
ಯಾದಗಿರಿ: ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುವಿನ ವಿರುದ್ಧ ಪ್ರಕರಣ ದಾಖಲಿಸಿದ್ದು ಖಂಡನೀಯ. ಕಳೆದ ಐದು ವರ್ಷಗಳಿಂದ ಜಿಲ್ಲಾ ಕ್ರೀಡಾಂಗಣದ ಅಭಿವೃದ್ದಿಗೆ ಆಗ್ರಹಿಸಿದರೂ ಸ್ಪಂದಿಸದವರು ಪ್ರಕರಣ ದಾಖಲಿಸಿದ್ದು, ಕೂಡಲೇ ಪ್ರಕರಣ ಹಿಂಪಡೆಯಬೇಕು ಮತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವರಾಜ ನಾಯಕ್ ಆಗ್ರಹಿಸಿದರು.
ನಗರದ ಸುಭಾಷ್ ವೃತ್ತದಲ್ಲಿ ಮಂಗಳವಾರ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅವ್ಯವಹಾರದ ತನಿಖೆ ಮತ್ತು ಅಭಿವೃದ್ಧಿ ಹಾಗೂ ಕ್ರೀಡಾಪಟು ಲೋಕೇಶ ರಾಠೋಡ್ ಮತ್ತು ಆತನೊಡನೆ ಹೋರಾಟದಲ್ಲಿ ಭಾಗಿಯಾದವರ ವಿರುದ್ಧ ದಾಖಲಿಸಿದ ಪ್ರಕರಣ ಹಿಂಪಡೆಯಲು ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶೀಘ್ರ ಕ್ರಮವಹಿಸದಿದ್ದರೆ ‘ಯಾದಗಿರಿ ಬಂದ್’ಗೆ ಕರೆ ನೀಡುವುದಾಗಿ ಎಚ್ಚರಿಸಿದರು.
ಮುಖಂಡ ಜನಾರ್ಧನ ರಾಠೋಡ್ ಹಾಗೂ ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಶ್ರೀಧರ ಸಾಹುಕಾರ ಮಾತನಾಡಿ, ‘ಜಿಲ್ಲೆಯ ಕ್ರೀಡಾಂಗಣವು ಸಕಲ ಸೌಲಭ್ಯಗಳೊಂದಿಗೆ ಎಲ್ಲಾ ಕ್ರೀಡಾಪಟುಗಳಿಗೆ ಅನುಕೂಲವಾಗಲೆಂಬ ಕಾರಣ ಕಳೆದ ಐದು ವರ್ಷಗಳಿಂದ ಸ್ವಾರ್ಥವಿಲ್ಲದೆ ಲೋಕೇಶ ಹೋರಾಡುತ್ತಿದ್ದಾರೆ. ಅಂತಹಾ ಕ್ರೀಡಾಪಟು ವಿರುದ್ಧ ಹಾಕಿದ ಕೇಸ್ ಇಡೀ ಜಿಲ್ಲೆಯ ಕ್ರೀಡಾಪಟುಗಳ ಮೇಲೆ ದೌರ್ಜನ್ಯ ನಡೆಸಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಗಾರು ರಾಠೋಡ್, ವಿಜಯ ಜಾಧವ್, ಮೇಘನಾಥ ಚವ್ಹಾಣ, ಮನೋಹರ ಪವಾರ್, ವಿನೋದ ರಾಠೋಡ್, ಯಂಕಪ್ಪ ರಾಠೋಡ್ ಉಪಸ್ಥಿತರಿದ್ದರು.
ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಆಗ್ರಹಿಸಿ ಶಾಂತಿಯುತ ಹೋರಾಡಿದ ಕ್ರೀಡಾಪಟುಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ತಪ್ಪು. ಕೂಡಲೇ ಸಂಬಂಧಿತರು ಸ್ಪಂದಿಸಬೇಕು. ಹೋರಾಟದಲ್ಲಿ ನೀಡಿದ ಬೇಡಿಕೆಗಳನ್ನು ತಕ್ಷಣ ಈಡೇರಿಸಿ. ಇಲ್ಲವಾದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದಗನಾಳ ಆಗ್ರಹಿಸಿದರು. ‘ರಾಜ್ಯದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ನಮ್ಮದೂ ಒಂದು. ಆದರೆ ಇಲ್ಲಿ ಸಂಪೂರ್ಣ ಅವ್ಯವಸ್ಥೆಯಿದೆ. ಅದನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ಸೌಲಭ್ಯ ಕಲ್ಪಿಸಲು ಹೋರಾಡಿದವರ ವಿರುದ್ಧ ಜಿಲ್ಲಾ ಕ್ರೀಡಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ. ಹೀಗಾದರೆ ಸೌಲಭ್ಯಗಳ ಕುರಿತು ಯಾರಿಗೆ ಕೇಳಬೇಕಿತ್ತು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.