ಸುರಪುರ: ‘ಸಂವಿಧಾನ ವಿರೋಧಿ ಬಣದವರು ಫೆ. 3 ರಂದು ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸಿದ್ದು, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಗುರುವಾರ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸಮಿತಿ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನದಡಿ ಸರ್ವರಿಗೂ ಸಮಪಾಲು ಸಮಬಾಳು ನಿಯಮವಿದೆ. ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಫೆ. 3 ರಂದು ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.
‘ದೇಶದಲ್ಲಿ ರಾಜ ಪ್ರಭುತ್ವ ಧಿಕ್ಕರಿಸಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಸಂವಿಧಾನದಿಂದ ಸಮಾನತೆ, ಸಹೋದರತೆ ಗಟ್ಟಿಗೊಂಡಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣುವ ವಾತಾವರಣ ಇದೆ. ಆದರೆ ಮನುವಾದಿಗಳಾದ ಆರೆಸ್ಸೆಸ್ ಸಂಘಟನೆಗಳು ಮೊದಲಿನಿಂದಲೂ ಸಂವಿಧಾನ ವಿರೋಧಿಸುತ್ತಾ ಬಂದಿವೆ’ ಎಂದು ದೂರಿದರು.
‘ಇಂತಹ ದೇಶದ್ರೋಹಿ ಚಟುವಟಿಕೆ ಮಾಡಲು ಹೊರಟಿರುವ ದೇಶದ್ರೋಹಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮನುಸ್ಮೃತಿ ಜಾರಿಗೆ ಬರದಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಬಾಬಾಸಾಹೇಬರ ಅನುಯಾಯಿಗಳು, ಪ್ರಗತಿಪರ ಚಿಂತಕರು ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.
ರಾಷ್ಟ್ರಪತಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಸಲ್ಲಿಸಿದರು. ತಾಲ್ಲೂಕು ಸಮಿತಿ ಸಂಚಾಲಕ ಬಸಪ್ಪ ದೊಡಮನಿ, ರಾಮು ಶೆಳ್ಳಗಿ, ಮೂರ್ತಿ ಬೊಮ್ನಳ್ಳಿ, ದೇವಿಂದ್ರಪ್ಪ ಬಳಿಚಕ್ರ, ಮಾನಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ವಾಗಣಗೇರಾ, ಅಪಣ್ಣ ಗಾಯಕವಾಡ, ಮಲ್ಲಿಕಾರ್ಜುನ ಮುಷ್ಠಳ್ಳಿ, ನಿಂಗಣ್ಣ ಗೋನಾಲ, ಮಾನಪ್ಪ ಶೆಳ್ಳಗಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.