
ಸೈದಾಪುರ: ಆರೋಗ್ಯ, ಶೈಕ್ಷಣಿಕ, ಕೈಗಾರಿಕೆ, ದೈನಂದಿನ ಪ್ರಮುಖ ವ್ಯಾಪಾರ ವಹಿವಾಟು ಕೇಂದ್ರವಾಗಿರುವ ಸೈದಾಪುರಕ್ಕೆ ನಿತ್ಯ ವಿದ್ಯಾರ್ಥಿಗಳು, ನೌಕರಸ್ಥರು, ರೈತರು, ರೋಗಿಗಳು, ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಆದರೇ ಪಟ್ಟಣದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲದಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಸೈದಾಪುರ ಹೋಬಳಿಯು ಸುಮಾರು 25 ರಿಂದ 30 ಹಳ್ಳಿಗಳಿಗೆ ಜೊತೆಗೆ ರಾಯಚೂರು, ಯಾದಗಿರಿ, ಗುರುಮಠಕಲ್ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ರಸ್ತೆ, ರೈಲು ಸಾರಿಗೆ ಮೂಲಕ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಇಲ್ಲಿ ಆಗಮಿಸುವ ಹಾಗೂ ಬೇರೆಡೆ ಹೋಗುವ ಪ್ರಯಾಣಿಕರು ಶೌಚಕ್ಕಾಗಿ ಜನಿನಬಿಡ ಸ್ಥಳಗಳಲ್ಲಿ ಮರಗಿಡ, ಪೊದೆ, ಬಯಲು ಜಾಗದ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ.
ವ್ಯಾಪಾರ ವಹಿವಾಟಿನ ಕೇಂದ್ರ ಬಿಂದು: ಕೃಷಿ, ಸಂತೆ, ಹಬ್ಬ, ಸಭೆ ಸಮಾರಂಭ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಬೇಕಾದ ಅಗತ್ಯ ಸಾಮಾಗ್ರಿಗಳ ಖರೀದಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಜನರ ಪಟ್ಟಣಕ್ಕೆ ಬರುತ್ತಾರೆ. ಆದರೆ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ವ್ಯವಸ್ಥೆಯೇ ಮರಿಚಿಕೆಯಾಗಿದೆ.
ಬಸ್ ಮತ್ತು ರೈಲು ನಿಲ್ದಾಣದಲ್ಲಿರುವ ಶೌಚಾಲಯಗಳಿಗೆ ಬೀಗ: ನಿತ್ಯ ಹತ್ತಾರು ಬಸ್, ರೈಲುಗಳು ಸಂಚರಿಸುವ ಸ್ಥಳಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ಸದಾ ಕಾಲ ಬೀಗ ಹಾಕಿರುವುದು ದುರದೃಷ್ಟಕರದ ಸಂಗತಿಯಾಗಿದೆ. ಇದರಿಂದ ಪ್ರಯಾಣಿಕರಿಗೆ ತುರ್ತಾಗಿ ದೈನಂದಿನ ಕರ್ಮಚಾರಿಗಳ ವಿಸರ್ಜನೆಗೆ ಬಯಲು ಪ್ರದೇಶವನ್ನೆ ಅವಲಂಬಿಸುವಂತಾಗಿದೆ.
ಇತ್ತೀಚೆಗೆ ಪಟ್ಟಣವು ತನ್ನ ಹೃದಯ ಭಾಗದಿಂದ ಸುಮಾರು 1 ಕಿ.ಮೀ ದೂರದವರೆಗೆ ಜನಭರಿತ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದರಿಂದ ಶೌಚಕ್ಕೆ ಎಲ್ಲಿಯೂ ಸ್ಥಳವಕಾಶವಿಲ್ಲದಂತಾಗಿದೆ. ಇಂತಹ ದಯನೀಯ ಪರಸ್ಥಿತಿಯಲ್ಲಿ ಮಹಿಳಾ ಪ್ರಯಾಣಿಕರು ಎದುರಿಸುವ ಸಂಕಷ್ಟ ಯಾರಿಗೂ ಹೇಳತೀರದಾಗಿದೆ. ನಿರ್ವಹಣೆಯ ಸಮಸ್ಯೆಯಿಂದಾಗಿ ಇದ್ದು ಇಲ್ಲದಂತಾಗಿರುವ ಶೌಚಾಲಯಗಳಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ನಿತ್ಯ ಸಾವಿರಾರು ಜನರು ಓಡಾಡುವ ಕೇಂದ್ರ ಸ್ಥಾನದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ನಾಚಿಕೆಯ ಸಂಗತಿ. ಸಂಬಂಧಿಸಿದ ಅಧಿಕಾರಿ ವರ್ಗ ಕಣ್ಣುಮುಚ್ಚಿ ಕುಳಿತಿರುವುದು ಜಾಣ ಕುರುಡುತನಕ್ಕೆ ಉದಾಹರಣೆ–ವಿಜಯ ಕಂದಳ್ಳಿ, ಸ್ಥಳೀಯ ನಿವಾಸಿ
ಇದ್ದು ಇಲ್ಲದಂತಿರುವ ಸಾರ್ವಜನಿಕರ ಶೌಚಾಲಯಗಳನ್ನು ಬಳಕೆಗೆ ಅವಕಾಶ ಮಾಡದಿರುವುದು ಹದಗೆಡುವ ಆರೋಗ್ಯಕ್ಕೆ ದಾರಿ ಮಾಡಿಕೊಟ್ಟಾಂತಾಗಿದೆ–ಭೀಮಣ್ಣ ಮಡಿವಾಳಕರ್, ಸ್ಥಳೀಯ ನಿವಾಸಿ
ಸಾರ್ವಜನಿಕ ಶೌಚಾಲಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜೊತೆಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು–ವಿಜಯಲಕ್ಷ್ಮೀ ಪಾಟೀಲ, ಪಿಡಿಒ ಸೈದಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.