ADVERTISEMENT

‘ಅಸ್ಪೃಶ್ಯತೆ ನಿವಾರಣೆಗೆ ಕೇವಲ ಭಾಷಣಗಳು ಸಾಲವು’: ಪ್ರವೀಣ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:56 IST
Last Updated 7 ಜೂನ್ 2025, 13:56 IST
ಗುರುಮಠಕಲ್ ಪಟ್ಟಣದ ಎಸ್.ವಿ. ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದೇವಋಷಿ-ಆದ್ಯ ಪತ್ರಕರ್ತ ನಾರದ ಜಯಂತಿ’ ಕಾರ್ಯಕ್ರಮದಲ್ಲಿ ಪ್ರವೀಣ ಕುಲಕರ್ಣಿ ಮಾತನಾಡಿದರು
ಗುರುಮಠಕಲ್ ಪಟ್ಟಣದ ಎಸ್.ವಿ. ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದೇವಋಷಿ-ಆದ್ಯ ಪತ್ರಕರ್ತ ನಾರದ ಜಯಂತಿ’ ಕಾರ್ಯಕ್ರಮದಲ್ಲಿ ಪ್ರವೀಣ ಕುಲಕರ್ಣಿ ಮಾತನಾಡಿದರು   

ಗುರುಮಠಕಲ್: ‘ಸಮಾಜದಲ್ಲಿನ ತಾರತಮ್ಯ ನಿವಾರಣೆಗೆ ಮತ್ತು ಅಸ್ಪೃಶ್ಯತೆ ನಿವಾರಣೆಗೆ ಕೇವಲ ಭಾಷಣಗಳು ಮಾಡಿದರೆ ಸಾಲದು. ನಾವು ವೈಯಕ್ತಿಕವಾಗಿ ಮತ್ತು ನಮ್ಮ ಮನೆಯಿಂದಲೇ ಅಸ್ಪೃಶ್ಯತೆಯ ನಿವಾರಣೆಯ ಚಟುವಟಿಕೆಯನ್ನು ಆರಂಭಿಸೋಣ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಲಬುರಗಿ ವಿಭಾಗ ಪ್ರಚಾರ ಪ್ರಮುಖ ಪ್ರವೀಣ ಕುಲಕರ್ಣಿ ಸಲಹೆ ನೀಡಿದರು.

ಪಟ್ಟಣದ ಎಸ್.ವಿ. ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ದೇವಋಷಿ-ಆದ್ಯ ಪತ್ರಕರ್ತ ನಾರದ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ವರ್ಷ ಆರ್.ಎಸ್.ಎಸ್. ಸ್ಥಾಪನೆಯ ಶತಮಾನೋತ್ಸವ. ಆದ್ದರಿಂದ ಸ್ವದೇಶಿ, ಕುಟುಂಬ ಪ್ರಬೋಧನಾ, ಸಾಮರಸ್ಯ, ಪರಿಸರ ರಕ್ಷಣೆ ಮತ್ತು ಪೌರ ಕರ್ತವ್ಯಗಳ ಪಾಲನೆ ಎಂಬ ಐದು ತತ್ವಗಳನ್ನೊಳಗೊಂಡ ‘ಪಂಚ ಪರಿವರ್ತನೆ’ ಎಂಬ ಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಹೊಂದಿದೆ’ ಎಂದು ತಿಳಿಸಿದರು.

ADVERTISEMENT

‘ಸ್ವದೇಶಿ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು, ಕುಟುಂಬವನ್ನು ಸುಸಂಸ್ಕೃತವಾಗಿಸಿಕೊಳ್ಳುವುದು, ಸಾಮಾಜಿಕ ಏರಿಳಿತಗಳು ಮತ್ತು ಅಸ್ಪೃಶ್ಯತೆ ನಿವಾರಣೆಗೆ ನಮ್ಮ ಮನೆಯಿಂದಲೇ ಪರಿವರ್ತನೆ, ನಮ್ಮ ಸುತ್ತಲಿನ ಪರಿಸರದ ಸಂರಕ್ಷಣೆಗೆ ನಮ್ಮಿಂದ ಆದ್ಯತೆಯ ಕಾರ್ಯ, ಪೌರ ಕರ್ತವ್ಯಗಳನ್ನು ಸರಿಯಾಗಿ ಪಾಲಿಸುವ ಮೂಲಕ ಮೊದಲು ನಾವು ಭಾರತೀಯತೆಯ ಹೆಮ್ಮೆಯನ್ನು ಹೆಚ್ಚಿಸಿಕೊಳ್ಳುವುದು ಈ ಪಂಚ ಪರಿವರ್ತನೆಯ ಆಶಯವಾಗಿದೆ’ ಎಂದರು.

‘ಸಮಾಜದಲ್ಲಿ ಸುಳ್ಳು ಸುದ್ದಿ, ಅಪಪ್ರಚಾರ, ಅರ್ಧ ಸತ್ಯದ ಸುದ್ದಿಗಳಿಂದ ಜನರಲ್ಲಿ ಗೊಂದಲ ಮತ್ತು ತಪ್ಪು ಗ್ರಹಿಕೆಗಳು ಹರಡುವ ಸಾಧ್ಯತೆಯಿದೆ. ಆದ್ದರಿಂದ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎನ್ನುವುದನ್ನು ಅರಿಯಲು ‘ಫ್ಯಾಕ್ಟ್ ಚೆಕ್’ ಮಾಡಬೇಕಾದ ಅವಶ್ಯಕತೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ತಪ್ಪು ಸಂದೇಶಗಳ ಕುರಿತು ಎಚ್ಚರಿಕೆ ಅವಶ್ಯ’ ಎಂದು ಹೇಳಿದರು.

ಸಂಪಾದಕ ರಾಘವೇಂದ್ರ ಪತ್ತಾರ ಮಾತನಾಡಿ, ‘ನಮ್ಮ ಮೊಬೈಲ್ ಬಳಕೆಯು ಹೆಚ್ಚಿದ್ದು, ಅದರಿಂದ ನಮಗೆ ಬೇಕಿಲ್ಲದ ವಿಷಯಗಳೂ ನಮ್ಮೆದುರಿಗೆ ತೆರೆದುಕೊಳ್ಳುತ್ತಿವೆ. ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲಿಗೆ ಅವರಿಗೆ ಒಂದಿಷ್ಟು ‘ಕ್ವಾಲಿಟಿ ಟೈಮ್’ ಮೀಸಲಾಗಿಸಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮನೆಯಲ್ಲಿ ಪೋಷಕರೂ ಅನವಶ್ಯಕ ಮೊಬೈಲ್ ಬಳಕೆಯಿಂದ ದೂರವಿರುವುದು ಅವಶ್ಯ’ ಎಂದರು.

‘ಸದ್ಯ ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವಶಾಲಿಯಾಗಿದ್ದು, ಅದನ್ನು ಹೇಗೆ ಬಳಕೆ ಮಾಡುವುದು ಅಥವಾ ನಾವು ಹೇಗೆ ವಿಷಯವನ್ನು ರಚಿಸುವುದು ಎನ್ನುವುದಕ್ಕೆ ಹಲವಾರು ತಂತ್ರಾಂಶಗಳು ಲಭ್ಯ ಇವೆ. ಜತೆಗೆ ಕಂಟೆಂಟ್ ಕ್ರಿಯೇಟ್ ಕಾರ್ಯಾಗಾರಗಳೂ ಜರುಗುತ್ತವೆ. ಆದರೆ, ನಾವು ನಮ್ಮೆಲ್ಲಾ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಖಾಸಗಿತನಕ್ಕೆ ಧಕ್ಕೆ ಜತೆಗೆ ಹಲವು ಸಮಸ್ಯೆಗಳನ್ನು ಎಳೆದುಕೊಂಡಂತೆ. ಆದ್ದರಿಂದ ವೈಯಕ್ತಿಕ ಮಾಹಿತಿ ಹಂಚಿಕೆ ಬೇಡ’ ಎಂದು ಸಲಹೆ ನೀಡಿದರು.

ಎಸ್.ವಿ. ಕಾಲೇಜಿನ ಕಾರ್ಯದರ್ಶಿ ಎಂ.ಬಿ.ನಾಯ್ಕಿನ್ ಅಧ್ಯಕ್ಷತೆ ವಹಿಸಿದ್ದರು. ಭೀಮಾಶಂಕರ, ರಾಮುಲು ಪೂಜಾರಿ, ವಿಶ್ವ ಯದ್ಲಾಪುರ, ಶಾಂತಾ ಮಲ್ಲಿಕಾರ್ಜುನ, ವಿಜಯಸಿಂಗ್ ರಜಪೂತ, ನರೇಶ ಚಪೆಟ್ಲಾ, ಶ್ವೇತಾ ಕೃಷ್ಣ, ಬಸಪ್ಪ ಸಂಜನೋಳ, ಬಸವರಾಜ ಅಲೆಮನಿ, ಚನ್ನಕೇಶವುಲು, ಭೀಮರೆಡ್ಡಿ ದೇವೇಂದ್ರಪ್ಪ, ನಾಗರಾಜ ಪತಂಗೆ, ವಿಜಯ ಹಿರೇಮಠ, ಮಹೇಶ ಎಸ್.ಪಿ., ಲಕ್ಷ್ಮಣ, ನರೇಶ, ಮಂಜು ಉಪಸ್ಥಿತರಿದ್ದರು. ಉಪನ್ಯಾಸಕ ಸಾಬರೆಡ್ಡಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.