ADVERTISEMENT

ಶಹಾಪುರ | '₹1.5 ಕೋಟಿ ವೆಚ್ಚದಲ್ಲಿ ಚರಂಡಿ ನಿರ್ಮಾಣ'

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:56 IST
Last Updated 2 ಆಗಸ್ಟ್ 2025, 6:56 IST
1ಎಸ್ಎಚ್ಪಿ 2: ಶಹಾಪುರ ನಗರದ ಮಾರುತಿ ರಸ್ತೆಯಲ್ಲಿ ನಿರ್ಮಿಸಲು ಉದ್ಧೇಶಿಸಿರುವ ನೂತನ ಪೈಪ್ಲೈನ್ ಚರಂಡಿ ಕಾಮಗಾರಿಯ ಸ್ಥಳವನ್ನು ಶುಕ್ರವಾರ ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು
1ಎಸ್ಎಚ್ಪಿ 2: ಶಹಾಪುರ ನಗರದ ಮಾರುತಿ ರಸ್ತೆಯಲ್ಲಿ ನಿರ್ಮಿಸಲು ಉದ್ಧೇಶಿಸಿರುವ ನೂತನ ಪೈಪ್ಲೈನ್ ಚರಂಡಿ ಕಾಮಗಾರಿಯ ಸ್ಥಳವನ್ನು ಶುಕ್ರವಾರ ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು   

ಶಹಾಪುರ: ನಗರದಲ್ಲಿ ಸ್ವಲ್ಪ ಮಳೆಯಾದರೆ ಸಾಕು ಚರಂಡಿ ಹಾಗೂ ಮಳೆ ನೀರು ಸಂಗ್ರಹವಾಗಿ ಅಂಗಡಿ ಮುಂಗಟ್ಟುಗಳಿಗೆ ನುಗ್ಗುವುದರ ಜತೆಗೆ ರಸ್ತೆ ಮೇಲೆ ನೀರು ಸಂಗ್ರಹವಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಐಡಿಎಸ್‌ಎಂಟಿ ಅನುದಾನದ ಅಡಿಯಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ನೂತನ ಚರಂಡಿ ನಿರ್ಮಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಮೋಚಿಗಡ್ಡಾದಿಂದ-ಬಸವೇಶ್ವರ ವೃತ್ತದವರೆಗೆ(ಮಾರುತಿ ರಸ್ತೆ) ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ನಂತರ ಅವರು ಮಾತನಾಡಿದರು.

‘ಹಲವು ವರ್ಷದ ಹಿಂದೆ ನಿರ್ಮಿಸಿದ ಚರಂಡಿ ಅವೈಜ್ಞಾನಿಕವಾಗಿದೆ. ಚರಂಡಿಯಲ್ಲಿ ತ್ಯಾಜ್ಯ ವಸ್ತು ಹಾಗೂ ಪ್ಲಾಸ್ಟಿಕ್ ಎಸೆದಾಗ ನೀರು ಸರಾಗವಾಗಿ ಮುಂದೆ ಸಾಗದೆ ನಿಲ್ಲುತ್ತದೆ. ಇಲ್ಲಿನ ಪ್ರದೇಶ ಜನನಿಬಿಡವಾಗಿದೆ. ತುಸು ಮಳೆಯಾದರೆ ಸಾಕು ರಸ್ತೆ ಮೇಲೆ ಅವರಿಸಿಕೊಂಡು ಕೃತಕ ಕೆರೆಯಂತೆ ನೀರು ನಿಲ್ಲುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ವ್ಯಾಪಾರಿಗಳು ತೊಂದರೆ ಅನುಭವಿಸುವುದನ್ನು ಮನಗಂಡು ಚರಂಡಿ ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಎಇಇ ನಾನಾಸಾಹೇಬ್, ನಿರ್ಮಿತಿ ಕೇಂದ್ರದ ಎಇಇ ರಾಮನಗೌಡ , ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ, ನಗರಸಭೆ ಸದಸ್ಯ ಸದ್ದಾಂ ದಾದುಲ್ಲಾ, ಬಸವರಾಜ ಚೆನ್ನೂರ, ಶಿವುಕುಮಾರ ತಳವಾರ, ಮಹೇಶ ಮಡಿವಾಳ್ಕರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಿಯಾಖತ್ ಪಾಶಾ, ದೇವಿಂದ್ರಪ್ಪ ಗೋನಾಲ್, ಭೀಮರಾಯ ಮಮದಾಪುರ, ಸುರೇಶ ದೇಸಾಯಿ, ಭಗವಂತ್ರಾಯ ಬಳ್ಳೂಂಡಗಿ, ರವಿಚಂದ್ರ, ವಿಜಯಕುಮಾರ ಎದುರಮನಿ ಉಪಸ್ಥಿತರಿದ್ದರು.

ADVERTISEMENT

ದೇವಸ್ಥಾನಕ್ಕೆ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಶುಕ್ರವಾರ ನಗರದ ಭಾವಸಾರ ಕ್ಷತ್ರೀಯ ಸಮಾಜದ ದೇವತೆ ಹಿಂಗುಲಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ದೇಗುಲ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹ 120 ಲಕ್ಷ ಅನುದಾನ ನೀಡಲಾಗುವುದು ಎಂದು ಸಮಾಜದ ಮುಖಂಡರಿಗೆ ಭರವಸೆ ನೀಡಿದರು.

ಗೋಗಿ(ಪಿ) ಗ್ರಾ.ಪಂ ಕಟ್ಟಡ: ತಾಲ್ಲೂಕಿನ ಗೋಗಿ(ಪಿ) ಗ್ರಾಮದಲ್ಲಿ ನೂತವಾಗಿ ನಿರ್ಮಿಸಲಾಗುತ್ತಿರುವ ಗ್ರಾ.ಪಂ ಕಟ್ಟಡ ಕಾಮಗಾರಿಯನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು. ಇನ್ನುಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ ಉಪಸ್ಥಿತರಿದ್ದರು.

1ಎಸ್ಎಚ್ಪಿ 2(2): ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಗ್ರಾಪಂ ಕಟ್ಟಡ ಕಾಮಗಾರಿ ಪರಿಶೀಲಿಸಿದರು

ಚರಂಡಿಯ ಸಮಸ್ಯೆಗೆ ಶಾಶ್ವತ ಪರಿಹಾರ ಹಿಂಗುಲಾಂಬಿಕಾ ದೇವಸ್ಥಾನಕ್ಕೆ ಅನುದಾನ ಗ್ರಾ.ಪಂ ಕಟ್ಟಡ ಕಾಮಗಾರಿ ಪರಿಶೀಲನೆ

ಚರಂಡಿ ನಿರ್ಮಾಣದ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಚರಂಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಜಾಗ ಒತ್ತುವರಿ ಆಗಿದ್ದರೆ ತೆರವುಗೊಳಿಸಿ ಕಾಮಗಾರಿಗೆ ತೊಂದರೆ ಆಗದಂತೆ ಅನುಕೂಲ ಕಲ್ಪಿಸಲಾಗುವುದು

-ಜೀವನಕುಮಾರ ಕಟ್ಟಿಮನಿ ಪೌರಾಯುಕ್ತ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.