ADVERTISEMENT

ಶಹಾಪುರ ನಗರಸಭೆ | 50 ನಿವೇಶನಗಳ ಅಕ್ರಮ ನೋಂದಣಿ: ಸಾಬೀತು

ಐಡಿಎಸ್ ಎಂಟಿ ನಿವೇಶನ ಅಕ್ರಮ ಹಂಚಿಕೆ ಪ್ರಕರಣ: ವರದಿ ಸಲ್ಲಿಕೆ

ಟಿ.ನಾಗೇಂದ್ರ
Published 6 ಮೇ 2025, 5:53 IST
Last Updated 6 ಮೇ 2025, 5:53 IST
<div class="paragraphs"><p>ಶಹಾಪುರ ನಗರಸಭೆ ಕಟ್ಟಡ</p></div>

ಶಹಾಪುರ ನಗರಸಭೆ ಕಟ್ಟಡ

   

ಶಹಾಪುರ: 2022-2023ರಲ್ಲಿ ನಗರಸಭೆ ವ್ಯಾಪ್ತಿಯ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ (ಐಡಿಎಸ್‌ ಎಂಟಿ) ಯೋಜನೆಯ 50 ನಿವೇಶನಗಳ ಹಂಚಿಕೆ ವೇಳೆ ಸರ್ಕಾರಿ ಮಾರ್ಗಸೂಚಿಗಳನ್ನು ಅಂದಿನ ಪೌರಾಯುಕ್ತ ಓಂಕಾರ ಪೂಜಾರಿ ಹಾಗೂ ಎಫ್‌ಡಿಸಿ ಮಾನಪ್ಪ ಗೋನಾಲ ಅವರು ಗಾಳಿಗೆ ತೂರಿದ್ದಾರೆ. ಅಲ್ಲದೆ ಉಪನೋಂದಣಿ ಕಚೇರಿಯಲ್ಲಿ ಅಕ್ರಮವಾಗಿ ನೋಂದಣಿ ಮಾಡಿಸಿ, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿಗೆ ನೀಡಿದ ವರದಿಯಿಂದ ಬಹಿರಂಗಗೊಂಡಿದೆ. ಈ ಸಂಬಂದ ತನಿಖಾ ತಂಡವು ಸಲ್ಲಿಸಿದ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಜಿಲ್ಲಾಧಿಕಾರಿ ಸುಶೀಲಾ ಬಿ. ಅವರು ಏಪ್ರಿಲ್‌ 29ರಂದು ನಗರಸಭೆಯ ಪೌರಾಯುಕ್ತರಿಗೆ ನಿರ್ದೇಶನ ನೀಡಿ, ಅನಧಿಕೃತವಾಗಿ ಐಡಿಎಸ್ ಎಂಟಿ ನಿವೇಶನ ಹಂಚಿಕೆ ಪುಸ್ತಕದಲ್ಲಿ ನಿವೇಶನ ಸಂಖ್ಯೆ ತಿದ್ದುಪಡಿಯಾಗಿ ಸೇರ್ಪಡೆಯಾದ ಹೆಸರಿನ ವ್ಯಕ್ತಿಗಳ ಹಾಗೂ ಅಕ್ರಮ ನೋಂದಣಿ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ತನಿಖಾ ವರದಿಯಂತೆ ಕ್ರಮವಹಿಸಿ ಕಚೇರಿಗೆ ಅನುಪಾಲನಾ ವರದಿ ಸಲ್ಲಿಸಲು ತಿಳಿಸಿದ್ದಾರೆ.

ADVERTISEMENT

ಏನಿದು ಪ್ರಕರಣ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಐಡಿಎಸ್ ಎಂಟಿ ಯೋಜನೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅದರಲ್ಲಿ ಪೂರ್ಣ ಹಾಗೂ ಅರ್ಧ ಹಣ ಪಾವತಿಸಿರುವ ನಿವೇಶನಗಳನ್ನು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಆಗಬೇಕಿರುತ್ತದೆ. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಮಂಜೂರಾದವರ ಹೆಸರಿಗೆ ಬದಲಾಗಿ ಅದೇ ಹೆಸರಿನ ಬೇರೆಯವರಿಗೆ ಅಕ್ರಮವಾಗಿ ನೋಂದಣಿ ಆಗಿವೆ ಎಂದು ದೂರು ಬಂದಿತ್ತು.

ಅದರಂತೆ ಜಿಲ್ಲಾಧಿಕಾರಿಯು 2024 ಅಕ್ಟೋಬರ್ 10ರಂದು ಯಾದಗಿರಿಯ ವಿಶೇಷ ಭೂ ಸ್ವಾಧೀನ ಅಧಿಕಾರಿ ನವೀನ ನೇತೃತ್ವದಲ್ಲಿ ಮೂವರು ಅಧಿಕಾರಿಗಳ ತಂಡವನ್ನು ರಚಿಸಿ, ಅಕ್ರಮದ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದರು.

ತಂಡವು ತನಿಖೆ ನಡೆಸಿದಾಗ ದಾಖಲೆಗಳನ್ನು ತಿದ್ದುಪಡಿ ಮಾಡಿ, ಅಕ್ರಮವಾಗಿ ನಿವೇಶನಗಳನ್ನು ಬೇರೆಯವರಿಗೆ ಅನಧಿಕೃತವಾಗಿ ಸೇರ್ಪಡೆ ಮತ್ತು ಹಂಚಿಕೆ ಮಾಡಿರುವುದು. ಸರ್ಕಾರಿ ಮಾರ್ಗಸೂಚಿ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿ ಜಿಲ್ಲಾಧಿಕಾರಿಗೆ ವರದಿ ನೀಡಿತ್ತು.

ಇಬ್ಬರು ಅಧಿಕಾರಿಗಳ ಅಮಾನತು: ಅಂದಿನ ನಗರಸಭೆಯ ಪೌರಾಯುಕ್ತ ಓಂಕಾರ ಪೂಜಾರಿ ಹಾಗೂ ಎಫ್‌ಡಿಸಿ ಮಾನಪ್ಪ ಗೋನಾಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಏಪ್ರಿಲ್‌ 22ರಂದು ಆದೇಶ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.