
ಸೈದಾಪುರ: ‘ಪ್ರತಿವರ್ಷದಂತೆ ಈ ವರ್ಷ ಹಾಲುಮತ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನದ ಮೂರು ದಿನಗಳ ರಾಜಕೀಯೇತರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೀಗಾಗಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಜಿಲ್ಲಾ ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ. ವಿಶ್ವನಾಥ ಕವಡಿ ನೀಲಹಳ್ಳಿ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾಲುಮತ ಪೂಜಾರಿಗಳಿಗೆ ತರಬೇತಿ ಹಾಗೂ ಹಾಲುಮತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್‌ನಲ್ಲಿ ಜ.12, 13 ಮತ್ತು 14 ರಂದು ಹಾಲುಮತ ಪೂಜಾರಿಗಳಿಗೆ ತರಬೇತಿ ಹಾಗೂ ಹಾಲುಮತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಬೀರದೇವರು, ರೇವಣ್ಣಸಿದ್ದೇಶ್ವರ, ಮೈಲಾರಲಿಂಗೇಶ್ವರ, ಮಾಳಿಂಗರಾಯ, ಅಮೋಘಸಿದ್ದೇಶ್ವರ ದೇವಸ್ಥಾನದ ಪೂಜಾರಿಗಳಿಗೆ ಯಾವುದೇ ಪೂಜಾ ಪದ್ಧತಿ ಗೊತ್ತಿಲ್ಲದ ಕಾರಣ ಭಕ್ತರು ದೇವಸ್ಥಾನಗಳ ಒಡನಾಟ ಬಿಡುತ್ತಿದ್ದಾರೆ. ಅಲ್ಲದೆ ಬೇರೆ ದೇವಸ್ಥಾನಗಳಿಗೆ ಮಾರು ಹೋಗುತ್ತಿದ್ದಾರೆ. ಪೂಜಾರಿಗಳಿಗೆ ಪೂಜಾ ಪದ್ಧತಿ ಮತ್ತು ಮಂತ್ರಗಳನ್ನು ಕಲಿಸುವ ಉದ್ದೇಶದಿಂದ ಈ ವರ್ಷ ಮೂರು ದಿನಗಳ ಕಾಲ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯದ ಪೂಜಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಮುದಾಯದ ಮುಖಂಡರು ತಮ್ಮ ದೇವಸ್ಥಾನದ ಪೂಜಾರಿಗಳನ್ನು ಶಿಬಿರಕ್ಕೆ ಕರೆತರುವ ಸೇವೆ ಮಾಡಬೇಕು. ಅಲ್ಲದೆ ಮೂರು ದಿನಗಳ ಕಾಲ ಹಾಲುಮತ ಧರ್ಮದ ಬಗ್ಗೆ ವಿವಿಧ ದೇವರ, ಸಿದ್ಧ ಪುರುಷರು ಬಗ್ಗೆ ಸಾಹಿತ್ಯ ಸಮಾರಂಭವನ್ನು ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಹಲವು ಪೂಜ್ಯರು, ಸಂಶೋಧಕರು, ಉಪನ್ಯಾಸಕರು, ಕಲಾವಿದರು, ಆಗಮಿಸುತ್ತಿದ್ದಾರೆ. ಹೀಗಾಗಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡರಾದ ಚಂದ್ರಶೇಖರ ವಾರಾದ, ಭೀಮಶಪ್ಪ ಜೇಗರ್, ವಲಯಾಧ್ಯಕ್ಷ ರವಿ ಕುಮಾರ್ ಕಡೇಚೂರು , ಸಿದ್ದುಪೂಜಾರಿ ಬದ್ದೇಪಲ್ಲಿ, ಪರಮೇಶ್ ವಾರದ, ವಿಜಯ ಕಂದಳ್ಳಿ , ಭೀಮಪ್ಪ ಬಾಲಚೇಡ, ಸಿದ್ರಾಮಪ್ಪ ಜೇಗರ, ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.