ADVERTISEMENT

ಯಾದಗಿರಿ | ಸಿದ್ಧರಾಮೇಶ್ವರ ಸಾಮರಸ್ಯದ ಶಿವಯೋಗಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 4:00 IST
Last Updated 6 ಫೆಬ್ರುವರಿ 2026, 4:00 IST
ಯಾದಗಿರಿಯಲ್ಲಿ ಗುರುವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾರುತಿ ತಾತಾ, ಬಂಗಾರಪ್ಪ ರಂಗನಾಥ ಸ್ವಾಮಿ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಎಡಿಸಿ ರಮೇಶ ಕೋಲಾರ ಸೇರಿ ಇತರರು ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಗುರುವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾರುತಿ ತಾತಾ, ಬಂಗಾರಪ್ಪ ರಂಗನಾಥ ಸ್ವಾಮಿ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಎಡಿಸಿ ರಮೇಶ ಕೋಲಾರ ಸೇರಿ ಇತರರು ಉಪಸ್ಥಿತರಿದ್ದರು   

ಯಾದಗಿರಿ: ‘ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದು ಲಿಂಗಾಂಗ ಸಾಮರಸ್ಯದ ಶಿವಯೋಗಿಯಾದ ಸಿದ್ಧರಾಮೇಶ್ವರರು ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಹರಿಕಾರರಾಗಿದ್ದರು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. 

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕ್ರತಿ‌ ಇಲಾಖೆ, ಭೋವಿ ವಡ್ಡರ ಸಮಾಜ ಜಿಲ್ಲಾ ಸಮಿತಿ ಹಾಗೂ‌ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಯಕಯೋಗಿ ಸಿದ್ಧರಾಮೇಶ್ವರರು ಸಮಾಜ ಸುಧಾರಕ ಮತ್ತು ಮಹಾನ್ ಶಿವಯೋಗ. ಸಿದ್ಧರಾಮೇಶ್ವರರ ಜೀವನದ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಾಮಾಜಿಕ ಕಳಕಳಿ ಹೊಂದಿದ್ದು, ಬಡವರಿಗಾಗಿ ಹಗಲಿರುಳು ದುಡಿದರು. ಕೆರೆ-ಕಟ್ಟೆಗಳು ಕಟ್ಟಿ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಆಗಿನ ಕಾಲದಲ್ಲಿ ಸಾಮೂಹಿಕ ವಿವಾಹ ಕಲ್ಪನೆ ಜಾರಿಗೆ ತಂದದರು. ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದ್ದು, ಸಾಮಾಜಿಕ ಕಾರ್ಯಗಳ ಮೂಲಕ ಕರ್ಮಯೋಗಿಯೂ ಆಗಿದ್ದರು’ ಎಂದು ಬಣ್ಣಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಮಾತನಾಡಿ, ‘ಸಿದ್ಧರಾಮೇಶ್ವರು ಕೇವಲ ಧ್ಯಾನಕ್ಕೆ ಸೀಮಿತವಾಗದೆ ಸಮಾಜದ ಏಳಿಗೆಗೂ ಶ್ರಮಿಸಿದ್ದರು. ಸಮಾಜದ ಎಲ್ಲ ವರ್ಗಗಳ ಜನರಿಗೆ ಆದರ್ಶಪ್ರಾಯರಾಗಿದ್ದರು’ ಎಂದರು.

‘ಕಲ್ಯಾಣದ ಅನುಭವ ಮಂಟಪದಲ್ಲಿ ಪಾಲ್ಗೊಂಡು, ವಚನಗಳ ಮೂಲಕ ಲಿಂಗಾಂಗ ಸಾಮರಸ್ಯ ಸಾರಿದದ್ದರು. 770 ಅಮರಗಣಂಗಳಿಂದ ಶಿವಯೋಗಿ ಸಿದ್ದರಾಮೇಶ್ವರ ಎಂಬ ಗೌರವಕ್ಕೆ ಪಾತ್ರರಾದರು. ನೀಲಮ್ಮನಂತಹ ಮಹಾಜ್ಞಾನಿಗಳನ್ನು ಗೌರವಿಸಿ, ಸ್ತ್ರೀ ಸಂವೇದನೆಯ ಅಂಶಗಳನ್ನು ತಮ್ಮ ವಚನಗಳಲ್ಲಿ ತಾತ್ವಿಕವಾಗಿ ಚರ್ಚಿಸಿದರು’ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಸುಭಾಷಚಂದ್ರ ಕೌಲಗಿ, ‘ಮಹಾರಾಷ್ಟ್ರದ ಇಂದಿನ ಸೋಲಾಪುರ ಸಿದ್ಧರಾಮೇಶ್ವರರ ಜನ್ಮಸ್ಥಳವಾಗಿದೆ. ಬಾಲ್ಯದಲ್ಲಿ ಮುಗ್ಧಭಕ್ತ, ಮೇಷ ಪಾಲನ ಕಾಯಕ ಮಾಡುತ್ತಿದ್ದರು. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದು, ಸೊನ್ನಲಿಗೆಗೆ ಬಂದು ದೇವಾಲಯ ಸ್ಥಾಪಿಸಿದರು. ಆ ಆವರಣಕ್ಕೆ ಯೋಗ ರಮಣೀಯ ಕ್ಷೇತ್ರವೆಂದು ಹೆಸರಿಟ್ಟರು’ ಎಂದರು.

‘ಲಿಂಗಸ್ಥಾಪನೆ, ಸಕಲ ಜೀವಿಗಳ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ್ದರು.  ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಪಡೆದು, ಅನುಭವ ಮಂಟಪದ ಗೋಷ್ಠಿಯಲ್ಲಿ ಭಾಗಿಯಾಗಿ ಮಹಾಶಿವಯೋಗಿಯಾಗಿದ್ದರು’ ಎಂದು ಹೇಳಿದರು.

ಭವ್ಯ ಮೆರವಣಿಗೆ: ಜಯಂತಿ ಅಂಗವಾಗಿ ಭೋವಿ ವಡ್ಡರ ಗಲ್ಲಿಯಿಂದ ಕಾರ್ಯಕ್ರಮದ ವೇದಿಕೆಯವರೆಗೂ ಸಿದ್ಧರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಸಮಾಜದ ಮುಖಂಡರು, ಮಹಿಳೆಯರು, ಯುವಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಸಕನಳ್ಳಿ ವಿಷ್ಣು ಆಶ್ರಮದ ಮಾರುತಿ ತಾತಾ, ಕೆಂಭಾವಿಯ ಬಂಗಾರಪ್ಪ ರಂಗನಾಥ ಸ್ವಾಮಿ, ‘ಯುಡಾ’ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಬಿಜೆಪಿ ಮುಖಂಡ ರಾಚನಗೌಡ ಮುದ್ನಾಳ, ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಮಾರೆಪ್ಪ ವರ್ಕನಳ್ಳಿ, ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಹಣಮಂತ ವಲ್ಲಾಪೂರೆ, ಮುಖಂಡರಾದ ಟಿ.ಚಂದ್ರಶೇಖರ, ಹಳ್ಳೆಪ್ಪ ದೊತ್ರೆ, ಗೋಪಾಲ ಕಡೆಕಲ್, ನರಸಿಂಹ ತಡಿಬಿಡಿ, ದೇವರಾಜ ಮಸಕನಳ್ಳಿ, ಭೀಮರಾಯ ಕಿಲ್ಲನಕೇರಾ, ಮಹಾದೇವಪ್ಪ ಗೋಪಾಳಾಪುರ, ಬಸವರಾಜ ಶಾರದಳ್ಳಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.