
ಸುರಪುರ: ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮತ್ತು ಕಳೆದ ಎರಡು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ತಾಲ್ಲೂಕಿನಲ್ಲಿ 200 ಕ್ಕೂ ಹೆಚ್ಚು ಹೆಕ್ಟೇರ್ ಭತ್ತ ನೆಲಕಚ್ಚಿದೆ.
ತಾಲ್ಲೂಕಿನಲ್ಲಿ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಇದಕ್ಕೆ ಹೋಲಿಸಿದರೆ ಹಾನಿ ಪ್ರಮಾಣ ತೀರಾ ಕಡಿಮೆ. ಆದರೂ ಹಾನಿಗೊಳಗಾದ ರೈತರು ಕಂಗಾಲಾಗಿದ್ದಾರೆ. ಭತ್ತ ಕಾಯಿ ಕಟ್ಟಿ ತೆನೆ ಬಿಟ್ಟಿದ್ದವು. ಕಟಾವು ಹಂತದಲ್ಲಿದ್ದವು. ಉತ್ತಮ ಮಳೆ ಮತ್ತು ಕಾಲುವೆಗೆ ಸಮರ್ಪಕ ನೀರು ಹರಿದಿದ್ದರಿಂದ ಬೆಳೆಯೂ ಭರ್ಜರಿಯಾಗಿಯೇ ಬಂದಿತ್ತು. ಕೆಲ ದಿನಗಳಲ್ಲಿ ರೈತರು ಕಟಾವು ಸಿದ್ಧತೆಯಲ್ಲಿ ತೊಡಗಿದ್ದರು. ಆದರೆ ಮಳೆ ಬಂದು ನೀರು ನಿಂತಿದ್ದರಿಂದ ಭೂಮಿ ಆರುವವರೆಗೆ ಕಟಾವು ಮಾಡಲು ಬರುವುದಿಲ್ಲ. ಅಷ್ಟರಲ್ಲಾಗಲೇ ಸುರಿದ ಮಳೆ ಗಾಯದ ಮೇಲೆ ಬರೆ ಎಳೆದಂತಾಯಿತು.
ಈ ಮೊದಲು ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ 107 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ ಎಂದು ವರದಿ ನೀಡಿದ್ದವು. ಎನ್‍ಡಿಆರ್‌ಎಫ್ ಪ್ರಕಾರ ಒಂದು ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ಸಿಗುತ್ತದೆ.
‘ಒಂದು ಹೆಕ್ಟೇರ್‌ಗೆ ಭತ್ತ ಕೃಷಿ ಮಾಡಲು ಅಂದಾಜು ₹60 ಸಾವಿರ ಖರ್ಚು ಬರುತ್ತದೆ. ಹೀಗಾಗಿ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ’ ಎನ್ನುವುದು ರೈತರ ಅಳಲು.
ಸಧ್ಯ ಭತ್ತದ ದರ 75 ಕೆಜಿ ಚೀಲಕ್ಕೆ ₹ 1700 ಇದೆ. ಕಟಾವು ವಿಳಂಬವಾದರೆ ದರದಲ್ಲಿ ಕುಸಿತ ಉಂಟಾಗಬಹುದು ಎಂಬ ಆತಂಕ ರೈತರದ್ದು. ಮಳೆ ನೀರು ನಿಂತಿದ್ದರಿಂದ ಕಟಾವು ಪ್ರಕ್ರಿಯೆ ಇನ್ನಷ್ಟು ಮುಂದಕ್ಕೆ ಹೋಗಲಿದೆ.
ಸಮೀಕ್ಷೆ ವರದಿ ಕಳುಹಿಸಿ ಕೆಲ ದಿನಗಳಾದರೂ ಪರಿಹಾರ ಜಮೆಯಾಗಿಲ್ಲ. ಶೀಘ್ರ ರೈತರ ಖಾತೆಗೆ ಪರಿಹಾರದ ಹಣ ಜಮೆ ಮಾಡಬೇಕು. ಹಾನಿಯಾದ ಸಂಪೂರ್ಣ ಬೆಳೆಗೆ ಪರಿಹಾರ ನೀಡಬೇಕುಮಲ್ಲಿಕಾರ್ಜುನ ಸತ್ಯಂಪೇಟೆ ರಾಜ್ಯ ಸಮಿತಿ ಉಪಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಹಾನಿಯಾದ ಭತ್ತದ ಸಮೀಕ್ಷೆಯ ವರದಿ ಸಲ್ಲಿಸುವಂತೆ ಆದೇಶ ಬಂದಿಲ್ಲ. ಬಂದ ತಕ್ಷಣ ಸಮೀಕ್ಷೆ ನಡೆಸಿ ವರದಿ ನೀಡಲಾಗುವುದುರಾಮನಗೌಡ ಪಾಟೀಲ ಕೃಷಿ ಸಹಾಯಕ ನಿರ್ದೇಶಕ
ಹಾನಿಆರ್‌ಎನ್‍ಆರ್ ಭತ್ತದ ತಳಿ ಎತ್ತರವಾಗಿ ಬೆಳೆಯುತ್ತದೆ. ತೆನೆಯಲ್ಲಿ ಭತ್ತದ ಕಾಳುಗಳ ಸಂಖ್ಯೆಯೂ ಅಧಿಕ. ಹೀಗಾಗಿ ಜೋರಾದ ಮಳೆ ಅಥವಾ ಗಾಳಿ ಬೀಸಿದರೆ ನೆಲಕಚ್ಚುವುದು ಸಾಮಾನ್ಯ. ಸೋನಾ ಕಾವೇರಿ 64 ಧಪ್ತರಿ ಇತರ ತಳಿಗಳು ಎತ್ತರಕ್ಕೆ ಬೆಳೆಯುವುದಿಲ್ಲವಾದ್ದರಿಂದ ಹಾನಿ ಕಡಿಮೆ. ಆರ್‍ಎನ್‍ಆರ್‍ಗೆ ದರ ಹೆಚ್ಚು ಹೀಗಾಗಿ ಈ ಭಾಗದಲ್ಲಿ ಈ ತಳಿ ಹೆಚ್ಚು ಬೆಳೆಯುತ್ತಾರೆ. ಮಳೆ ಕೆಲ ಭಾಗದಲ್ಲಿ ಮಾತ್ರ ಬಂದಿದ್ದರಿಂದ ಹಾನಿ ಪ್ರಮಾಣ ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.