ADVERTISEMENT

ವಡಗೇರಾ | ತೆಲಂಗಾಣದಿಂದ ವಲಸೆ ಬಂದ ಕುರಿಗಾಹಿಗಳು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:56 IST
Last Updated 26 ಜನವರಿ 2026, 7:56 IST
ವಡಗೇರಾ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ದಂತಾಪೂರ ಗ್ರಾಮದಿಂದ ಬಂದ ಕುರಿಗಳ ಹಿಂಡು
ವಡಗೇರಾ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ದಂತಾಪೂರ ಗ್ರಾಮದಿಂದ ಬಂದ ಕುರಿಗಳ ಹಿಂಡು   

ವಡಗೇರಾ: ಕಳೆದ ಎರಡು ತಿಂಗಳ ಹಿಂದೆ ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಕುರಿಗಳಿಗೆ ಮೇವನ್ನು ಮೇಯಿಸಲು ಪಕ್ಕದ ರಾಜ್ಯವಾದ ತೆಲಂಗಾಣದಿಂದ ಕುರಿಗಾಹಿಗಳು ಬಂದಿದ್ದಾರೆ.

ಈ ಹಿಂದೆ ಈ ಭಾಗದಲ್ಲಿ ಬೆಳಗಾವಿ, ಬಾಗಲಕೋಟ, ವಿಜಯಪುರ, ಮುಧೊಳ, ಜಿಲ್ಲೆಯ ಸುರಪುರ ತಾಲ್ಲೂಕಿನಿಂದ ಕುರಿಗಾಹಿಗಳು ಕುರಿಗಳ ಜತೆ ಕಂಡು ಬರುತಿದ್ದರು. ಆದರೆ ಇದೇ ಮೊದಲ ಬಾರಿಗೆ ತೆಲಂಗಾಣದಿಂದ ಕುರಿಗಾಹಿಗಳು ಕುರಿಗಳಿಗಾಗಿ ಮೇವು ಅರಸಿ ಬಂದಿದ್ದಾರೆ.

ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ದಂತಾಪೂರ ಗ್ರಾಮದಿಂದ ಮೂರು ತಂಡಗಳು (ಗುಂಪು) ಕಳೆದ ನವಂಬರ್ ತಿಂಗಳಿನಿಂದ ವಡಗೇರಾ ತಾಲ್ಲೂಕಿನಲ್ಲಿ ಕಂಡು ಬಂದಿವೆ . ಒಂದು ಗುಂಪಿನಲ್ಲಿ ಸುಮಾರು 650 ರಿಂದ 700 ರವರೆಗೆ ಕುರಿಗಳು ಇವೆ. ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಸಿ ಹಾಗೂ ಒಣ ಮೇವು ಸಾಕಷ್ಟು ಇದೆ. ಅಲ್ಲದೆ ಕೆರೆಗಳಲ್ಲಿ, ತಗ್ಗು ಪ್ರದೇಶದಲ್ಲಿ ಹಾಗೂ ಹಳ್ಳಗಳಲ್ಲಿ ನೀರು ಸಾಕಷ್ಟು ಇರುವುದರಿಂದ ಕುರಿಗಳಿಗೆ ಯಾವುದೆ ಸಮಸ್ಯೆಯಾಗುವುದಿಲ್ಲ ಎಂದು ಕುರಿಗಾಹಿಗಳು ಈ ಭಾಗಕ್ಕೆ ವಲಸೆ ಬರುತ್ತಾರೆ.

ADVERTISEMENT

ಯಾರಾದರೂ ರೈತರು ತಮ್ಮ ಜಮೀನಿನಲ್ಲಿ ಕುರಿಗಳನ್ನು ರಾತ್ರಿ ಸಮಯದಲ್ಲಿ ತಂಗಲು (ಬಿಡು ಬಿಡಲು) ಹೇಳಿದರೆ ಈ ಹಿಂದೆ ಕುರಿಗಾಹಿಗಳಿಗೆ ಆಹಾರ ಧಾನ್ಯಗಳು, ಊಟ ಹಾಗೂ ಬಟ್ಟೆಗಳನ್ನು ಕೊಡುತಿದ್ದರು.

ಆದರೆ ಕಾಲ ಬದಾದಂತೆ ಕುರಿಗಾಹಿಗಳು ಸಹ ಬದಲಾಗಿದ್ದಾರೆ. ಕುರಿಗಳನ್ನು ರಾತ್ರಿ ಸಮಯದಲ್ಲಿ ತಂಗಲು ಬಿಡಬೇಕಾದರೆ ಕುರಿಗಾಹಿಗಳಿಗೆ ಇಂತಿಷ್ಟು ಹಣವನ್ನು ಕೊಡಬೇಕು. ರೈತರು ಕುರಿಗಾಹಿಗಳಿಗೆ ಹಣವನ್ನು ಕೊಟ್ಟು ಜಮೀನುಗಳಲ್ಲಿ ಕುರಿಗಳನ್ನು ತಂಗಲು ಹೇಳುತ್ತಾರೆ.

ಕುರಿಗಳ ಗೊಬ್ಬರ ಹಾಗೂ ಮೂತ್ರ ಜಮೀನುಗಳಿಗೆ ಸಾವಯವ ಗೊಬ್ಬರ ಕೊಡುವದರ ಜತೆಗೆ ಜಮೀನಿನ ಫಲವತ್ತತೆ ಹಾಗೂ ಬೆಳೆಗಳ ಇಳುವರಿಗೆ ಬಹಳ ಬಹಳ ಉಪಯುಕ್ತವಾಗಿದೆ ಅದಕ್ಕಾಗಿ ಬಹಳಷ್ಟು ರೈತರು ಕುರಿಗಳನ್ನು ತಮ್ಮ ಜಮೀನುಗಳಲ್ಲಿ ತಂಗಿಸುತ್ತಾರೆ.

ಅಲೆಮಾರಿಗಳು: ಚಳಿ, ಗಾಳಿಗೆ ಎದೆಗುಂದದೆ ಚಿಕ್ಕ ಚಿಕ್ಕ ಟೆಂಟ್‌ಗಳನ್ನು ಬಯಲು ಜಮೀನಿನಲ್ಲಿ ಹಾಕಿಕೊಂಡು ಕುಟುಂಬ ಸಮೇತವಾಗಿ ಕುರಿಗಳನ್ನು ಮೇಯಿಸುತ್ತಾ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಕುರಿಗಾಹಿಗಳು ವಲಸೆ ಹೋಗುತ್ತಾರೆ.

ಕುರಿಗಾಹಿಗಳ ಜತೆ ಕುದರೆಗಳು ಹಾಗೂ ನಾಯಿಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಕುದರೆಗಳನ್ನು ತಮ್ಮ ಸಾಮಾನುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸಲು ಬಳಸುತ್ತಾರೆ. ಇನ್ನೂ ನಾಯಿಗಳು ರಾತ್ರಿ ಸಮಯದಲ್ಲಿ ಕುರಿಗಳನ್ನು ಕಾವಲು ಕಾಯಲು ಬಳಸುತ್ತಾರೆ.

ರಾತ್ರಿ ಸಮಯದಲ್ಲಿ ಕುರಿಗಳ್ಳರ ಹಾವಳಿ ಹೆಚ್ಚಾಗಿರುವುದರಿಂದ ಹಾಗೂ ನಮ್ಮ ಆತ್ಮ ರಕ್ಷಣೆಗಾಗಿ ಬಂದೂಕುಗಳ ಅವಶ್ಯಕತೆ ಬಹಳ ಇದೆ. ಹೀಗಾಗಿ ಸರ್ಕಾರ ಬಂದೂಕುಗಳನ್ನು ಬಳಸಲು ಪರವಾನಿಗೆ ಕೊಡಬೇಕು ಎಂಬುವದು ಕುರಿಗಾಹಿಗಳ ಬಹಳ ದಿನಗಳ ಬೇಡಿಕೆಯಾಗಿದೆ.

ಮಲ್ಲೇಶಿ
ಕಳೆದ ಮೂರು ತಿಂಗಳ ಹಿಂದೆ ನಮ್ಮೂರನ್ನು ಬಿಟ್ಟದ್ದೇವೆ. ಬೇಸಿಗೆ ಆರಂಭವಾದರೆ ಈ ಭಾಗದಲ್ಲಿ ಕುರಿಗಳಿಗೆ ಮೇವು ಸಿಗುವುದಿಲ್ಲ. ಹೀಗಾಗಿ ಇನ್ನೂ15 -20 ದಿನಗಳಲ್ಲಿ ಕುರಿಗಳನ್ನು ಮೇಯಿಸುತ್ತಾ ನಮ್ಮೂರ ಕಡೆ ಹೋಗುತ್ತೇವೆ
ಮಲ್ಲೇಶಿ ಕುರಿಗಾಹಿ
ಕುರಿಗಳು ಜಮೀನುಗಳಲ್ಲಿ ತಂಗುವದರಿಂದ ಜಮೀನುಗಳಿಗೆ ಕುರಿಗಳ ಗೊಬ್ಬರದಿಂದ ನೈಟ್ರೋಜನ್ ಫಾಸ್ಪರಸ ಪೊಟ್ಯಾಸಿಯಂ ಹಾಗೂ ಮೂತ್ರದಿಂದ ಅಮೋನಿಕಲ್ ಫಾರ್ಂ ಸಿಗುತ್ತದೆ . ಇದು ಮುಂಬರುವ ಮಂಗಾರು ಬೆಳೆಗಳಿಗೆ ಅನುಕೂಲವಾಗುತ್ತದೆ
ಗಣಪತಿ ಕೃಷಿ ಅದಿಕಾರಿ ವಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.