
ಸುರಪುರ: ನಗರದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 192 ದಿನಗಳಿಂದ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ಹೋರಾಟ ಸಮಿತಿ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದವರಿಗೆ ಶುಕ್ರವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಭೂಮಿ ಮಂಜೂರಾತಿ ಆದೇಶ ಪ್ರತಿ ನೀಡಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭೂಮಿ ಮಂಜೂರಾತಿಗೆ ಒತ್ತಾಯಿಸಿ ಕೆಲ ತಿಂಗಳಿಂದ ಪ್ರತಿಭಟನೆ ನಡೆದಿತ್ತು. ಈ ಕುರಿತು ತಾಲ್ಲೂಕಾಡಳಿತದೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಸರ್ಕಾರಿ ಭೂಮಿಯನ್ನು ಅಳೆತೆ ಮಾಡಿ ಗ್ರಂಥಾಲಯ ಮತ್ತು ಅಂಬೇಡ್ಕರ್ ಉದ್ಯಾನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಗೆ 10 ಗುಂಟೆ 8 ಆಣೆ ಜಮೀನು ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದರು.
ಧರಣಿಯನ್ನು ಹಿಂಪಡೆಯಬೇಕು ಜತೆಗೆ ಮೈದಾನದಲ್ಲಿ ಹಾಕಿದ ಧ್ವಜಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದಾಗ ಹೋರಾಟಗಾರರು ಸಮ್ಮತಿ ಸೂಚಿಸಿದರು.
ಸಾಮೂಹಿಕ ಸಂಘಟನೆಗಳು ಭೂಮಿ ಮಂಜೂರಿ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ಗಾಂಧಿವೃತ್ತದಲ್ಲಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೂ ಆಗಮಿಸಿದ ಜಿಲ್ಲಾಧಿಕಾರಿ ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು. ಸ್ವಲ್ಪ ಹೊತ್ತು ವಾಗ್ವಾದ ನಡೆಸಿದ ಮುಖಂಡರು ನಂತರ ಧರಣಿ ವಾಪಾಸಾತಿಗೆ ಸಮ್ಮತಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಶೀಲ್ದಾರ್ ಎಚ್.ಎ. ಸರಕಾವಸ್, ಡಿವೈಎಸ್‍ಪಿ ಜಾವೇದ್ ಇನಾಮದಾರ್, ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ್, ಪಿಐ ಉಮೇಶ ನಾಯಕ ಉಪಸ್ಥಿತರಿದ್ದರು.
ಘಟನೆ ಹಿನ್ನೆಲೆ: 7 ತಿಂಗಳ ಹಿಂದೆ ದಲಿತ ಸಂಘಟನೆಗಳು ಅಂಬೇಡ್ಕರ್ ವೃತ್ತದ ಹಿಂದಿ ಜಾಗದಲ್ಲಿ ನೀಲಿ ಧ್ವಜ ಹಾಕಿದ್ದರು. ಅಲ್ಲಿ ಅಂಬೇಡ್ಕರ್ ಗ್ರಂಥಾಲಯ ಮತ್ತು ಉದ್ಯಾನಕ್ಕೆ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿದ್ದರು.
ಪ್ರಭು ಕಾಲೇಜಿನವರು ತಮ್ಮ ಸ್ಥಳದಲ್ಲಿ ಧ್ವಜ ಹಾಕಲಾಗಿದೆ ಎಂದು ತೆರವು ಗೊಳಿಸಿದಾಗ ವಿವಾದ ಆರಂಭವಾಯಿತು. ಮತ್ತೆ ನೀಲಿ ಧ್ವಜ ಹಾಕಿ ಭೂಮಿ ಮಂಜೂರಿಗೆ 192 ದಿನಗಳಿಂದ ನಿರಂತರ ಧರಣಿ ನಡೆಸಿದರು.
ವಾಲ್ಮೀಕಿ ಸಂಘಟನೆಯವರು ನೀಲಿ ಧ್ವಜದ ಅನತಿ ದೂರದಲ್ಲಿ ಕೇಸರಿ ಧ್ವಜ ಹಾಕಿ ನಮಗೂ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಹೆಸರಿನಲ್ಲಿ ಉದ್ಯಾನ ನಿರ್ಮಿಸಲು ಸ್ಥಳ ಮಂಜೂರು ಮಾಡುವಂತೆ ಹೋರಾಟ ನಡೆಸಿದ್ದರು.
ಪ್ರಭು ಕಾಲೇಜಿನ ಮೈದಾನದ ಪಕ್ಕ ಸರ್ಕಾರಿ ಜಾಗವಿದೆಯೆಂದು ತಾಲ್ಲೂಕು ಆಡಳಿತ ಸರ್ವೆ ಮಾಡಿ ಗುರುತಿಸಲಾಯಿತು. ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಎರಡು ಬಣಗಳಿಗೆ ತಲಾ 10 ಗುಂಟೆ 8 ಆಣೆ ಭೂಮಿ ಮಂಜೂರು ಆದೇಶ ನೀಡಿದರು.
ಆದರೆ ಸಾಮೂಹಿಕ ಸಂಘಟನೆಗಳು ಎರಡು ಬಣಗಳಿಗೆ ನೀಡಿದ ಭೂಮಿ ಮಂಜೂರು ಆದೇಶ ರದ್ದು ಪಡಿಸಬೇಕು. ಧ್ವಜ ತೆರವುಗೊಳಿಸಬೇಕು. ದಲಿತ ಸಂಘಟನೆಯವರು ಧರಣಿಗಾಗಿ ಹಾಕಿದ ಟೆಂಟ್ ತೆರವುಗೊಳಿಸಬೇಕೆಂದು ಮೂರು ದಿನಗಳಿಂದ ಗಾಂಧಿ ವೃತ್ತದಲ್ಲಿ ನಿರಂತರ ಧರಣಿ ನಡೆಸಿದ್ದರು.
ಜಿಲ್ಲಾಧಿಕಾರಿ ಆದೇಶ ನಮಗೆ ತೃಪ್ತಿ ತಂದಿದೆ. ಕೊನೆಗೂ ನಮ್ಮ ಹೋರಾಟಕ್ಕೆ ಜಯ ಸಂದಿದೆ. ಇದು ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಸಂದ ಗೌರವ. ಧರಣಿ ಸಮಾಪ್ತಿಗೊಳಿಸಿದ್ದೇವೆಮಾನಪ್ಪ ಕಟ್ಟಿಮನಿ ಅಂಬೇಡ್ಕರ್ ಗ್ರಂಥಾಲಯ ಭೂಮಿ ಮಂಜೂರು ಹೋರಾಟ ಸಮಿತಿ ಅಧ್ಯಕ್ಷ
ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿ ಧರಣಿ ಹಿಂತೆಗೆದುಕೊಂಡಿದ್ದೇವೆ. ಆದೇಶ ರದ್ದು ಪಡಿಸಲು ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆವೆಂಕಟೇಶನಾಯಕ ಬೈರಿಮರಡಿ ಸಾಮೂಹಿಕ ಸಂಘಟನೆಗಳ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.