ಯಾದಗಿರಿ: ನಗರದ ಹೊರವಲಯದಲ್ಲಿರುವ ಬಂದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಳ್ಳಿ ಸೀಮಾಂತರದಲ್ಲಿರುವ ಆದರ್ಶ ವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಪರಿಶೀಲನೆ ನಡೆಸಿದರು.
ಕೆಲ ದಿನಗಳಿಂದಲ್ಲೂ ಈ ಶಾಲೆಯ ಹಲವು ಸಮಸ್ಯೆಗಳ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷರು, ಪಾಲಕರು ಮತ್ತು ಶಾಲಾ ಸಿಬ್ಬಂದಿ ಶಾಸಕರ ಗಮನಕ್ಕೆ ತರುತ್ತಿದ್ದಂತೆಯೇ ಡಿಡಿಪಿಐ, ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಸಂಬಂಧಪಟ್ಟವರೊಂದಿಗೆ ಆ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಕಣ್ಣಾರೆ ಕಂಡು ಅರೆಕ್ಷಣ ಬೆರಗಾದರು.
ಅಲ್ಲಿಂದ ಶಾಲೆಯೊಳಗೆ ಬಂದ ಶಾಸಕರು ಅಲ್ಲಿ ಸೇರಿದ್ದ ಸುಮಾರು 480 ಮಕ್ಕಳನ್ನು ಒಂದೆಡೆ ಸೇರಿಸಿ ಎಲ್ಲರಿಗೂ ಮಾತಾಡಿ ಸಮಸ್ಯೆಗಳನ್ನು ಆಲಿಸಿದರು. ನಮಗೆ ಬಸ್ ವ್ಯವಸ್ಥೆ ಆಗಬೇಕು. ಶುದ್ದ ಕುಡಿಯುವ ನೀರು ಬೇಕು. ವಿದ್ಯುತ್‌ನ ಸಮಸ್ಯೆ ನೀಗಬೇಕು. ಆಂಗ್ಲ ಮಾಧ್ಯಮ ಶಾಲೆಯಿದ್ದರೂ ಆ ವಿಷಯದ ಶಿಕ್ಷಕರೇ ಇಲ್ಲ. ಶಾಲೆಗೆ ಸುತ್ತುಗೋಡೆ ನಿರ್ಮಿಸಿಕೊಡಿ ಹೀಗೆ ಮಕ್ಕಳು ಹೇಳಿದ್ದನ್ನು ಶಾಂತಚಿತ್ತದಿಂದ ಆಲಿಸಿದ ಶಾಸಕ ಕಂದಕೂರು, ಪ್ರತಿಯೊಂದಕ್ಕೂ ಅಲ್ಲಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮಾತಾಡಿ ಮತ್ತು ಜೊತೆಗೆ ಬಂದಿದ್ದ ಅಧಿಕಾರಿಗಳಿಗೆ ಸೂಚಿಸಿ ಆದಷ್ಟು ಬೇಗನೇ ವಿದ್ಯಾರ್ಥಿಗಳು ಹೇಳಿದ ಎಲ್ಲ ಬೇಡಿಕೆಗಳಿಗೆ ಮುಕ್ತಿ ಕಾಣಿಸಿ ಎಂದರು.
ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಲೋ ಮೀಟರ್ ಉದ್ದನೆ ರಸ್ತೆಯಲ್ಲಿ ಆಳುದ್ದ ಐವತ್ತು ಹೆಚ್ಚು ತಗ್ಗುಗಳು, ಅದರಲ್ಲಿ ನಿಂತ ಮಳೆ ನೀರು. ಆದರೂ ಮಕ್ಕಳು, ಶಿಕ್ಷಕರು ಮತ್ತು ಸಾರ್ವಜನಿಕರು ಕಳೆದ ಹತ್ತು ವರ್ಷಗಳಿಂದ ಹಾಗೇ ಸಂಚರಿಸುತ್ತಿರುವ ವಿಷಯ ಅರಿತ ಶಾಸಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಕರೆದು ಕೂಡಲೇ ಈ ರಸ್ತೆ ಕಾಮಗಾರಿ ಕುರಿತು ಅಂದಾಜು ವೆಚ್ಚ ತಯಾರಿಸಿ, ಇಷ್ಟರಲ್ಲಿಯೇ ಕಾಮಗಾರಿ ಶುರು ಮಾಡಿ ಗುಣಮಟ್ಟ ರಸ್ತೆ ನಿರ್ಮಿಸಿ ಎಂದು ಸ್ಥಳದಲ್ಲಿಯೇ ಸೂಚಿಸಿದರು.
ಇಷ್ಟು ವರ್ಷಗಳ ಕಾಲ ಇಲ್ಲಿ ಏನಿತ್ತೋ, ಏನಿಲ್ಲೋ. ಆದರೆ, ಇಂದಿನಿಂದ ನೀವು ಓದುತ್ತಿರುವ ಈ ಶಾಲೆಗೆ ಇರುವ ಸಮಸ್ಯೆಗಳಿಗೆ ಹಂತ, ಹಂತವಾಗಿ ಮುಕ್ತಿ ಹಾಡಲು ನಾನು ಬದ್ಧನಿದ್ದೇನೆ. ನೀವು ಮಾತ್ರ ಕಠಿಣ ಶ್ರಮದಿಂದ ಅಭ್ಯಾಸ ಮಾಡಿ, ಶಿಕ್ಷಕರೇ ಉತ್ತಮ ಬೋಧನೆ ಮಾಡಿ ಎಂದು ಹೇಳಿದರು.
ಆರ್‌ಒ ಪ್ಲಾಂಟ್ ಕೂಡಲೇ ಆರಂಭಿಸಿ, ಇಂಗ್ಲಿಷ್ ಶಿಕ್ಷಕರೊಬ್ಬರನ್ನು ನಗರದಿಂದ ಮೂರು ದಿನ ಇಲ್ಲಿಗೆ ಬಂದು ಪಾಠ ಮಾಡಲು ಆದೇಶಿಸಿ ಎಂದು ಡಿಡಿಪಿಐ ಅವರಿಗೆ ಹೇಳಿದರು.
ಹೀಗೆ ಅರ್ಧ ಗಂಟೆಯಲ್ಲಿ ಅಲ್ಲಿದ್ದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮೂಲಕ ಮಕ್ಕಳ ನೆಚ್ಚಿನ ಶಾಸಕರು ಎಂದೇನಿಸಿಕೊಂಡು ಚಪ್ಪಾಳೆ ಮೂಲಕ ಸೈ ಎನಿಸಿಕೊಂಡರು.
ಭೇಟಿ ವೇಳೆ ಇದ್ದ ಪ್ರಮುಖರು:
ಈ ವೇಳೆ ಜಿಲ್ಲಾ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಚಂದ್ರ ಕಟಕಟಿ, ಬಸವರಾಜಗೌಡ ಚಾಮನಹಳ್ಳಿ, ಶರಣಗೌಡ ಚಾಮನಹಳ್ಳಿ, ಬಸ್ಸುಗೌಡ ದೇಸಾಯಿ ಚಾಮನಹಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ರುದ್ರಸ್ವಾಮಿ ಮೇಲಿನಮಠ, ಉಪಾಧ್ಯಕ್ಷೆ ಮರೆಮ್ಮ ಸಿದ್ದಪ್ಪ ಲಿಂಗೇರಿ, ಎಂಜಿನಿಯರ್ ಪರಶುರಾಮ, ಶಾಲಾ ಮುಖ್ಯಶಿಕ್ಷಕಿ ಶಂಕರೆಮ್ಮ, ಶಿಕ್ಷಕರಾದ ಲಕ್ಷ್ಮೀನಾರಾಯಣ, ಭಗವಂತ, ಸುಹಾಸಿನಿ, ರೂಬಿ, ಶಿವಶರಣಪ್ಪ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಭೇಟಿ ನೀಡಿದ ಮೊದಲ ಶಾಸಕ:
ಕಳೆದ ಸುಮಾರು 12 ವರ್ಷಗಳ ಹಿಂದೆಯೇ ಆರಂಭವಾದ ಈ ಶಾಲೆಗೆ ಭೇಟಿ ನೀಡಿದ ಮೊದಲ ಶಾಸಕ ಶರಣಗೌಡ ಕಂದಕೂರು ಎಂಬ ಮಾತುಗಳು ಅಲ್ಲಿ ಸೇರಿದ್ದ ಪಾಕಲರು ಮಕ್ಕಳು ಹೇಳಿದ್ದು ಕೇಳಿ ಬಂತು. ಹೆಣ್ಣು ಮಕ್ಕಳೇ ಯಾವುದೇ ಕಾರಣಕ್ಕೂ 18 ವರ್ಷ ಆಗುವವರೆಗೂ ಮದುವೆ ಆಗಬೇಡಿ. ಮೊದಲು ಕಠಿಣ ಶ್ರಮವಹಿಸಿ ಅಭ್ಯಾಸ ಮಾಡಿ. ಆಗ ನೀವು ನಿಮ್ಮ ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಿರಿ ಎಂದು ಶಾಸಕರು ಕಿವಿ ಮಾತು ಹೇಳಿದರು. ಇದೇ ವೇಳೆ ಶಾಸಕರು ಸಸಿ ನೆಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.