ADVERTISEMENT

ಯಾದಗಿರಿ ಜಿಲ್ಲೆಯಲ್ಲಿ 19 ಗ್ರಾಮಗಳಿಗೆ ಟ್ಯಾಂಕರ್ ನೀರು: ಡಿಸಿ ಎಂ.ಕೂರ್ಮಾ ರಾವ್‌

​ಪ್ರಜಾವಾಣಿ ವಾರ್ತೆ
Published 7 ಮೇ 2019, 12:34 IST
Last Updated 7 ಮೇ 2019, 12:34 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಯಾದಗಿರಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮತ್ತು ಜಾನುವಾರುಗಳಿಗೆ ಮೇವು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, 19 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಪುರ ತಾಲ್ಲೂಕಿನ ದೇಸುನಾಯಕ ತಾಂಡಾ, ನಡಿಹಾಳ, ನೀಲು ನಾಯಕ ತಾಂಡಾ, ಮಡ್ಡಿ ತಾಂಡಾ, ಅರಳಹಳ್ಳಿ, ಮುಡಬೂಳ, ಶಿರವಾಳ, ಉಕ್ಕಿನಾಳ, ಹುರಸಗುಂಡಗಿ ಹಾಗೂ ಗುಲಸರಂ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ಸುರಪುರ ತಾಲ್ಲೂಕಿನ ಶ್ರೀನಿವಾಸಪುರ, ಶ್ರೀನಿವಾಸಪುರ ತಾಂಡಾ, ವಜ್ಜಲ ತಾಂಡಾ, ತಳ್ಳಳ್ಳಿ (ಬಿ) ಹಾಗೂ ಯಾದಗಿರಿ ತಾಲ್ಲೂಕಿನ ಜಿನಕೇರಾ, ಮುದ್ನಾಳ ಸಣ್ಣ ತಾಂಡಾ, ಮುದ್ನಾಳ ದೊಡ್ಡ ತಾಂಡಾ, ಹೊರಟ್ಟಿ, ಕರೆಕಲ್ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಖಾಸಗಿ ಕೊಳವೆಬಾವಿ

ಜಿಲ್ಲೆಯಲ್ಲಿ 36 ಖಾಸಗಿ ಕೊಳವೆಬಾವಿಗಳನ್ನು ಒಪ್ಪಂದದ ಮೂಲಕ ಪಡೆದು, ನೀರು ಪೂರೈಸಲಾಗುತ್ತಿದೆ ಎಂದರು.

ಶಹಾಪುರ ತಾಲ್ಲೂಕಿನ ಅರಳಹಳ್ಳಿ ಮತ್ತು ವಡಗೇರಾ ಎಚ್., ಸುರಪುರ ತಾಲ್ಲೂಕಿನ ಎಂ.ಬೊಮ್ಮನಳ್ಳಿ, ಯಕ್ತಾಪುರ, ಬೇವಿನಳ್ಳಿ ಎಸ್.ಕೆ., ದೇವಾಪುರ ಜೆ ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ ಎಂ.ಪಾಡ, ಸುಭಾಷ್ ನಗರ, ಸಣ್ಣಸಂಬರ, ಮಾದ್ವಾರ, ಬಳಿಚಕ್ರ, ವರ್ಕನಳ್ಳಿ , ಪಂಚಶೀಲ ನಗರ, ಪಗಲಾಪುರ, ತುರ್ಕನದೊಡ್ಡಿ, ಕೊಟಗೇರಾ, ಮೋಟನಳ್ಳಿ, ಜೈಗ್ರಾಮ, ಕಾಳಬೆಳಗುಂದಿ, ಚಂಡ್ರಿಕಿ, ಧರಂಪುರ ತಾಂಡಾ, ಯಡ್ಡಳ್ಳಿ, ಮುಸ್ಲೇಪಲ್ಲಿ, ಕಣೇಕಲ್, ಸಕ್ರ್ಯಾ ನಾಯಕ ತಾಂಡಾಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

2018–19ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ 7 ಸ್ಥಳಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದ್ದು, ಈ ಮೂಲಕ ರೈತರಿಗೆ ₹ 2ಗೆ ಒಂದು ಕೆ.ಜಿ ಮೇವು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ 168 ಟನ್ ಭತ್ತದ ಹುಲ್ಲನ್ನು ಸಂಗ್ರಹಿಸಲಾಗಿದೆ. ಶಹಾಪುರ ಪಶು ಆಸ್ಪತ್ರೆ ಆವರಣ ಮತ್ತು ಕೆಂಭಾವಿ ಎಪಿಎಂಸಿಯಲ್ಲಿ 50 ಟನ್ ಜೋಳದ ಕಣಕಿ ಲಭ್ಯವಿದೆ ಎಂದು ಅವರು ವಿವರಿಸಿದರು.

ಎಲ್ಲೆಲ್ಲಿ ಮೇವು ಬ್ಯಾಂಕ್‌: ಯಾದಗಿರಿ ಎಪಿಎಂಸಿ ಆವರಣ, ಗುರುಮಠಕಲ್ ಎಪಿಎಂಸಿ ಆವರಣ, ಶಹಾಪುರ ಪಶು ಆಸ್ಪತ್ರೆ ಆವರಣ, ದೋರನಹಳ್ಳಿ ಪಶುವೈದ್ಯಕೀಯ ಡಿಪ್ಲೊಮಾ ಕಾಲೇಜು, ಸುರಪುರ ಎಪಿಎಂಸಿ ಆವರಣ, ಹುಣಸಗಿ ಯುಕೆಪಿ ಕ್ಯಾಂಪ್ ಆವರಣ ಹಾಗೂ ಕೆಂಭಾವಿ ಎಪಿಎಂಸಿ ಆವರಣದಲ್ಲಿ ಮೇವು ದೊರೆಯಲಿದೆ.

ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಗುರುತಿಸಲಾಗಿರುವ 17 ಕೆರೆಗಳ ಪೈಕಿ 16ರಲ್ಲಿ ಈಗಾಗಲೇ ಹೂಳೆತ್ತಲಾಗುತ್ತಿದ್ದು, ಎರಡನೇ ಹಂತದಲ್ಲಿ ಹೂಳೆತ್ತುವ ಕೆರೆಗಳನ್ನು ಗುರುತಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.