ADVERTISEMENT

ವಡಗೇರಾ | ಚಾಲಕನ ನಿಯಂತ್ರಣ ತಪ್ಪಿ ವಾಲಿದ ಬಸ್‌

ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:18 IST
Last Updated 9 ನವೆಂಬರ್ 2023, 16:18 IST

ವಡಗೇರಾ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತಿರ ಸಾರಿಗೆ ಬಸ್ ಸ್ಟೇರಿಂಗ್ ರಾಡ್‌ಕಟ್ ಆಗಿ ರಸ್ತೆ ಬದಿ ಇರುವ ಗುಂಡಿಗೆ ಉರುಳಿರುವುದು
ವಡಗೇರಾ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತಿರ ಸಾರಿಗೆ ಬಸ್ ಸ್ಟೇರಿಂಗ್ ರಾಡ್‌ಕಟ್ ಆಗಿ ರಸ್ತೆ ಬದಿ ಇರುವ ಗುಂಡಿಗೆ ಉರುಳಿರುವುದು   

ವಡಗೇರಾ: ಪಟ್ಟಣದ ತುಮಕೂರು–ವಡಗೇರಾ ಮಾರ್ಗ ಮಧ್ಯೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನ ಸ್ಟೇರಿಂಗ್ ರಾಡ್ ಮುರಿದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಪಕ್ಕಕ್ಕೆ ಹೋಗಿ ಉರುಳಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಗುರುವಾರ ಯಾದಗಿರಿಯಿಂದ ಬೆಂಡೆಬೆಂಬಳಿ ಹೋಗಿ ಮರಳಿ ಯಾದಗಿರಿಗೆ ಬರುವ ಮಾರ್ಗದಲ್ಲಿ ಈ ಘಟನೆ ಜರುಗಿದ್ದು, ಬಸ್‌ನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ನೂತನ ಬಸ್ ಓಡಿಸಲು ಆಗ್ರಹ:

ADVERTISEMENT

ವಡಗೇರಾ ಭಾಗಕ್ಕೆ ಸಾರಿಗೆ ಇಲಾಖೆಯಿಂದ ಹಳೆಯದಾದ ಬಸ್‌ಗಳು ಓಡಿಸುತ್ತಿರುವುದು ಈ ಘಟನೆಗೆ ಪ್ರಮುಖ ಕಾರಣವಾಗಿದೆ. ಈ ಹಿಂದೆಯೂ ಅನೇಕ ವೇಳೆ ಇಂಥ ಘಟನೆಗಳು ಜರುಗಿವೆ. ಇದರ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವಡಗೇರಾ ತಾಲ್ಲೂಕು ಅಧ್ಯಕ್ಷ ವಿದ್ಯಾಧರ ಜಾಕಾ ಆಗ್ರಹಿಸಿದ್ದಾರೆ.

ಈ ಭಾಗದಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ವಿದ್ಯಾಭ್ಯಾಸ ಮಾಡಲು ಹೋಗುತ್ತಾರೆ. ಆದರೆ, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್‌ಗಳ ಅನುಕೂಲವಿಲ್ಲ. ಈ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದು ಇಲ್ಲವೆ ಅಪಘಾತಕ್ಕೆ ಒಳಗಾಗುವುದು ಸರ್ವೇ ಸಾಮಾನ್ಯವಾಗಿವೆ. ಯಾದಗಿರಿಯಿಂದ ವಡಗೇರಾಕ್ಕೆ ಸಿಟಿ ಬಸ್ ಕೂಡಲೇ ಆರಂಭಿಸಬೇಕು. ವಡಗೇರಾ ಭಾಗಕ್ಕೆ ಹೊಸ ಬಸ್‌ಗಳನ್ನು ಓಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಅಧಿಕಾರಿಗಳು ಇದರ ಬಗ್ಗೆ ಉದಾಸೀನತೆ ತೋರಿದರೆ ರೈತ ಸಂಘದಿಂದ ವಡಗೇರಾ ಪಟ್ಟಣದ ಮುಖ್ಯ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಪ್ಪಿದ ಭಾರಿ ಅನಾಹುತ ಯಾದಗಿರಿ: ಮಿನಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು ಭಾರಿ ಅನಾಹುತ ತಪ್ಪಿದ ಘಟನೆ ತಾಲ್ಲೂಕಿನ ಹತ್ತಿಕುಣಿ ಅರಣ್ಯ ಪ್ರದೇಶದ‌ ಬಳಿ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಯಾದಗಿರಿಯಿಂದ ಸೇಡಂ ಕಡೆ ಹೊರಟಿದ್ದ ಬಸ್‌ಗೆ ಮಿನಿ ಲಾರಿ ಗುದ್ದಿದೆ. ಮಿನಿ ಲಾರಿಯಲ್ಲಿ ಭತ್ತದ ಕಟಾವ್ ಯಂತ್ರ ಸಾಗಿಸಲಾಗುತ್ತಿತ್ತು. ಬಸ್ ಡ್ರೈವರ್‌ಗೆ ಗಂಭೀರ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.