ಯಾದಗಿರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಚಾಲನೆ ನೀಡಿದರು.
ಇದರ ಜೊತೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯ, ಕೃಷಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಗಳ ವಸ್ತು ಪ್ರದರ್ಶನದ ಮಳಿಗೆಗಳನ್ನು ಉದ್ಘಾಟಿಸಿದರು.
ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಬಾಲಕರ ಬಾಲ ಮಂದಿರದ ಮಕ್ಕಳು ಒಳಗೊಂಡಿರುವ ಜೈಕರ್ನಾಟಕ ಮಲ್ಲಕಂಬ ಹಾಗೂ ಬಾಗಲಕೋಟೆಯ ತುಳಸಿಗೇರಿಯ ಮಲ್ಲಕಂಬ ತಂಡಗಳ ಪ್ರದರ್ಶನವು ನೆರೆದವರನ್ನು ರಂಜಿಸಿದವು. ಸಾಹಸ ಗೀತೆಗಳು ಹಿನ್ನೆಲೆಯ ಹಾಡುಗಳೊಂದಿಗೆ ವಿ ಷಡಲ್ ಪಿರಾಮಿಡ್, ಟಿ ಬ್ಯಾಲೆನ್ಸ್ ಸೇರಿದಂತೆ ಹಲವು ಕಸರತ್ತುಗಳನ್ನು ಪ್ರದರ್ಶಿಸಿ ನೆರೆದಿದ್ದ ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್ ಅವರು ವೇದಿಕೆಗೆ ತೆರಳು ಜೈಕರ್ನಾಟಕ ಮಲ್ಲಕಂಬ ತಂಡದ ಮಕ್ಕಳನ್ನು ಅಭಿನಂದಿಸಿದರು.
ರಾಜ್ಯದ 31 ಜಿಲ್ಲೆಗಳ ನೂರಾರು ಸ್ಪರ್ಧಾಳುಗಳು ಪಾಲ್ಗೊಂಡಿದ್ದು, ಜನಪದ ನೃತ್ಯ, ಜನಪದ ಗೀತೆ, ವಿಜ್ಞಾನ ವಸ್ತು ಪ್ರದರ್ಶನ, ಕಥೆ ಬರೆಯುವುದು, ಕವನ ರಚನೆ, ಚಿತ್ರಕಲೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ನೀಡಲು ಅಣಿಯಾಗಿದ್ದಾರೆ.
ಪ್ರಧಾನ ವೇದಿಕೆ, ಸರ್ಕಾರಿ ಪದವಿ ಕಾಲೇಜು ಸಭಾಂಗಣ, ಸ್ಟೇಷನ್ ರಸ್ತೆಯ ವಿದ್ಯಾಮಂಗಲ ಕಾರ್ಯಾಲಯ, ಚಿತ್ತಾಪುರ ರಸ್ತೆಯ ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏಳು ಬಗೆಯ ಸ್ಪರ್ಧೆಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು, ರಾಜಾ ವೇಣುಗೋಪಾಲ ನಾಯಕ, 'ಯುಡಾ' ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಡಿಯಾ, ಎಡಿಸಿ ರಮೇಶ ಕೋಲಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.