ಗುರುಮಠಕಲ್: ಕುರಿ ಕಳ್ಳರೆಂದು ಶಂಕಿಸಿ ಗ್ರಾಮದಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.
ಹತ್ತಿರದ ಚಂಡ್ರಿಕಿ ಗ್ರಾಮದ ಮೊಗಲಪ್ಪ ಗೊಲ್ಲ, ರಾಜು ವಿಶ್ವಕರ್ಮ(ನಾಗೇಂದ್ರಪ್ಪ), ರಮೇಶ ಬಸೂದೆ, ಹುಸೇನಪ್ಪ ಇಂಟೆನಿಕಿ, ಹುಸೇನಪ್ಪ ನಾಟೇಕರ, ತ್ರಿವೇಶ ಕಲಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣ: ಜಿಲ್ಲೆಯ ವಡಗೆರಾ ತಾಲ್ಲೂಕಿನ ಉಳ್ಳೆಸೂಗೂರು ತಾಂಡಾದ ಲಕ್ಷ್ಮಣ ರಾಠೋಡ, ರೆಡ್ಡಿ ರಾಠೋಡ, ಶಂಕರ್ ರಾಠೋಡ, ವಿಜಯ ಪವಾರ್ ಮತ್ತು ಭರತ್ ಪವಾರ್ ಶನಿವಾರ ತಡರಾತ್ರಿ ಗುರುಮಠಕಲ್- ಚಂಡ್ರಿಕಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಕಾಡು ಹಂದಿ ಬೇಟೆಯಾಡಲು ಬಂದಿದ್ದರು.
ಚಂಡ್ರಿಕಿ ಗ್ರಾಮದ ಹೊರವಲಯದಲ್ಲಿ ತಮ್ಮ ಬೈಕ್ ನಿಲ್ಲಿಸಿದಾಗ ಕಾರ್‌ನಲ್ಲಿ ಬಂದ ಮೊಗುಲಪ್ಪ ಹಾಗೂ ತಂಡ ಇವರನ್ನು ಕುರಿ ಕಳ್ಳರೆಂದು ಶಂಕಿಸಿದ್ದಾರೆ. ಲಕ್ಷ್ಮಣ ರಾಠೋಡ ಮತ್ತು ರೆಡ್ಡಿ ರಾಠೋಡನ್ನು ಬಿಟ್ಟು ಉಳಿದವರು ತಮ್ಮ ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ.
‘ಕೂಡಲೇ ಲಕ್ಷ್ಮಣ ಮತ್ತು ರೆಡ್ಡಿ ರಾಠೋಡ ಅವರನ್ನು ಹಿಡಿದು ಗ್ರಾಮದ ಹನುಮ ಮಂದಿರದ ಹತ್ತಿರದ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದು, ಫೋನ್ ಪೇ ನಲ್ಲಿದ್ದ ₹10 ಸಾವಿರ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ’ ಎಂದು ಲಕ್ಷ್ಮಣ ರಾಠೋಡ ನೀಡಿದ ದೂರಿನಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.