ADVERTISEMENT

ಕಡಿತ ಮಾಡಿರುವ ಅನುದಾನ ಕೊಡಿ: ಶರಣಗೌಡ

ಜಿಲ್ಲೆಗೆ ಜಲಧಾರೆ ಯೋಜನೆ ಮಂಜೂರು ಮಾಡಿ, ಬಜೆಟ್‌ನಲ್ಲಿ ಕೆರೆ ತುಂಬಲು ಅನುದಾನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:28 IST
Last Updated 4 ಮಾರ್ಚ್ 2021, 4:28 IST
ಶರಣಗೌಡ ಕಂದಕೂರ
ಶರಣಗೌಡ ಕಂದಕೂರ   

ಯಾದಗಿರಿ: ‘ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಜಲಧಾರೆ ಯೋಜನೆ ಮರು ಮಂಜೂರು ಮಾಡಬೇಕು. ಖಾಸಾಮಠದ ಅನುದಾನ, ತಡೆ ಹಿಡಿದಿದ್ದ ವಿವಿಧ ಕಾಮಗಾರಿಗಳ ಅನುದಾನ ವಾಪಸ್‌ ನೀಡಬೇಕು’ ಎಂದು ಜೆಡಿಎಸ್‌ ರಾಜ್ಯ ಮುಖಂಡ ಶರಣಗೌಡ ಕಂದಕೂರ ಆಗ್ರಹಿಸಿದರು.

‘ಪಕ್ಕದ ರಾಯಚೂರು ಜಿಲ್ಲೆಯಲ್ಲಿ ಜಲಧಾರೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಇಲ್ಲಿಗೆ ಮಂಜೂರು ಆಗಿರುವುದನ್ನು ತಡೆ ಹಿಡಿಯಲಾಗಿದೆ. ಹೀಗಾಗಿ ಜಿಲ್ಲೆಗೂ ಆ ಯೋಜನೆ ವಿಸ್ತರಿಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಒತ್ತಾಯಿಸಿದರು.

‘2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಬಜೆಟ್‍ನಲ್ಲಿ ಗುರುಮಠಕಲ್‌ ಕ್ಷೇತ್ರದ ಸೈದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ 22 ಕೆರೆ ತುಂಬಿಸುವ ಯೋಜನೆಗೆ ₹150 ಕೋಟಿ ನೀಡಿದ್ದರು. ಬಿ.ಎಸ್‌.ಯಡಿಯೂರಪ್ಪ ಅವರ ಸರ್ಕಾರ ತಡೆ ಹಿಡಿದಿದೆ. ಈಗ ನಂಜುಂಡಪ್ಪ ವರದಿ ಪ್ರಕಾರ ಕೆಬಿಜೆಎನ್‌ಎಲ್‌ನಿಂದ ಸಮಗ್ರ ಯೋಜನಾ ವರದಿ(ಡಿಪಿಆರ್) ಅನುಮೋದನೆಗೊಂಡಿದೆ. ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ನಾವಿ ಆಶಾವಾದಿಗಳು’ ಎಂದರು.

ADVERTISEMENT

‘ಗುರುಮಠಕಲ್‌ನಲ್ಲಿ ಹೌಸಿಂಗ್‌ ಬೋರ್ಡ್‌ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲು ಟೆಂಡರ್‌ ಕರೆಯಲಾಗಿದ್ದು, 1,032 ಅರ್ಜಿಗಳು ಬಂದಿವೆ. ಗುರುಮಠಕಲ್‌ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುವುದು ನಮ್ಮ ಕನಸು. 33 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಲಾ 20 ಮನೆಗಳನ್ನು ಮಂಜೂರು ಮಾಡಲಾಗುವುದು. ಅಪಪ್ರಚಾರದ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿಗೆ ಅನುದಾನ ಬಂದರೆ ಸಾಕು’ ಎಂದರು.

‘ಜಲ ಜೀವನ್ ಮಿಷನ್‌ ಯೋಜನೆಗೆ 2020-21ರಲ್ಲಿ ಗುರುಮಠಕಲ್ ಮತಕ್ಷೇತ್ರದಲ್ಲಿ 50 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.ಇದೇ ಯೋಜನೆ ಅಡಿ ಭೀಮಾ ನದಿಯಿಂದ ಯರಗೋಳಕ್ಕೆ ನೀರು ಸರಬರಾಜು ಮಾಡಲು ಎರಡೂವರೆ ಕೋಟಿ ಅನುದಾನ ನೀಡಲಾಗಿದೆ. ಸನ್ನತಿ ಏತನೀರಾವರಿ ಯೋಜನೆಯಿಂದ 1,300 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ’ ಎಂದು ಹೇಳಿದರು.

‘ಮಲ್ಲಿಕಾರ್ಜುನ ಖರ್ಗೆ ಸಂಸದರಾಗಿದ್ದ ವೇಳೆ ಕ್ಷೇತ್ರದ ರಸ್ತೆಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿಸಿದ್ದ ₹135 ಕೋಟಿ ಅನುದಾನ ಮುಖ್ಯಮಂತ್ರಿ ತಡೆಹಿಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರು ಸಿಎಂ ಮನವೊಲಿಸಿ ಅನುದಾನ ಬಿಡುಗಡೆಗೊಳಿಸಿದರೆ ಅದನ್ನು ಸ್ವಾಗತಿಸುತ್ತೇನೆ. ರಾಜಕೀಯ ಮಾಡುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿಯೆ ಮುಖ್ಯವಾಗಿದೆ’ ಎಂದರು.

‘ಸಿಡಿ ಮೇಲೆ ನಿಂತ ಸರ್ಕಾರ’
‘ರಾಜ್ಯ ಬಿಜೆಪಿ ಸರ್ಕಾರ ಸಿಡಿ ಮೇಲೆ ನಿಂತಿದೆ’ ಎಂದು ರಾಜ್ಯ ಜೆಡಿಎಸ್‌ ಮುಖಂಡ ಶರಣಗೌಡ ಕಂದಕೂರ ವ್ಯಂಗ್ಯವಾಡಿದರು.

‘ಈಗ ಒಬ್ಬರ ಸಿಡಿ ಬಯಲಿಗೆ ಬಂದಿದೆ. ಮುಂದೆ ಇನ್ನೆಷ್ಟು ಸಿಡಿ ಬರಲಿವೆ ಎನ್ನುವುದು ಗೊತ್ತಿಲ್ಲ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಸಿಡಿ ವಿಷಯವಾಗಿ ಸರ್ಕಾರಕ್ಕೆ ಟೀಕಿಸಿದ್ದರು. ಸಿಡಿ ಇಟ್ಟುಕೊಂಡೆ ಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಮುಂದೆಯೂ ಎಷ್ಟು ಸಿಡಿ ಹೊರಬರಲಿವೆ ಎಂದು ಗೊತ್ತಿಲ್ಲ. ಒಟ್ಟಾರೆ ಈ ಸರ್ಕಾರ ಸಿಡಿ ಮೇಲೆ ನಿಂತಿದೆ’ ಎಂದರು.

‘ರಮೇಶ ಜಾರಕಿಹೊಳಿ ನೈತಿಕಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ. ಇದು ಸ್ವಾಗತರ್ಹ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಆಗ ಮಾತ್ರ ಇದರ ಸತ್ಯಾಸತ್ಯತೆ ಬಯಲಿಗೆ ಬರುತ್ತದೆ. ಯುವ ರಾಜಕರಣಗಳಿಗೆ ಇಂಥ ಘಟನೆಗಳಿಂದ ಮುಜುಗರವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.