ADVERTISEMENT

ಎಲ್ಲರನ್ನು ಪ್ರೀತಿಸುವುದು ಹಿಂದೂ ಧರ್ಮ: ಸಿದ್ಧಲಿಂಗ ದೇವರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:47 IST
Last Updated 18 ಫೆಬ್ರುವರಿ 2026, 4:47 IST
ಕೆಂಭಾವಿ ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಸಂಜೆ ವಿರಾಟ ಹಿಂದೂ ಸಮ್ಮೇಳನಾ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿರಾಟ್ ಹಿಂದೂ ಸಮಾವೇಶವನ್ನು ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಉದ್ಘಾಟಿಸಿದರು
ಕೆಂಭಾವಿ ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಸಂಜೆ ವಿರಾಟ ಹಿಂದೂ ಸಮ್ಮೇಳನಾ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿರಾಟ್ ಹಿಂದೂ ಸಮಾವೇಶವನ್ನು ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಉದ್ಘಾಟಿಸಿದರು   

ಕೆಂಭಾವಿ: ‘ಹಿಂದೂ ಧರ್ಮದ ರಕ್ಷಣೆಯೆ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಮಂತ್ರವಾಗಬೇಕು, ನಾವೆಲ್ಲರೂ ಭಾರತೀಯರು ಎಂಬ ಸ್ಪಷ್ಟ ಸಂದೇಶವನ್ನು ಇಡೀ ಜಗತ್ತಿಗೆ ಸಾರಿ ಹೇಳಬೇಕು’ ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಸಂಜೆ ವಿರಾಟ ಹಿಂದೂ ಸಮ್ಮೇಳನಾ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿರಾಟ್ ಹಿಂದೂ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ವೇದ, ಉಪನಿಷತ್, ಭಗವದ್ಗೀತಾ, ವಚನಗಳು, ದಾಸಸಾಹಿತ್ಯಗಳ ಮೇಲೆ ನಮ್ಮ ದೇಶದ ಸನಾತನ ಧರ್ಮ ನಿಂತಿದೆ. ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಅರ್ಧ ಕಲಿತ ಜನರಿಂದ ಧರ್ಮ ಹಾಳಾಗುತ್ತಿದ್ದು ಅಂಥಾ ಸಮಾಜದ ಸ್ವಾಸ್ಥ್ಯ ಕೆಡಿಸುವ ಜನತೆಯನ್ನು ಸರಿದಾರಿಗೆ ತರುವ ಕೆಲಸ ಇಂದಿನ ಯುವ ಪೀಳಿಗೆ ಮಾಡಬೇಕು’ ಎಂದರು.

ADVERTISEMENT

'ನಮ್ಮ ದೇಶದ ಒಬ್ಬ ಸಾಮಾನ್ಯ ರೈತ ಮನಸ್ಸು ಮಡಿದರೆ ಮತ್ತೊಂದು ದೇಶವನ್ನು ಖರೀದಿಸಬಹುದು. ಅಂಥಾ ಸಂಪತ್ತು ನಮ್ಮಲ್ಲಿದೆ. ಜಾಗತಿಕ ಇತಿಹಾಸದಲ್ಲಿ ಭಾರತ ಬಡರಾಷ್ಟ್ರ ಎಂದು ಬಡಾಯಿ ಕೊಚ್ಚಿಕೊಳ್ಳುವ ಇನ್ನಿತರೆ ದೇಶಗಳಿಗೆ ನಮ್ಮ ರೈತರೆ ಉತ್ತರ ಕೊಡುತ್ತಾರೆ’ ಎಂದರು.

‘ಬಂದವರನ್ನು ಪ್ರೀತಿಯಿಂದ ಅಪ್ಪಿಕೊಂಡು ಮತ್ತೊಬ್ಬರಿಗೆ ಕೇಡು ಬಯಸದೆ ಅವರನ್ನು ಪ್ರೀತಿಯಿಂದ ಕಾಣುವುದೆ ನಿಜವಾದ ಹಿಂದು ಧರ್ಮ. ನಮ್ಮ ಪ್ರಾಣ ಹೋದರೂ ದೇಶದ ತಿರಂಗಾ ಧ್ವಜ ಮಾತ್ರ ಸದಾ ಬಾನೆತ್ತರಕ್ಕೆ ಹಾರಾಡುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ’ ಎಂದು ಹೇಳಿದರು.

ಅಖಿಲ ಭಾರತೀಯ ಶಾಲಾ ಶಿಕ್ಷಣ ಪ್ರಮುಖ ದೆಹಲಿಯ ಶಿವಾನಂದ ಸಿಂದನಕೇರಿ ಮಾತನಾಡಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಸಂಭ್ರಾಮಾಚರಣೆ ನಿಮಿತ್ತ ದೇಶದೆಲ್ಲೆಡೆ ಈ ಹಿಂದೂ ಸಮಾವೇಶ ನಡೆಸಲಾಗುತ್ತಿದೆ. ನಮ್ಮ ದೇಶಕ್ಕೆ ಸುಮಾರು 75 ಸಾವಿರ ವರ್ಷಇತಿಹಾಸ ಇದ್ದು ಮಹಾಭಾರತ, ರಾಮಾಯಣ, ಭಗವದ್ಗೀತೆ ಮೊದಲಾದುವುಗಳೆ ನಮ್ಮ ಸನಾತನ ಸಂಸ್ಕೃತಿಯ ಮೂಲ ಗ್ರಂಥಗಳಾಗಿವೆ ಎಂದರು.

‘ಯಾರಿಗೂ ಹಿಂಸೆಯನ್ನು ಮಾಡದೆ ಪ್ರತಿಯೊಂದು ಜೀವರಾಶಿಗಳನ್ನು ದೇವರನ್ನು ಕಂಡು ದೇಶವನ್ನು ರೆಕ್ಷಣೆ ಮಾಡುವುದೆ ಹಿಂದೂ ಪದದ ಮೂಲ ಅರ್ಥವಾಗಿದೆ’ ಎಂದರು.

ಶಂಕರ ಕೃಣಗಿ ಪ್ರಾಸ್ತಾವಿಕ ಮಾತನಾಡಿದರು.

ಚನ್ನಬಸವ ಶಿವಾಚಾರ್ಯರು, ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಗಜಾನನ ಮಾಹಾರಾಜರು, ಬಂಡೆಪ್ಪನಳ್ಳಯ ಪರಮಾನಂದ ಮುತ್ಯಾ, ಸಂಗಯ್ಯ ಮುತ್ಯಾ, ಖಮಡೆಪ್ಪ ತಾತಾ, ಬೀರಪಪ ಪೂಜಾರಿ ವೇದಿಕೆ ಮೇಲಿದ್ದರು. ಮಾಣಿಕರಾಜ ಬಡಿಗೇರ ನಿರೂಪಣೆ ಮಾಡಿದರು, ಪ್ರಕಾಶ ಹೊಸಮನಿ ಸ್ವಾಗತಿಸಿದರು.

ಬೃಹತ್‌ ಮೆರವಣಿಗೆ: ಜಯ ಘೋಷಗಳು

ಹಿಂದೂ ಸಮಾಜೋತ್ಸವಕ್ಕೂ ಮುನ್ನ ಪಟ್ಟಣದಲ್ಲಿ ನಡೆದ ಬೃಹತ್ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಪುರಸಭೆಯಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ ರೇವಣಸಿದ್ದೇಶ್ವರ ದೇವಸ್ಥಾನ ಮುಖ್ಯ ಬಜಾರ ಜೈ ಹನುಮಾನ ಚೌಕ್ ಉತ್ತರಾದಿಮಠ ಬೀದಿ ಕಾಳಿಕಾ ದೇವಸ್ಥಾನ ಸೊನ್ನದ ಬಡಾವಣೆಯ ಮೂಲಕ ಮತ್ತೆ ಪುರಸಭೆ ಆವರಣಕ್ಕೆ ತೆರಳಿತು. ಮೆರವಣಿಗೆಯುದ್ದಕ್ಕೂ ಸುಮಾರು 20ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ಮತ್ತು 20ಕ್ಕೂ ಹೆಚ್ಚು ಆಟೊ ಟಂಟಂ ವಾಹನಗಳ ಮೇಲೆ ದೇವರ ಭಾವಚಿತ್ರಗಳು ದೇಶದಲ್ಲಿ ಆಗಿಹೋದ ಮಹನೀಯರ ಭಾವಚಿತ್ರಗಳ ಮೆರವಣಿಗೆ ನೋಡುಗರನ್ನು ತನ್ನತ್ತ ಸೆಳೆಯಿತು. ಡೊಳ್ಳು ಕುಣಿತ ತಮಟೆ ವಾದ್ಯಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆಗೆ ಮತ್ತಷ್ಟು ಶೋಭೆ ತಂದು ಕೊಟ್ಟಿತು. ಮೆರವಣಿಗೆಯ ಉದ್ದಕ್ಕೂ ಭಾರತ ಮಾತಾ ಕಿಜೈ ವಂದೆ ಮಾತರಂ ಘೋಷಣೆಗಳು ಮುಗಿಲು ಮುಟ್ಟಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.