ ಕೊಳೆತು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಹತ್ತಿಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಜಿಲ್ಲೆಯ ಬಹುಪಾಲು ರೈತರು ವಾಣಿಜ್ಯ ಬೆಳೆ ಹತ್ತಿಯನ್ನು ನೆಚ್ಚಿಕೊಂಡಿದ್ದಾರೆ. ಆದರೆ ನಿರಂತರ ಮಳೆಯು ಹತ್ತಿ ಫಸಲಿಗೆ ಕಂಟಕವಾಗಿದೆ. 

ಕೆಲ ರೈತರು ಎಕರೆಗೆ ಇಂತಿಷ್ಟು ಹಣ ಕೊಡುವುದಾಗಿ ಹೇಳಿ ಲೀಸ್‍ಗೆ ಪಡೆದುಕೊಂಡು ಸಾಲ ಮಾಡಿ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸಿ ಹತ್ತಿ ಬಿತ್ತನೆ ಮಾಡಿದ್ದಾರೆ. ಆದರೆ ಅತಿವೃಷ್ಟಿ, ಪ್ರವಾಹ ಮತ್ತು ನಿರಂತರ ಮಳೆಯಿಂದಾಗಿ ಉತ್ತಮ ಫಸಲು ಬರಲಿಲ್ಲ. ಬಂದಿರುವ ಅಲ್ಪಸ್ವಲ್ಪ ಫಸಲು ಬಿಡಿಸಿಕೊಳ್ಳುವ ಮುನ್ನವೇ ಮತ್ತೆ ಮಳೆ ಸುರಿಯುತ್ತಿರುವುದರಿಂದ ಸಾಲ ತೀರಿಸಲು ರೈತರು ಪಡರಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಳಿಂಗರಾಯ ಅಳಲು ತೋಡಿಕೊಂಡರು.

ಕಾರ್ಮಿಕರಿಗಾಗಿ ನಿತ್ಯ ಹುಡುಕಾಟ

ಹತ್ತಿ ಕೊಯ್ಲು ಬಿಡಿಸಲು ರೈತರು ನಿತ್ಯ ಬೆಳಗಾದರೆ ಸಾಕು ಕಾರ್ಮಿಕರಿಗಾಗಿ ಹುಡುಕಾಡುವ ದಯನೀಯ ಸ್ಥಿತಿ ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗಿದೆ. ಕಾರ್ಮಿಕರ ಕೊರತೆಯಿಂದ ದೂರದ ಆಂಧ್ರಪ್ರದೇಶದ ಕೋಸಿಗಿಯಿಂದ ಬರುವ ಕಾರ್ಮಿಕರಿಗೆ ಸಕಲ ವ್ಯವಸ್ಥೆ ಹಾಗೂ ಕೆ.ಜಿಗೆ ₹13–₹15–₹16 ನೀಡಿದರೂ ಕೂಡ ಸಕಾಲಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಈ ನಡುವೆ ಮಳೆಯ ಕಾಟದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ನಮ್ಮ ಸ್ಥಿತಿ ಎಂದು ಮರಿಲಿಂಗಪ್ಪ ಬದ್ದೇಪಲ್ಲಿ ರೈತ ಎನ್ನುತ್ತಾರೆ.

ಮಾರುಕಟ್ಟೆಯಲ್ಲಿ ಹತ್ತಿಗೆ ಬೆಲೆ ಕುಸಿತ

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ಖಾಸಗಿ ಹತ್ತಿ ಖರೀದಿ ಮಳಿಗೆಗಳಲ್ಲಿ ಹತ್ತಿ ಫಸಲಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಹತ್ತಿ ಕಪ್ಪು ಬಣ್ಣಕ್ಕೆ ತಿರುಗಿದೆ ಎಂಬ ಕಾರಣಕ್ಕೆ ಕ್ವಿಂಟಲ್‍ಗೆ ₹2000 ರಿಂದ ₹ 3000 ಬೆಲೆ ಕುಸಿತ ಕಂಡಿದೆ. ಇದರಿಂದಾಗಿ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಭಾರಿ ನಿರಾಸೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.