ADVERTISEMENT

ಯಾದಗಿರಿ: ಇನ್ನೂ ಪತ್ತೆಯಾಗದ ಸಂಗಮೇಶ್ವರ ಮೂರ್ತಿ‌‌‌

ಜೂನ್‌ 16ರಂದು ಕಳವು; ದುಷ್ಕರ್ಮಿಗಳ ಪತ್ತೆಗೆ ಭಕ್ತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 16:26 IST
Last Updated 30 ಜೂನ್ 2021, 16:26 IST
ಸಂಗಮೇಶ್ವರ ಮೂರ್ತಿ
ಸಂಗಮೇಶ್ವರ ಮೂರ್ತಿ   

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೃಷ್ಣಾ-ಭೀಮಾ ನದಿಗಳ ಸಂಗಮ ಸ್ಥಳದಲ್ಲಿರುವ ಸಂಗಮೇಶ್ವರ ದೇವಸ್ಥಾನದಲ್ಲಿ ಮೂರ್ತಿ ಕಳವಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.

ಜೂನ್‌ 16ರಂದು ರಾತ್ರಿ ದೇವರ ಮೂರ್ತಿ ಕಳವು ಮಾಡಿರುವ ದುಷ್ಕರ್ಮಿಗಳು, ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣ ದೋಚಿದ್ದಾರೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಳವಾಗಿರುವ ಬೆಳ್ಳಿಯ ಮೂರ್ತಿಯ ಮೌಲ್ಯ ₹2.5 ಲಕ್ಷ. ಈ ಪ್ರಕರಣದ ಹಿಂದೆ ಶ್ರೀಗಳ ವಿರುದ್ಧ ಇರುವ ವ್ಯಕ್ತಿಗಳ ಕೈವಾಡವಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು’ ಎಂದು ಭಕ್ತರು ಒತ್ತಾಯಿಸಿದ್ದಾರೆ.

ADVERTISEMENT

ದೇವಸ್ಥಾನದಲ್ಲಿ 4 ತಾಮ್ರ ಶಾಸನ, ಒಂದು ಹಳೆಗನ್ನಡ, ಒಂದು ದೇವನಾಗರ ಲಿಪಿ ಶಾಸನಗಳು ಇವೆ. ಇಲ್ಲಿ ನಿಧಿ ಇದೆ ಎಂದು ಕಳ್ಳರು ದೇವಸ್ಥಾನದ ಒಳಗಡೆ ಇರುವ ಶಿವಲಿಂಗ ಹಾಗೂ ಹೊರಗಿರುವ ದೇವಿ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ಅಲ್ಲದೆ, ತಗ್ಗುಗಳನ್ನು ತೋಡಿ ಹುಡುಕಾಟ ನಡೆಸಿದ್ದಾರೆ.

‘ಸಂಗಮೇಶ್ವರ ದೇವಸ್ಥಾನದ ಕರುಣೇಶ್ವರ ಸ್ವಾಮೀಜಿ 2015ರಲ್ಲಿ ದೇವಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಂದಿನಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಭಕ್ತರೂ ಹೆಚ್ಚು ಇದ್ದಾರೆ. ಇದನ್ನು ಸಹಿಸದೇ ಇರುವವರು ಅವರನ್ನು ಇಲ್ಲಿಂದ ಕಳಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ದೇವಸ್ಥಾನಕ್ಕೆ ಭಕ್ತರ ನೆರವು
ಸಂಗಮೇಶ್ವರ ದೇವಸ್ಥಾನಕ್ಕೆ ಹಲವು ಭಕ್ತರು ಸಾಕಷ್ಟು ನೆರವು ನೀಡಿದ್ದಾರೆ. ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ, ವೀರಶೈವ ಸಮಾಜದ ಹಿರಿಯ ಮುಖಂಡರಾಗಿದ್ದ ಲಿಂ.ಲಿಂಗಣ್ಣಗೌಡ ಮಲ್ಹಾರ ಹಾಗೂ ಈ ಭಾಗದ ಭಕ್ತರು ಸೇರಿ ದೇವಸ್ಥಾನ ಜೀರ್ಣೋದ್ಧಾರಗೊಳಿಸಿದ್ದಾರೆ. ಪ್ರತಿ ವರ್ಷ ಸಂಕ್ರಮಣ ದಿನದಂದು ಸಂಗಮೇಶ್ವರ ಜಾತ್ರೆ ನಡೆಯುತ್ತದೆ.

ಕರುಣೇಶ್ವರ ಸ್ವಾಮೀಜಿ ಅವರು ಸಂಗಮ ಕ್ಷೇತ್ರದ ಅಭಿವೃದ್ಧಿಗೆ ಜನಪ್ರತಿನಿಧಿಗಳ ಸಹಕಾರದಿಂದ ಸುಮಾರು ₹2 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.

***
ಸಂಗಮ ದೇವಸ್ಥಾನದ ಮೂರ್ತಿ ಕಳ್ಳತನಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕ್ರೈಂ ಪಿಎಸ್‌ಐ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
-ಸಿದ್ದರಾಯ ಬಳೂರ್ಗಿ, ವಡಗೇರಾ ಪಿಎಸ್‌ಐ

***
ನಮ್ಮ ಏಳಿಗೆ ಸಹಿಸದವರು ಈ ಕೃತ್ಯ ಮಾಡಿರುವ ಸಾಧ್ಯತೆ ಇದೆ. ಪೊಲೀಸರು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
-ಕರುಣೇಶ್ವರ ಸ್ವಾಮೀಜಿ, ದೇವಸ್ಥಾನದ ಆರ್ಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.