ಯಾದಗಿರಿ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಿಡಾಡಿ ದನಗಳು ರಸ್ತೆಯನ್ನು ಆಕ್ರಮಿಸಿಕೊಂಡು ರಸ್ತೆ ಮಧ್ಯೆ ಮತ್ತು ರಸ್ತೆ ವಿಭಜಕದಲ್ಲಿ ಮಲಗುವುದರಿಂದ ಆತಂಕದಲ್ಲೇ ಬೈಕ್ ಸವಾರರು ಸಂಚರಿಸುತ್ತಿದ್ದಾರೆ.
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಉದ್ದಕ್ಕೂ ಬಿಡಾಡಿ ದನಗಳು ಬಿಡಾರ ಹೂಡಿರುವುದು ಪ್ರತಿ ನಿತ್ಯ ಕಂಡು ಬರುತ್ತಿದೆ. ರಸ್ತೆ ವಿಭಜಕದ ಮಧ್ಯೆ ಅರಣ್ಯ ಇಲಾಖೆ ವತಿಯಿಂದ ಸಸಿ ನೆಟ್ಟಿದ್ದು, ಅಲ್ಲಿಯೇ ರಾಸುಗಳು ಆಶ್ರಯ ಪಡೆದಿವೆ.
ನಗರದ ಹೊಸ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ, ಚಿತ್ತಾಪುರ ರಸ್ತೆ, ಗ್ರಾಮೀಣ ಪೊಲೀಸ್ ಠಾಣೆ ರಸ್ತೆ, ನೇತಾಜಿ ಸುಭಾಶ್ಚಂದ್ರ ಬೋಸ್ ಚೌಕ್, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ಪ್ರದೇಶ ಇನ್ನಿತರ ಕಡೆ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿಕೊಂಡು ಸಂಚಾರಕ್ಕೆ ತೊಂದರೆ ಮಾಡುತ್ತಿವೆ.
ಬಿಡಾಡಿ ದನಗಳ ಕಾರಣದಿಂದ ಸಾಕಷ್ಟು ಬೈಕ್ ಸವಾರರು, ಆಟೊ, ಕಾರುಗಳ ಚಾಲಕರು ದನಗಳಿಂದ ನಿಯಂತ್ರಣ ತಪ್ಪಿ ಅಪಘಾತ ಮಾಡಿಕೊಂಡಿದ್ದಾರೆ. ದನಗಳು ಒಂದಕ್ಕೊಂದು ಜಗಳವಾಡುವಾಗ ಪಾದಚಾರಿಗಳಿಗೆ ಡಿಕ್ಕಿಯಾಗಿ ಗಾಯಗೊಂಡ ಪ್ರಕರಣಗಳು ಇವೆ.
ಬಿಡಾದಿ ದನಗಳು ರಸ್ತೆ ಬದಿ ಬಿಸಾಡಿರುವ ತ್ಯಾಜ್ಯ ವಸ್ತುಗಳನ್ನು ಸೇವಿಸುತ್ತವೆ. ಆ ಬದಿ ರಸ್ತೆಯಿಂದ ಈ ಬದಿ ರಸ್ತೆಯವರೆಗೆ ಸರಾಗವಾಗಿ ರಸ್ತೆ ದಾಟುತ್ತವೆ. ಇದರಿಂದ ವಾಹನ ಸವಾರರು ಜಾಗೃತೆಯಿಂದ ಸಂಚಾರ ಮಾಡಬೇಕಿದೆ.
‘ನಗರದಲ್ಲಿ ಬಿಡಾಡಿ ದನಗಳು ರಸ್ತೆಗಳಲ್ಲಿ ತಿರುಗಾಡುತ್ತಿದ್ದು, ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ರಸ್ತೆ ವಿಭಜದ ಮೇಲೆ ಮಲಗಿಕೊಂಡು ದಿಢೀರನೇ ಎದ್ದು ವಾಹನ ಸವಾರರು ಗೊಂದಲಕ್ಕೀಡು ಆಗುವಂತೆ ಮಾಡುತ್ತವೆ. ಮೈಮರೆತರೆ ನೇರವಾಗಿ ವಾಹನಗಳಿಗೆ ಡಿಕ್ಕಿ ಹೊಡೆಯುತ್ತವೆ’ ಎನ್ನುತ್ತಾರೆ ನಗರ ನಿವಾಸಿ ಚಂದ್ರಶೇಖರ ಕಲಪಟ್ಟಿ.
ಈಗಾಗಲೇ ದನಗಳ ಮಾಲಿಕರಿಗೆ ರಸ್ತೆಗೆ ಬಿಡದಂತೆ ಸೂಚನೆ ನೀಡಿ ವಾಹನಗಳಲ್ಲಿ ಪ್ರಚಾರ ಕೂಡ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದಾಳಿ ಮಾಡಿ ಗೋಶಾಲೆಗೆ ಬಿಡಲಾಗುವುದುಲಕ್ಷ್ಮೀಕಾಂತ ಪ್ರಭಾರ ಪೌರಾಯುಕ್ತ ನಗರಸಭೆ ಯಾದಗಿರಿ
ಹಳೆ ಬಸ್ ನಿಲ್ದಾಣದಲ್ಲಿ ರಾಸುಗಳ ಓಡಾಟ ಕಡಿಮೆ ಇದೆ. ಆದರೆ ಹೊಸ ಬಸ್ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಸಮಸ್ಯೆಯಿಂದ ಬಿಡಾದಿ ದನಗಳು ನಿಲ್ದಾಣಕ್ಕೆ ಬರುತ್ತಿವೆ. ಶೀಘ್ರ ಕ್ರಮ ವಹಿಸಲಾಗುವುದುಸುನಿಲ್ ಚಂದರಗಿ ಕೆಕೆಆರ್‌ಟಿಸಿ ನಿಯಂತ್ರಣಾಧಿಕಾರಿ ಯಾದಗಿರಿ
ರಾಸುಗಳ ತಾಣವಾದ ಬಸ್ ನಿಲ್ದಾಣ ನಗರದಲ್ಲಿ ಆಗಾಗ ತುಂತುರು ಮಳೆಯಾಗುತ್ತಿದ್ದು ಸ್ವಲ್ಪ ಮಳೆಯಾದರೂ ರಾತ್ರಿ ವೇಳೆ ಬಿಡಾಡಿ ದನಗಳು ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿವೆ. ಇದರಿಂದ ಪ್ರಯಾಣಿಕರು ದನಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ. ನಿಲ್ದಾಣದ ಫ್ಲಾಟ್ ಫಾರಂಗಳಲ್ಲಿ ದನಗಳು ನಿಂತಿರುವುದರಿಂದ ಬಸ್‌ಗಳು ಬಂದಾಗ ಪ್ರಯಾಣಿಕರು ದನಗಳ ಮಧ್ಯೆ ಬಸ್ ಹತ್ತಬೇಕಿದೆ. ‘ಇತ್ತಿಚಿನ ದಿನಗಳಲ್ಲಿ ಬಸ್ ನಿಲ್ದಾಣ ರಸ್ತೆ ಮಧ್ಯೆ ಬಿಡಾಡಿ ದನಗಳು ಹೆಚ್ಚಾಗಿವೆ. ಇವುಗಳನ್ನು ನಿಯಂತ್ರಿಸಬೇಕಾದವರು ಕಣ್ಮುಚ್ಚಿ ಕುಳಿತ್ತಿದ್ದಾರೆ. ಇದರಿಂದ ಸಾರ್ವಜನಿಕರು ಪ್ರಯಾಣಿಕರು ಪರದಾಡುತ್ತಿದ್ದು ಕೂಡಲೇ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ನಗರ ನಿವಾಸಿ ಬಸವರಾಜ ಬೊಂಬಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.