
ಸುರಪುರ: ‘ಯಾದಗಿರಿ ಜಿಲ್ಲೆಯ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ಆರೋಪಿಸಿ ಶೋಷಿತರ ಸಂಘಟನೆಯ ಒಕ್ಕೂಟದ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸಮಿತಿ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಜಿಲ್ಲೆಯ ವಸತಿ ನಿಲಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ’ ಎಂದು ದೂರಿದರು.
‘ಒಬ್ಬ ವಾರ್ಡನ್‍ಗೆ 4 ರಿಂದ 5 ವಸತಿ ನಿಲಯಗಳ ಹೊಣೆಗಾರಿಕೆ ವಹಿಸಲಾಗಿದೆ. ಜಿಲ್ಲೆಯ ಎರಡು ಮೂರು ವಸತಿ ನಿಲಯಗಳ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆದರೂ ಕ್ರಮ ಜರುಗಿಸಿಲ್ಲ. ಒಂದು ವಸತಿ ನಿಲಯದ ಶಿಕ್ಷಕರನ್ನು ವರ್ಗಾವಣೆ ಮಾತ್ರ ಮಾಡಲಾಗಿದೆ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.
‘ವಸತಿ ನಿಲಯಗಳ ವಿದ್ಯಾರ್ಥಿನಿಯರಿಗೆ ರಕ್ಷಣೆ ವ್ಯವಸ್ಥೆ ಇರಬೇಕು. ಸಮರ್ಪಕವಾಗಿ ಊಟ, ಉಪಹಾರ ನೀಡಬೇಕು. ದೌರ್ಜನ್ಯ ಎಸಗುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.
ರಾಜ್ಯ ಮಕ್ಕಳ ಆಯೋಗಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮಲ್ಲಯ್ಯ ದಂಡು ಅವರಿಗೆ ಸಲ್ಲಿಸಿದರು. ಮುಖಂಡರಾದ ಬಸವರಾಜ ಕನಕಗಿರಿ, ಲಾಳೆಪಟೇಲ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.