ADVERTISEMENT

ವಿಶೇಷಾಧಿಕಾರಿ ನೇಮಕಾತಿಗೆ ಶಿಫಾರಸು

ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್‌ನ ಹಣ ದುರ್ಬಳಕೆ; ನಾಲ್ವರು ಸಿಬ್ಬಂದಿ ವಿರುದ್ಧ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2022, 4:11 IST
Last Updated 6 ಮೇ 2022, 4:11 IST
ಶಹಾಪುರ ನಗರದ ಕೃಷ್ಣ ಪಟ್ಟಣ ಸಹಕಾರ ಬ್ಯಾಂಕಿನ ಕಟ್ಟಡ
ಶಹಾಪುರ ನಗರದ ಕೃಷ್ಣ ಪಟ್ಟಣ ಸಹಕಾರ ಬ್ಯಾಂಕಿನ ಕಟ್ಟಡ   

ಶಹಾಪುರ: ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯು ಕಾನೂನು ಬಾಹಿರವಾಗಿ ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಿದೆ. ಅಲ್ಲದೇ, ಮಂಜೂರಾತಿ ಇಲ್ಲದೆ ಬ್ಯಾಂಕ್‌ನ ಹಣವನ್ನು ಬೇನಾಮಿ ಸಾಲಗಳಾಗಿ ಸೃಷ್ಟಿಸಿ, ಅವ್ಯವಹಾರ ಮಾಡಿರುವುದು ವಿಚಾರಣೆಯಿಂದ ಬಯಲಾಗಿದೆ.

ಸಾರ್ವಜನಿಕರಿಗೆ, ಠೇವಣಿದಾರರಿಗೆ, ಷೇರುದಾರರಿಗೆ ವಂಚನೆ ಆಗಬಾರದು ಉದ್ದೇಶದಿಂದ ತಕ್ಷಣವೇ ಆಡಳಿತ ಮಂಡಳಿಯ ಸ್ಥಾನದಲ್ಲಿ ವಿಶೇಷಾಧಿಕಾರಿ ನೇಮಿಸುವಂತೆ ಯಾದಗಿರಿ ಸಹಕಾರ ಸಂಘಗಳ ಉಪ ನಿಬಂಧಕ ಚಿದಾನಂದ ನಿಂಬಾಳ ಅವರು ಏಪ್ರಿಲ್ 29ರಂದು ರಾಜ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಸಮಗ್ರ ವರದಿ ನೀಡಿದ್ದಾರೆ.

‘ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಏಪ್ರಿಲ್ 4ರಂದು ಬ್ಯಾಂಕ್‌ಗೆ ಭೇಟಿ ನೀಡಿದಾಗ ಬ್ಯಾಂಕ್‌ನ ಅವ್ಯವಹಾರ ಗಮನಕ್ಕೆ ಬಂತು. ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ, ವಾಸ್ತವ ವರದಿ ಮಾಡಲು ಸೂಚಿಸಿದೆ. ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಇತರ ಸಿಬ್ಬಂದಿ ಸಲ್ಲಿಸಿದ ವರದಿ ಆಧಾರದ ವಿಶೇಷಾಧಿಕಾರಿ ನೇಮಿಸುವಂತೆ ಶಿಫಾರಸು ಮಾಡಲಾಗಿದೆ’ ಎಂದು ಯಾದಗಿರಿ ಸಹಕಾರ ಸಂಘಗಳ ಉಪ ನಿಬಂಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಬ್ಯಾಂಕ್‌ನಲ್ಲಿ ಒಟ್ಟು 7 ಸಿಬ್ಬಂದಿ ಇದ್ದಾರೆ. ಅದರಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ಚೆನ್ನಬಸವ ಬೆನಕಾ, ಲೆಕ್ಕಿಗ ಗುರುಲಿಂಗಪ್ಪ ಪಾಟೀಲ, ಹಿರಿಯ ಸಹಾಯಕ ಭೀಮಸಿಂಗ್ ರಜಪೂತ, ಕಿರಿಯ ಸಹಾಯಕ ವೆಂಕಪ್ಪ ಕರಣಗಿ ಬ್ಯಾಂಕ್‌ನ ನಿಧಿಗಳನ್ನು ಸ್ವಂತಕ್ಕೆ ಬಳಸಿ ವಂಚಿಸಿದ್ದು, ಅವರನ್ನು ದುರ್ನಡತೆ ಹಾಗೂ ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ’ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಈ ನಾಲ್ವರು ಸಿಬ್ಬಂದಿ ₹4.19 ಕೋಟಿ ಹಣ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸಂಬಂಧಿಕರ ಹೆಸರಿನಲ್ಲಿ ಸಾಲ ಖಾತೆಗಳನ್ನು ಸೃಷ್ಟಿಸಿದ್ದಾರೆ. ಮೂವರು ನಿರ್ದೇಶಕರು ಸತತ ಮೂರು ಆಡಳಿತ ಮಂಡಳಿ ಸಭೆಗೆ ಗೈರು ಆಗಿದ್ದಾರೆ. ಹೊಸದಾಗಿ ನ್ಯಾಯವಾದಿ ರಾಯಣ್ಣ ಹೊನ್ನಾರಡ್ಡಿ ಅವರನ್ನು ಆಡಳಿತ ಮಂಡಳಿ ಸಭೆಗೆ ಹಾಜರಿಪಡಿಸಿಕೊಂಡು ಹಾಜರಾತಿಯಲ್ಲಿ ‌ಸಹಿ ಪಡೆದಿರುತ್ತಾರೆ. ಇದನ್ನು ಗಮನಿಸಿದರೆ ಬ್ಯಾಂಕ್‌ನಲ್ಲಿ ಅನುಮಾನಾಸ್ಪದ ವ್ಯವಹಾರಗಳು ನಡೆದಿರುವುದು ದೃಢಪಟ್ಟಿವೆ’ ಎಂದು ವರದಿಯಲ್ಲಿ ನಮೂದಿಸಿದ್ದಾರೆ.

ಷೇರುದಾರರು ಮತ್ತು ಠೇವಣಿದಾರರ ಭದ್ರತೆಗಾಗಿ ಆಡಳಿತ ಮಂಡಳಿಯ ಸ್ಥಾನದಲ್ಲಿ ಉಪ ವಿಭಾಗಾಧಿಕಾರಿ ಅವರನ್ನು ವಿಶೇಷಾಧಿಕಾರಿ ನೇಮಕ ಮಾಡಲು ಮನವಿ ವರದಿಯಲ್ಲಿ ಮನವಿ ಮಾಡಿದ್ದಾರೆ.

‘ಬ್ಯಾಂಕ್ ಅನ್ನು ತಕ್ಷಣ ಸೂಪರ್‌ಸೀಡ್ ಮಾಡಿ’

ಶಹಾಪುರ: ‘ಸಹಕಾರ ತತ್ವದಡಿ 26 ವರ್ಷದ ಹಿಂದೆ ಸ್ಥಾಪಿತ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಅಕ್ರಮವಾದ ಆರೋಪ ಕೇಳಿ ಬಂದಿದೆ. ಬ್ಯಾಂಕ್‌ನ ವಹಿವಾಟು ₹36 ಕೋಟಿ ಆಗಿದ್ದು, ಅದರಲ್ಲಿ ₹12 ಕೋಟಿ ಹಣ ದುರ್ಬಳಕೆ ಆಗಿದೆ. ಬ್ಯಾಂಕ್‌ನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಶಾಮೀಲಾಗಿ 4,238 ಷೇರುದಾರರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಹೋರಾಟ ಮಾಡಿದರ ಫಲವಾಗಿ ಬ್ಯಾಂಕ್‌ನ ಅಕ್ರಮ ಬಯಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಅರುಣಿ ಅರೋಪಿಸಿದರು.

ನಗರದ ಜಯಾ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಬ್ಯಾಂಕ್‌ ಅಕ್ರಮ ಆಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಯಾದಗಿರಿ ಸಹಕಾರ ಸಂಘಗಳ ಉಪ ನಿಬಂಧಕರು ಸಮಗ್ರ ವರದಿಯನ್ನು ರಾಜ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರಿಗ ಸಲ್ಲಿಸಿದ್ದಾರೆ. ತಪ್ಪಿತಸ್ಥ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಆಸ್ತಿಯನ್ನು ತಕ್ಷಣ ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಬ್ಯಾಂಕ್‌ನ ಆಡಳಿತ ಮಂಡಳಿ ಸೂಪರ್‌ಸೀಡ್ ಮಾಡದಿದ್ದರೆ ಇನ್ನಷ್ಟು ಹಣ ದುರ್ಬಳಕೆಯಾಗುವ ಸಾಧ್ಯತೆ ಇದೆ. ಸರ್ಕಾರ ಮೀನಮೇಷ ಎಣಿಸದೆ ಸಾರ್ವಜನಿಕರ ಹಿತದೃಷ್ಟಿಯಿಂದ ದಿಟ್ಟ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಚಂದ್ರಶೇಖರ ಕುಂಬಾರ ಯಾಳಗಿ ಇದ್ದರು.

* ಆಡಳಿತ ಮಂಡಳಿಯ ಸ್ಥಾನದಲ್ಲಿ ವಿಶೇಷಾಧಿಕಾರಿ ನೇಮಕಾತಿ ಮಾಡುವ ಬಗ್ಗೆ ನಮಗೆ ಮಾಹಿತಿ ಗೊತ್ತಿಲ್ಲ. ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಎಂದಿನಂತೆ ಬ್ಯಾಂಕಿನವಹಿವಾಟು ನಡೆದಿದೆ. ಆಡಳಿತ ಮಂಡಳಿಯಿಂದ ಹಣ ದುರ್ಬಳಕೆ ಎಂಬುವುದು ಸತ್ಯಕ್ಕೆ ದೂರವಾದ ಸಂಗತಿ.

– ಬಸವರಾಜ ಜಿ.ಹಿರೇಮಠ, ಅಧ್ಯಕ್ಷ, ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.