ADVERTISEMENT

ಎಸ್.ಪಿ ವರ್ಗಾವಣೆ ಊಹಾಪೋಹ: ಸಚಿವ ಶರಣಬಸಪ್ಪ ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 7:11 IST
Last Updated 10 ಜುಲೈ 2025, 7:11 IST
ಶರಣಬಸಪ್ಪ ದರ್ಶನಾಪುರ
ಶರಣಬಸಪ್ಪ ದರ್ಶನಾಪುರ   

ಕೆಂಭಾವಿ: ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಕೇವಲ ಊಹಾಪೋಹ ಮಾತ್ರ. ಈ ವಿಷಯದಲ್ಲಿ ಸರ್ಕಾರ ಇನ್ನೂವರೆಗೂ ಯಾವುದೆ ಹಸ್ತಕ್ಷೇಪ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸ್ಪಷ್ಟಪಡಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಪಿ ಅವರ ವರ್ಗಾವಣೆ ಕುರಿತು ಈಚೆಗೆ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಅವರು ನೀಡಿದ್ದ ಪ್ರತಿಕ್ರಿಯೆಗೆ ಉತ್ತರಿಸಿದ ಸಚಿವರು, ಒಂದು ವೇಳೆ ಎಸ್.ಪಿ ಅವರ ವರ್ಗಾವಣೆಯಾದರೆ ಅದಕ್ಕೆ ರಾಜುಗೌಡರ ಲೆಟರ್ ಹೆಡ್ ಕಾರಣವಾಗಬಹುದು. ಜಿಲ್ಲೆಯಲ್ಲಿ ತಮಗೆ ಆಗಿಬಾರದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದು ರಾಜುಗೌಡರಿಗೆ ಹೊಸತೇನಲ್ಲ’ ಎಂದು ಟಾಂಗ್ ನೀಡಿದರು.

‘ರಾಜುಗೌಡ ಮಂತ್ರಿಯಾಗಿದ್ದಾಗ ಡಿವೈಎಸ್‍ಪಿ ಒಬ್ಬರನ್ನು ಕೇವಲ 10 ತಿಂಗಳಲ್ಲಿ ವರ್ಗಾವಣೆ ಮಾಡಿಸಿಲ್ಲವೇ?. ರಾಜ್ಯದಲ್ಲಿ ಪೊಲೀಸ್‌ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಪ್ರಕರಣಗಳನ್ನು ಸಿಬಿಐಗೆ ಒಪ್ಪಿ ಎಂದು ಹೇಳುವ ಬಿಜೆಪಿಯವರಿಗೆ ಈಗ ದಕ್ಷತೆಯ ಬಗ್ಗೆ ಅರಿವಾಗುತ್ತದೆಯೇ’ ಎಂದು ಪ್ರಶ್ನೆ ಮಾಡಿದರು.

ADVERTISEMENT

‘ಕಾಲುವೆ ಬ್ರಿಜ್ ಸಂಪೂರ್ಣ ಹದಗೆಟ್ಟಿರುವ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ನೋಡಿದ್ದು, ಶೀಘ್ರದಲ್ಲೆ ಇದರ ದುರಸ್ತಿಗಾಗಿ ಕ್ರಮ ಕೈಗೊಳ್ಳಲಾಗುವುದು. ಮಲ್ಲಾ-ಕೆಂಭಾವಿ ರಸ್ತೆ ದುರಸ್ತಿಗೆ ಐದು ಕೋಟಿ ರೂಪಾಯಿಗಳ ಟೆಂಡರ್ ಮುಗಿದಿದ್ದು, ಶೀಘ್ರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

‘ಯಾಳಗಿ-ವಂದಗನೂರ ಹಾಗೂ ಯಾಳಗಿ-ಬೇವಿನಾಳ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಯಡಿಯಾಪುರ ರಸ್ತೆ ದುರಸ್ತಿಗೆ ಹಣ ನೀಡಲಾಗುವುದು. ಪೀರಾಪುರ ಏತ ನೀರಾವರಿ ಕಾಮಗಾರಿಯು ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದ್ದು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಜಮೀನುಗಿಗೆ ನೀರು ಹರಿಸಲಾಗುವುದು’ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ಪಾಟೀಲ, ಮಾಜಿ ಸದಸ್ಯ ಲಿಂಗನಗೌಡ ಮಾಲಿಪಾಟೀಲ, ವಾಮನರಾವ ದೇಶಪಾಂಡೆ, ಬಾಪುಗೌಡ ಹುಣಸಗಿ, ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಯಾಳಗಿ, ಶಿವಮಹಾಂತ ಚಂದಾಪುರ, ಬಾಪುಗೌಡ ಪಾಟೀಲ, ಶಾಂತಗೌಡ ನೀರಲಗಿ, ವೈ.ಟಿ. ಪಾಟೀಲ, ಮಹಿಪಾಲರೆಡ್ಡಿ ಡಿಗ್ಗಾವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.