ADVERTISEMENT

ಕೆಂಭಾವಿ | ವಾಹನ ಸವಾರರಿಗೆ ಬೀಡಾಡಿ ದನಗಳ ಕಾಟ

ಪವನ ಕುಲಕರ್ಣಿ
Published 8 ಫೆಬ್ರುವರಿ 2026, 7:18 IST
Last Updated 8 ಫೆಬ್ರುವರಿ 2026, 7:18 IST
   

ಕೆಂಭಾವಿ: ಪಟ್ಟಣದ ಹಲವು ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನಗಳ ಸಂಚಾರ ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.

ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಬೀಡಾಡಿ ದನಗಳು ಮಲಗುವುದರಿಂದ ರಾತ್ರಿಹೊತ್ತು ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ವಾಹನದಿಂದ ಕೆಳಗಿಳಿದು ಓಡಿಸಿದರೂ ದನಗಳು ಮಾತ್ರ ಜಾಗಬಿಟ್ಟು ಕದಲುತ್ತಿಲ್ಲ. ಇದರಿಂದಾಗಿ ಅಪಘಾತದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಸ್ತೆಯುದ್ದಕ್ಕೂ ಓಡಾಡುವ ಬೀಡಾಡಿ ದನಗಳು, ಬೈಕ್‌ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದ್ದು, ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿವೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ, ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರ ರಾಜ್ಯ ಹೆದ್ದಾರಿ ಹಾದು ಹೋಗುತ್ತಿದ್ದು, ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೀಡಾಡಿ ದನಗಳು ಹಗಲು ರಾತ್ರಿಯನ್ನದೆ ರಸ್ತೆಯ ಮೇಲೆಯೇ ಮಲಗುವುದರಿಂದ ಅಪಘಾತ ಸಂಭವಿಸಿ, ಸವಾರರು ಗಾಯಗೊಂಡ ಉದಾಹರಣೆಗಳು ಹೆಚ್ಚಾಗಿವೆ. ಈ ಕುರಿತು ಪುರಸಭೆ ಅಧಿಕಾರಿಗಳು ಎಚ್ಚತ್ತು ಕೊಳ್ಳಬೇಕಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಉತ್ತರಾದಿಮಠ ಬೀದಿ, ಟಿಪ್ಪು ಸುಲ್ತಾನ ವೃತ್ತ, ಜೈ ಹನುಮಾನ ಚೌಕ, ಮುಖ್ಯ ಬಜಾರ ಪ್ರದೇಶ, ಹಳೆ ಬಸ್ ನಿಲ್ದಾಣ, ಸಂಜೀವನಗರ, ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಈಬಗ್ಗೆ ಪುರಸಭೆ ಅಧಿಕಾರಿಗಳು ಕ್ರಮ ಜರುಗಿಸಬೇಕಾಗಿದೆ ಎಂದು ಸಾರ್ವಜನಿಕರು

ಒತ್ತಾಯಿಸಿದ್ದಾರೆ.

‘ರಸ್ತೆಗೆ ದನ ಬಿಟ್ಟರೆ ಗೋಶಾಲೆಗೆ ಸ್ಥಳಾಂತರ’

ಪಟ್ಟಣದ ಸಾಕು ದನಗಳ ಮಾಲೀಕರು ಅನವಶ್ಯವಾಗಿ ತಮ್ಮ ಜಾನುವಾರುಗಳನ್ನು ರಸ್ತೆಗೆ ಬಿಡದೆ ಮನೆಯಲ್ಲಿ ಕಟ್ಟಬೇಕು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯುಸೂಫ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿಗಳು, ‘ಪಟ್ಟಣದ ವಿವಿಧ ಮುಖ್ಯ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಿದೆ. ಮಾಲೀಕರಿಗೆ ಕಾಲಾವಕಾಶ ನೀಡಲಾಗಿದೆ. ಅಪಘಾತಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ಪುರಸಭೆ ಕ್ರಮಕೈಗೊಂಡಿದ್ದು, ಜಾನುವಾರು ಮಾಲೀಕರು ತಮ್ಮ ಮನೆಗಳಲ್ಲಿಯೇ ಕಟ್ಟಬೇಕು. ರಸ್ತೆಯಲ್ಲಿ ಜಾನುವಾರ ಕಂಡು ಬಂದರೆ ಪುರಸಭೆಯ ವಾಹನಗಳಲ್ಲಿ ಅವುಗಳನ್ನು ಸಮೀಪದ ಗೋಶಾಲೆಗೆ ಕಳಿಸಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬೀಡಾಡಿ ದನಗಳ ಹಾವಳಿ ಬಗ್ಗೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಕ್ರಮ ಜರುಗಿಸಿಲ್ಲ
ಕುಮಾರ ಮೋಪಗಾರ, ಕರವೇ ವಲಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.