ಗೊರೆನೂರು(ಸೈದಾಪುರ): ಗುಣಮಟ್ಟದ ಹತ್ತಿ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಿ ಮತ್ತು ಕಡ್ಡಾಯವಾಗಿ ರಶೀದಿ ಪಡೆಯಿರಿ ಎಂದು ಕೃಷಿ ಇಲಾಖೆಯ ನಿರ್ದೇಶಕ ರಾಜಕುಮಾರ ರೈತರಿಗೆ ಸಲಹೆ ನೀಡಿದರು.
ಕೊಂಕಲ್ ಹೋಬಳಿಯ ತೆಲಂಗಾಣ ಗಡಿ ಗ್ರಾಮಗಳಾದ ಕುಂಟಿಮರಿ ಮತ್ತು ಗೊರೆನೂರು ಗ್ರಾಮಗಳಲ್ಲಿ ಉತ್ತಮ ಗುಣಮಟ್ಟದ ಹತ್ತಿ ಬಿತ್ತನೆ ಬೀಜಗಳ ಆಯ್ಕೆ ಮತ್ತು ಹತ್ತಿ ಬೀಜಗಳನ್ನು ಖರೀದಿಸುವಾಗ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದರು.
ಬಿತ್ತನೆಯ ಅವಸರದಲ್ಲಿ ಹಾಗೂ ಕಡಿಮೆ ಬೆಲೆಗೆ ದೊರೆಯುವ ಬೀಜ ಖರೀದಿಸಿ ಮೋಸ ಹೋಗಬೇಡಿ. ಸುಳ್ಳು ಜಾಹಿರಾತು ನಂಬಬೇಡಿ. ನೀವು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸಿದ ನಂತರ ಅಧಿಕೃತ ರಸೀದಿಯನ್ನು ಅಂಗಡಿ ಮಾಲಕರಿಂದ ಪಡೆಯುವುದು ಮರೆಯಬೇಡಿ. ಅನಧಿಕೃತ ವ್ಯಕ್ತಿಗಳು ಬೀಜ ಮಾರಾಟ ಮಾಡಿದರೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿ. ಭತ್ತ ಕಟಾವು ನಂತರ ಭತ್ತದ ಹುಲ್ಲನ್ನು ಸುಡಬೇಡಿ ಮಣ್ಣಿನ ಫಲವತ್ತೆ ಕಾಪಾಡಿ ಎಂದು ಹೇಳಿದರು.
ಕೊಂಕಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹಿಪಾಲರೆಡ್ಡಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ಸೌಲಭ್ಯಗಳಿವೆ ಸರಿಯಾದ ದಾಖಲೆ ಒದಗಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ತಿಳಿಸಿದರು.
ಗೊರೆನೂರು ಗ್ರಾಮದ ರೈತರಾದ ರಾಜು ರೆಡ್ಡಿ, ಹನಮರೆಡ್ಡಿ, ಶ್ರೀಧರ್, ಆನಂದ, ರಾಘವರೆಡ್ಡಿ, ಕುಂಟಿಮರಿ ಗ್ರಾಮದ ರೈತರಾದ ಭಗವಂತ, ಬಸವರಾಜ ಮತ್ತು ಬಾಲರೆಡ್ಡಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.