ADVERTISEMENT

ವಡಗೇರಾ: ಆರಂಭವಾಗದ ಕಚೇರಿಗಳು, ಅಭಿವೃದ್ಧಿ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:59 IST
Last Updated 19 ಸೆಪ್ಟೆಂಬರ್ 2025, 5:59 IST
ವಡಗೇರಾ ಪಟ್ಟಣದಲ್ಲಿರುವ ತಹಶೀಲ್ದಾರರ ಕಚೇರಿ
ವಡಗೇರಾ ಪಟ್ಟಣದಲ್ಲಿರುವ ತಹಶೀಲ್ದಾರರ ಕಚೇರಿ   

ವಡಗೇರಾ: ಹೋಬಳಿ ಕೇಂದ್ರವಿದ್ದ ವಡಗೇರಾ, ತಾಲ್ಲೂಕು ಕೇಂದ್ರ ಎಂದು ಘೋಷಣೆಯಾಗಿ 8 ವರ್ಷ ಕಳೆದರೂ ಸಹ ಈವರೆಗೆ ತಾಲ್ಲೂಕಿನಲ್ಲಿ ತಾಲ್ಲೂಕು ಕಚೇರಿಗಳು ಆರಂಭವಾಗಿಲ್ಲ. ಇದರಿಂದ ತಾಲ್ಲೂಕಿನಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ.

ಹೋಬಳಿ ಕೇಂದ್ರವಿದ್ದಾಗ ವಡಗೇರಾ ಹೇಗಿತ್ತೊ ಈಗಲೂ ಹಾಗೆಯೇ ಇದೆ. ಯಾವುದೇ ಬದಲಾವಣೆಗಳು ತಾಲ್ಲೂಕಿನಲ್ಲಿ ಕಂಡು ಬಂದಿಲ್ಲ. ಹೋಬಳಿ ಕೇಂದ್ರವಿದ್ದಾಗ ಅಲ್ಪ ಸ್ವಲ್ಪವಾದರೂ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿತ್ತು.

ನೂತನ ತಾಲ್ಲೂಕಿನಲ್ಲಿ ಸುಮಾರು 22 ತಾಲ್ಲೂಕು ಕಚೇರಿಗಳು ಆರಂಭವಾಗಬೇಕು. ಆದರೆ, ಕೇವಲ ಮೂರು ತಾಲ್ಲೂಕು ಕಚೇರಿಗಳು ಆರಂಭವಾಗಿದೆ. ತಹಶೀಲ್ದಾರ್‌ ಕಚೇರಿ, ತಾ.ಪಂ ಕಚೇರಿ ಹಾಗೂ ಕೃಷಿ ಇಲಾಖೆ. ಇದನ್ನು ಹೊರತು ಪಡಿಸಿ ಬೇರೆ ಯಾವ ಕಚೇರಿಯೂ ತಾಲ್ಲೂಕು ಕೇಂದ್ರದಲ್ಲಿ ಆರಂಭವಾಗಿಲ್ಲ.

ADVERTISEMENT

ಉನ್ನತ ಶಿಕ್ಷಣದಿಂದ ವಂಚಿತ: ನೂತನ ತಾಲ್ಲೂಕಿನಲ್ಲಿ ಪದವಿಪೂರ್ವ, ಪದವಿ ಹಾಗೂ ಇನ್ನಿತರ ತಾಂತ್ರಿಕ ಕಾಲೇಜುಗಳು ಆರಂಭಗೊಂಡಿಲ್ಲ. ಹೀಗಾಗಿ ಇಲ್ಲಿನ ಬಡ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತಿದ್ದಾರೆ.

ರೈತರ ಪರಿಸ್ಥಿತಿ ಅಯೋಮಯ: ಇನ್ನೂ ಇಲ್ಲಿನ ರೈತರ ಪರಿಸ್ಥಿತಿ ಕೇಳುವಂತಿಲ್ಲ. ಈ ಭಾಗದಲ್ಲಿನ ನೀರಾವರಿ ಕಾಲುವೆಗಳು ಹೆಸರಿಗೆ ಮಾತ್ರ ಇದ್ದಂತಿದೆ. ಕೊನೆ ಅಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಯದೆ ಇರುವುದರಿಂದ ಹೊಲಗಳಲ್ಲಿ ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.

ಇದರಿಂದಾಗಿ ಸಾಲ ಮಾಡಿ, ದುಬಾರಿ ಬೆಲೆಯ ಬೀಜಗಳನ್ನು ತಂದು ಬಿತ್ತನೆಯನ್ನು ಮಾಡುತ್ತಾರೆ. ಇಲ್ಲಿನ ಅನೇಕ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳನ್ನು ಕಾಣಬಹುದಾಗಿದೆ.

ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಒತ್ತಾಯ:

ಬಹು ದಿನದ ಬೇಡಿಕೆಯಾದ ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಉನ್ನತಿಕರಿಸಬೇಕು ಎಂದು ಅನೇಕ ವರ್ಷಗಳಿಂದ ಇಲ್ಲಿನ ಸಂಘ–ಸಂಸ್ಥೆಗಳು, ಸಾರ್ವಜನಿಕರು ಹೋರಾಟಗಳನ್ನು ಮಾಡಿದ್ದಾರೆ. ಆದರೆ ಅವರ ಹೋರಾಟಗಳಿಗೆ ಈವರೆಗೆ ಫಲ ಸಿಕ್ಕಿಲ್ಲ.

ಮುಖ್ಯಮಂತ್ರಿಗಳು ನೂತನ ತಾಲ್ಲೂಕು ವಡಗೇರಾದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ತಾಲ್ಲೂಕು ಕಚೇರಿಗಳನ್ನು ಆರಂಭಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವಡಗೇರಾದಲ್ಲಿ ಈವರೆಗೆ ತಾಲ್ಲೂಕು ಕಚೇರಿಗಳು ಆರಂಭಗೊಂಡಿಲ್ಲ. ಇದರಿಂದ ಅಭಿವೃದ್ಧಿ ಕುಂಟಿತವಾಗಿದೆ. ಕೂಡಲೇ ತಾಲ್ಲೂಕು ಕಚೇರಿಗಳನ್ನು ಆರಂಭಿಸಲು ಕೈಗೊಳ್ಳಬೇಕು.
ಸಿದ್ದಣ್ಣಗೌಡ ಕಾಡಂನೋರ, ಬಿಜೆಪಿ ಮುಖಂಡ
ವಡಗೇರಾದಲ್ಲಿ ತಾಲ್ಲೂಕು ಕಚೇರಿಗಳು ಇಲ್ಲದಿರುವ ಕಾರಣ ದೂರದ ಶಹಾಪುರಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇದರಿಂದ ಸಮಯದ ಜತೆ ಹಣವು ಖರ್ಚಾಗುತ್ತಿದೆ. ಹಣಮಂತ ಬಸಂತಪೂರ ವಿದ್ಯಾರ್ಥಿ
ಹಣಮಂತ ಬಸಂತಪೂರ ವಿದ್ಯಾರ್ಥಿ

ತುರ್ತು ಬೇಕಾದ ತಾಲ್ಲೂಕು ಕಚೇರಿಗಳು ನೂತನ ತಾಲ್ಲೂಕು ವಡಗೇರಾ ಅಭಿವೃದ್ಧಿ ಹೊಂದಬೇಕಾದರೆ ನೋಂದಣಿ ಬಿಇಒ ಲೋಕೋಪಯೋಗಿ ಸಮಾಜ ಕಲ್ಯಾಣ ಕಚೇರಿಗಳು ಆರಂಭವಾಗಬೇಕು. ಈ ಕಚೇರಿಗಳು ವಡಗೇರಾ ಪಟ್ಟಣದಲ್ಲಿ ಇಲ್ಲದ ಕಾರಣ ಹಳೆಯ ತಾಲ್ಲೂಕು ಶಹಾಪುರಕ್ಕೆ ಹೋಗುವುದು ಸಾರ್ವಜನಿಕರಿಗೆ ಅನಿವಾರ್ಯವಾಗಿದೆ. ಇದರಿಂದಾಗಿ ರೈತರು ಸಾರ್ವಜನಿಕರು ಹಾಗೂ ಶಿಕ್ಷಕರ ಸಮಯದ ಜತೆಗೆ ಹಣವು ಪೋಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.