ADVERTISEMENT

ಸುರಪುರ | ಅಂಗವಿಕಲರಿಗೆ ಅನುಕಂಪ ಬೇಡ– ಅವಕಾಶ ನೀಡಿ: ರಾಜಾ ವೇಣುಗೋಪಾಲ ನಾಯಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:50 IST
Last Updated 27 ಡಿಸೆಂಬರ್ 2025, 6:50 IST
ಸುರಪುರದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಆಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ರಾಜಾ ಲಕ್ಷ್ಮೀ ನಾರಾಯಣ ನಾಯಕ ಉದ್ಘಾಟಿಸಿದರು. ಶಾಸಕ ರಾಜಾ ವೇಣುಗೋಪಾಲ ನಾಯಕ ಭಾಗವಹಿಸಿದ್ದರು
ಸುರಪುರದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಆಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ರಾಜಾ ಲಕ್ಷ್ಮೀ ನಾರಾಯಣ ನಾಯಕ ಉದ್ಘಾಟಿಸಿದರು. ಶಾಸಕ ರಾಜಾ ವೇಣುಗೋಪಾಲ ನಾಯಕ ಭಾಗವಹಿಸಿದ್ದರು   

ಸುರಪುರ: ‘ಅಂಗವಿಕಲರಿಗೆ ಅನುಕಂಪದ ಅಗತ್ಯವಿಲ್ಲ. ಅವರಿಗೆ ಎಲ್ಲ ರೀತಿಯ ನೆರವು–ಅವಕಾಶ ನೀಡಬೇಕು. ಇದಕ್ಕಾಗಿ ಎಲ್ಲ ಸ್ಥಳೀಯ ಸಂಸ್ಥೆಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟ ಮತ್ತು ಗ್ರಾಮೀಣ ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಶುಕ್ರವಾರ ಹಮ್ಮಿಕೊಂಡಿದ್ದ ಸುರಪುರ-ಹುಣಸಗಿ ತಾಲ್ಲೂಕು ಮಟ್ಟದ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅಂಗವಿಕಲರು ನೀಡಿರುವ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸಲು ಯತ್ನಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.

ADVERTISEMENT

ರಾಜಾ ಲಕ್ಷ್ಮೀನಾರಾಯಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ತಾ.ಪಂ ಇಒ ಬಸವರಾಜ ಸಜ್ಜನ, ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ, ಸಗರನಾಡು ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿದರು.

ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರನಾಯಕ, ಮುಖಂಡರಾದ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಗಫಾರ್ ನಗನೂರಿ, ಚಂದ್ರಶೇಖರ ಪಟ್ಟಣಶೆಟ್ಟಿ ವಜ್ಜಲ, ಶೇಖ್ ಮಹಿಬೂಬ್ ಒಂಟಿ ಇತರರು ಹಾಜರಿದ್ದರು.

ಎಂಆರ್‌ಡಬ್ಲ್ಯು ಮಾಳಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಂಗವಿಕಲರ ಸಂಘದ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರೆಡ್ಡಿ ಆಶಯ ನುಡಿಗೈದರು. ತಾಲ್ಲೂಕು ಅಧ್ಯಕ್ಷ ನಾಗೇಂದ್ರ ದೊರೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೈರಿಮಡ್ಡಿ ಸ್ವಾಗತಿಸಿದರು. ಶಿಕ್ಷಕ ಎಸ್.ಎಸ್. ಮಾರನಾಳ ನಿರೂಪಿಸಿದರು.

ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳ ನೂರಾರು ಅಂಗವಿಕಲರು ಭಾಗಿಯಾಗಿದ್ದರು. ಅಲಿಂ ಕೋ ಕಂಪನಿಯಿಂದ ಸಾಧನ ಸಲಕರಣೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.