ADVERTISEMENT

ಶಹಾಪುರ: ಗೊಂದಲದ ಗೂಡಾದ ಜಾತಿ ಪ್ರಮಾಣ ಪತ್ರ

ವಿವಾದ ಬಗೆಹರಿಸದ ಜಿಲ್ಲಾಡಳಿತ: ಜನರ ಆಕ್ರೋಶ ಇನ್ನಷ್ಟು ತೀವ್ರ

ಟಿ.ನಾಗೇಂದ್ರ
Published 26 ನವೆಂಬರ್ 2022, 4:29 IST
Last Updated 26 ನವೆಂಬರ್ 2022, 4:29 IST

ಶಹಾಪುರ: ಎಸ್‌ಸಿ, ಎಸ್‌ಟಿ ಜಾತಿ ಪ್ರಮಾಣ ಪತ್ರ ವಿತರಣೆ ದಿನೇ ದಿನೇ ಕಗ್ಗಂಟಾಗುತ್ತಿದೆ. ಮೂವರ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಅಧಿಕಾರಿಗಳ ವಿರುದ್ಧ ಆಕ್ರೋಶ ಹೆಚ್ಚಾಗಿದೆ.

ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ್ ಹಾಗೂ ಸಿಬ್ಬಂದಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಜಾತಿ ಪ್ರಮಾಣ ಪತ್ರ ವಿತರಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಆರಂಭದಲ್ಲಿ ಕೆಲ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ. ಆದರೆ, ಅನ್ಯ ಸಮುದಾಯದವರ ಒತ್ತಡ ಹಾಗೂ ಬೀದಿಗಿಳಿದು ಪ್ರತಿಭಟನೆ ಮಾಡಿದ ನಂತರ ರದ್ದುಗೊಳಿಸುವಂತೆ ಉಪ ವಿಭಾಗಾಧಿಕಾರಿಗೆ ಮನವಿ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಪೂರ್ವಾಪರ ವಿಚಾರಣೆ ಮಾಡಿ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕರ ವರದಿ ಆಧಾರದ ಮೇಲೆ ಸರ್ಕಾರದ ಮಾರ್ಗಸೂಚಿಯಂತೆ ಎಸ್‌ಸಿ, ಎಸ್‌ಟಿ ಪ್ರಮಾಣ ಪತ್ರ ನೀಡುವ ಅಧಿಕಾರ ಗ್ರೇಡ್-2 ತಹಶೀಲ್ದಾರ್ ಅವರಿಗೆ ಇದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು.

ಆದರೆ ತಾಲ್ಲೂಕಿನಲ್ಲಿ ಬೇಡ ಜಂಗಮದ ಹೆಸರಿನಲ್ಲಿ ಎಸ್‌ಸಿ ಪ್ರಮಾಣ ಪತ್ರ ವಿತರಣೆ ಹಾಗೂ ನಾಯ್ಕಡ್ ಹೆಸರಿನಲ್ಲಿ ಹಿಂದುಳಿದ ಜಾತಿಯ ತಳವಾರ ಜಾತಿಯವರಿಗೆ ಎಸ್‌ಟಿ ಪ್ರಮಾಣ ಪತ್ರ ವಿತರಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ತನಿಖೆಗೆ ಮುಂದಾಗುತ್ತಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ವಿತರಣೆಗೆ ಉನ್ನತಾಧಿಕಾರಿಗಳ ಕುಮ್ಮಕ್ಕು ಇದೆ ಎಂಬ ಭಾವನೆ ಮೂಡಿದೆ ಎಂದರು ಪರಿಶಿಷ್ಟ ಜಾತಿಯ ಮುಖಂಡ ಮರೆಪ್ಪ ಜಾಲಿಬೆಂಚಿ .

ಉದ್ದೇಶ ಪೂರ್ವಕವಾಗಿ ಗ್ರೇಡ್-2 ತಹಶೀಲ್ದಾರ್ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸಿದ್ದರಿಂದ ಪರಿಶಿಷ್ಟ ಸಮುದಾಯ ದವರು ಪ್ರತಿಭಟನೆ ನಡೆಸುವ ದುಸ್ಥಿತಿ ನಿರ್ಮಾಣ ಮಾಡಿರುವುದು ಬೇಸರ ಮೂಡಿಸಿದೆ ಎಂದು ಮುಖಂಡರು ತಿಳಿಸಿದರು.

ನಕಲಿ ಪ್ರಮಾಣ ಪತ್ರ ನೀಡಿದ ಅಧಿಕಾರಿ ಹಾಗೂ ತಪ್ಪು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದವರ ವಿರುದ್ಧ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಹಣಮಂತರಾಯ ಟೋಕಾಪುರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.