ADVERTISEMENT

ಸ್ವಚ್ಛತೆ, ಸುರಕ್ಷತೆಗೆ ವಿಶೇಷ ಆದ್ಯತೆ ನೀಡಿ’

ಶಹಾಪುರ: ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 12:52 IST
Last Updated 20 ಜೂನ್ 2018, 12:52 IST
19JUNE SHP 2: ಶಹಾಪುರ ನಗಸರಭೆಯ ಸಭಾಂಗಣದಲ್ಲಿ ಮಂಗಳವಾರ ನಗರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯನ್ನು ಶಾಸಕ ಶರಣಬಸಪ್ಪ ದರ್ಶನಾಪುರ ನಡೆಸಿದರು
19JUNE SHP 2: ಶಹಾಪುರ ನಗಸರಭೆಯ ಸಭಾಂಗಣದಲ್ಲಿ ಮಂಗಳವಾರ ನಗರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯನ್ನು ಶಾಸಕ ಶರಣಬಸಪ್ಪ ದರ್ಶನಾಪುರ ನಡೆಸಿದರು   

ಶಹಾಪುರ: ‘ನಗರದಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆ ಇಲ್ಲವಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಕುಂಟು ನೆಪ ಹೇಳಿ ಪಾರಾಗುವ ಬದಲು ಹೂಳು ತುಂಬಿರುವ 23ವಾರ್ಡ್ಗಳ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಸೂಚಿಸಿದರು.

ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಗರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ‘ಬಾಪುಗೌಡ ನಗರದ ಉದ್ಯಾನ ಜಾಗದ ಅಭಿವೃದ್ಧಿಗೆ ₹ 28 ಲಕ್ಷ ಅನುದಾನ ಬಂದಿದೆ. ಅಲ್ಲಿ ಅರೆಬರೆ ಕೆಲಸ ಮಾಡಿ ಅನವಶ್ಯಕವಾಗಿ ಹಣ ಪೋಲು ಮಾಡಿದ್ದೀರಿ. ಇದು ಸರಿಯಾದ ಕೆಲಸವಲ್ಲ’ ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ಕಿರಣ ಹೂಗಾರ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

‘ಚರಂಡಿ ಸ್ವಚ್ಛಗೊಳಿಸುವ ಸಿಬ್ಬಂದಿ ಅಟೋರಿಕ್ಷಾ ಚಾಲಕರಾಗಿ ಕೆಲಸ ಮಾಡಿದರೆ ಚರಂಡಿ ಹೂಳನ್ನು ಯಾರು ತೆಗೆಯಬೇಕು. ತೆರಿಗೆ ವಸೂಲಿ ಯಾಕೆ ಸಮರ್ಪಕವಾಗಿ ಆಗುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ನಗರಸಭೆಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದರೂ ಸಹ ಚರಂಡಿ, ಕಸ ಗುಡಿಸುವ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಹೆದ್ದಾರಿಯ ಅಕ್ಕಪಕ್ಕವೂ ಸ್ವಚ್ಛತೆ ಇಲ್ಲ. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುವುದಿಲ್ಲವೊ ಅವರನ್ನು ಮನೆಗೆ ಕಳಹಿಸಿ. ಮನೆ ವರ್ಗಾವಣೆ ಹಾಗೂ ಮುಟೇಶನ್ ಮಾಡಿಸಲು ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ. ಜನರಿಗೆ ತೊಂದರೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದರು.

‘ನಗರದ ಹೊರವಲಯದ ಫಿಲ್ಟರ್ ಬೆಡ್ ಕೆರೆಯಿಂದ ನೀರು ಸರಬರಾಜಿಗಾಗಿ ಪ್ರತ್ಯೇಕ ವಿದ್ಯುತ್ ಸಂಪರ್ಕ ಕಲ್ಪಿಸಲು ₹ 40 ಲಕ್ಷ ಹಣ ಪಾವತಿಸಿದರು ಸಹ ಇಂದಿಗೂ ಕಾಮಗಾರಿ ನಡೆದಿಲ್ಲ. ಇದರಿಂದ ನಗರಕ್ಕೆ ನೀರು ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ. ಜೆಸ್ಕಾಂ ಹಾಗೂ ನಗರಸಭೆ ಎಂಜಿನಿಯರ್ ಹೊಣೆಯಾಗಿದ್ದೀರಿ. ತಕ್ಷಣ ಕೆಲಸವನ್ನು ಆರಂಭಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಅನುದಾನ ವಾಪಸ್‌ ಮಾಡಿ’ ಎಂದು ಜೆಸ್ಕಾಂ ಎಂಜಿನಿಯರ್‌ಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಈಗಾಗಲೇ ಸಿದ್ಧಪಡಿಸಿದ್ದ ₹ 91 ಕೋಟಿ ವೆಚ್ಚದ ಚಳಚರಂಡಿ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಿದರು. ಅಗತ್ಯ ಮಾರ್ಪಾಡು ಮಾಡಿ ಅಂದಾಜು ಪಟ್ಟಿ ಸಿದ್ದಪಡಿಸಲು ನಗರಸಭೆಯ ಎಂಜಿನಿಯರ್‌ಗೆ ಶಾಸಕರು ಸೂಚಿಸಿದರು.

ಪೌರಾಯುಕ್ತ ಬಸವರಾಜ ಶಿವಪೂಜೆ, ನಗರಸಭೆಯ ಅಧ್ಯಕ್ಷೆ ಕಾಂತಮ್ಮ ಹಣಮಂತರಾಯ ಯಕ್ಷಿಂತಿ, ಉಪಾಧ್ಯಕ್ಷ ಡಾ.ಬಸವರಾಜ ಇಜೇರಿ ಹಾಗೂ ಇತರ ಅಧಿಕಾರಿಗಳು ಇದ್ದರು.

ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ₹ 132ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಕಾಮಗಾರಿಗೆ ಅನುಮೋದನೆ ಪಡೆಯಲಾಗುವುದು.
- ಶರಣಬಸಪ್ಪ ದರ್ಶನಾಪುರ,ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.