
ಯಾದಗಿರಿ: ಕಾನೂನು, ಕಾಯ್ದೆಗಳ ಬೇಲಿ ಇದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ತಹಬದಿಗೆ ಬರುತ್ತಿಲ್ಲ. ನೊಂದ ಮಹಿಳೆಯರ ಕಣ್ಣೀರೊರೆಸಿ, ಅವರಿಗೆ ಆತ್ಮಸ್ಥೈರ್ಯ ತುಂಬಿ, ಕಾನೂನಿನ ನೆರವು ನೀಡುವ ‘ಸಖಿ ಒನ್ ಸ್ಟಾಪ್ ಸೆಂಟರ್‘ಗೆ ಶೋಷಿತ ಮಹಿಳೆಯರಿಂದ ನೊವಿನ ಕರೆಗಳು ಬರುತ್ತಲೇ ಇವೆ.
ದೆಹಲಿಯ ನಿರ್ಭಯ ಪ್ರಕರಣದ ನಂತರ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಆರಂಭಿಸಿತ್ತು. ಈ ಬಳಿಕ ಇದನ್ನು ಗೆಳತಿ ಚಿಕಿತ್ಸಾ ಘಟಕವಾಗಿ ಬದಲಾಯಿತು. 2019ರಲ್ಲಿ ಕೇಂದ್ರ ಸರ್ಕಾರ ತನ್ನ ಸುರ್ಪದಿಗೆ ತೆಗೆದುಕೊಂಡು ಒಂದೇ ಸೂರಿನಡಿ ವೈದ್ಯರು, ಪೊಲೀಸರು, ಕಾನೂನಿನ ನೆರವು ಒದಗಿಸಲು ‘ಸಖಿ ಒನ್ ಸ್ಟಾಪ್ ಸೆಂಟರ್’ ಎಂದು ನಾಮಕರಣ ಮಾಡಿತು.
ಕಳೆದ ಆರು ವರ್ಷಗಳಲ್ಲಿ (2019ರ ನವೆಂಬರ್‌ನಿಂದ 2025ರ ಅಕ್ಟೋಬರ್ ವರೆಗೆ) ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ಕಲಹ, ಬಹುಪತ್ನಿತ್ವ, ಬೆಂಕಿ ಹಚ್ಚಿ ಗಾಯ, ಅಪಹರಣ, ಬಾಲ್ಯವಿವಾಹ ಸಂಬಂಧಿಸಿದಂತೆ ಜಿಲ್ಲಾ ‘ಸಖಿ’ ಕೇಂದ್ರವು 676 ಮಹಿಳೆಯರ ರಕ್ಷಣೆ ಮಾಡಿದೆ. ಕಾನೂನಿನ ಸಲಹೆ ನೀಡಿ, ಆಪ್ತ ಸಮಾಲೋಚನೆಯೂ ನಡೆಸಿದೆ.
6 ವರ್ಷಗಳ ಅವಧಿಯಲ್ಲಿ 223 ಕೌಟುಂಬಿಕ ಕಲಹ, 83 ಅತ್ಯಾಚಾರ, 10 ಲೈಂಗಿಕ ದೌರ್ಜನ್ಯ, 203 ಬಾಲಕಿಯರಿಗೆ ಲೈಂಗಿಕ ಕಿರುಕುಳ, 38 ಬಾಲ್ಯವಿವಾಹ, 51 ನಾಪತ್ತೆ/ ಅಪಹರಣ, ಇಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬಲಿ, ಒಬ್ಬರಿಗೆ ಬೆಂಕಿ ಹಚ್ಚಿದ್ದು ಹಾಗೂ 65 ಇತರೆ ಪ್ರಕರಣಗಳು ಸೇರಿ 676 ಮಹಿಳೆಯರು ‘ಸಖಿ’ ಕೇಂದ್ರದ ಕದ ತಟ್ಟಿದ್ದಾರೆ.
2025ರ ಏಳು ತಿಂಗಳಲ್ಲಿ ಒಟ್ಟು 115 ದೂರುಗಳು ಬಂದಿವೆ. ಅವುಗಳಲ್ಲಿ 115 ಕೌಟುಂಬಿಕ ಕಲಹ, 12 ಅತ್ಯಾಚಾರ, 2 ಲೈಂಗಿಕ ಕಿರುಕುಳ, 30 ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ, 17 ಬಾಲ್ಯವಿವಾಹ, ಐದು ಅಪಹರಣ/ ನಾಪತ್ತೆ ಹಾಗೂ 12 ಇತರೆ ಪ್ರಕರಣಗಳಿವೆ
ಶಕ್ತಿ ಸಧನ ಆಸರೆ: ‘ನೋಂದ ನಾರಿಯರಿಗೆ ಆಶ್ರಯ, ಆಹಾರ, ಬಟ್ಟೆ, ಆರೋಗ್ಯ ಸೇವೆ, ಕಾನೂನಿನ ಸಲಹೆ ಜೊತೆಗೆ ಅವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಶಕ್ತರಾಗಿಸಲು ಶಕ್ತಿ ಸಧನ ಯೋಜನೆ ನೆರವಾಗುತ್ತಿದೆ’ ಎನ್ನುತ್ತಾರೆ ಶಕ್ತಿ ಜಿಲ್ಲಾ ಮಿಷನ್ ಸಂಯೋಜಕ ಯಲ್ಲಪ್ಪ ಕೆ.
‘ಕಳೆದ ಏಳು ತಿಂಗಳಲ್ಲಿ ಮಕ್ಕಳು ಸೇರಿ 127 ಮಹಿಳೆಯರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ. 105 ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿದ್ದು, ಪ್ರಸ್ತುತ 21 ಮಹಿಳೆಯರು ಉಳಿದುಕೊಂಡಿದ್ದಾರೆ. ಅವರಲ್ಲಿ 93 ಮಹಿಳೆಯರಿಗೆ ಕೌಶಲ ತರಬೇತಿಯೂ ನೀಡಲಾಗಿದೆ’ ಎಂದರು.
‘ಸ್ಥಳೀಯ ಸ್ಥಂಸ್ಥೆಗಳ ಪ್ರತಿನಿಧಿಗಳೂ ಜವಾಬ್ದಾರರಾಗಲಿ’
‘ಶಿಕ್ಷಣದ ಅರಿವು ಮೂಡಿದಂತೆ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ನಡೆಯುತ್ತಿರುವ ಪ್ರಕರಣಗಳಿಗೆ ಹೋಲಿಸಿದರೆ ಅವುಗಳ ಸಂಖ್ಯೆ ಕಡಿಮೆಯೇ ಇದೆ. ಗ್ರಾಮ ಪಂಚಾಯಿತಿಯಂತಹ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಮಹಿಳೆಯರ ರಕ್ಷಣೆಯಲ್ಲಿ ಜವಾಬ್ದಾರರನ್ನಾಗಿ ಮಾಡಿದರೆ ದೌರ್ಜನ್ಯಗಳನ್ನು ಇನ್ನಷ್ಟು ನಿಯಂತ್ರಣಕ್ಕೆ ತರಬಹುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಾ.ಪಂ. ಮಟ್ಟದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ಸದಸ್ಯರು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಸಕ್ರಿಯವಾಗಿ ಕೆಲಸ ಮಾಡಬೇಕು. ಪಂಚಾಯಿತಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಎಷ್ಟು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲು ನೆರವಾದರೆ ಇನ್ನಷ್ಟು ಅನುಕೂಲ ಆಗುತ್ತದೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.