ADVERTISEMENT

ವಡಗೇರಾ: ಆರಂಭವಾಗದ ಅಗ್ನಿಶಾಮಕ ಠಾಣೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 7:58 IST
Last Updated 27 ಏಪ್ರಿಲ್ 2025, 7:58 IST
ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಇರುವ ಅಗ್ನಿಶಾಮಕ ಠಾಣೆ
ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಇರುವ ಅಗ್ನಿಶಾಮಕ ಠಾಣೆ   

ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಗ್ನಿಶಾಮಕ ಠಾಣೆ ಇಲ್ಲದೇ ಇರುವುದರಿಂದ ಆಸ್ತಿ–ಪಾಸ್ತಿಗಳ ಹಾನಿಯಾಗಿ ತಾಲ್ಲೂಕಿನ ಜನರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ಸಂಭವಿಸಿದರೆ ದೂರದ ಜಿಲ್ಲಾ ಕೇಂದ್ರ ಯಾದಗಿರಿ ಇಲ್ಲವೇ ಶಹಾಪುರದಿಂದ ಅಗ್ನಿಶಾಮಕ ದಳದ ವಾಹನಗಳು ಬರಬೇಕು. ದೂರದ ಕೇಂದ್ರಗಳಿಂದ ಅಗ್ನಿಶಾಮಕ ದಳದ ವಾಹನಗಳು ಬರುವ ವೇಳೆಗೆ ಬೆಂಕಿ ಹೊತ್ತಿಕೊಂಡ ಹುಲ್ಲಿನ ಬಣವೆ, ಜಮೀನುಗಳಲ್ಲಿನ ಕಬ್ಬು, ಹತ್ತಿ ಬೆಳೆ, ಮನೆ, ಕಟ್ಟಡ, ಇತರ ಆಸ್ತಿಪಾಸ್ತಿಗಳು ಬಹುತೇಕ ಭಸ್ಮವಾಗಿರುತ್ತವೆ. ಆಗಾಗ ಕಾಣಿಸಿಕೊಳ್ಳುವ ಆಕಸ್ಮಿಕವಾಗಿ ಬೆಂಕಿಯನ್ನು ನಂದಿಸಲು ತಾಲ್ಲೂಕಿನ ವ್ಯಾಪ್ತಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ.

ಕೊನೆ ಅಂಚಿನ ಗ್ರಾಮಗಳು ಬಹಳ ದೂರ: ತಾಲ್ಲೂಕಿನ ವ್ಯಾಪ್ತಿಯ ಕೊನೆ ಅಂಚಿನ  ಗ್ರಾಮಗಳಾದ ಅಗ್ನಿಹಾಳ, ಕೊಂಗಂಡಿ, ಸೂಗರು, ಶಿವಪುರ, ಗೋನಾಲ, ಸಂಗಮ, ಗುಂಡ್ಲೂರ ಗ್ರಾಮಗಳು ತಾಲ್ಲೂಕು ಕೇಂದ್ರದಿಂದ ಸುಮಾರು 25 ರಿಂದ 30 ಕಿ.ಮೀ ಅಂತರದಲ್ಲಿ ಇವೆ.ಈ ಗ್ರಾಮಗಳಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಸುಮಾರು 50 ಕಿ.ಮೀ ಅಂತರದಲ್ಲಿ ಇರುವ ಯಾದಗಿರಿ, 45 ರಿಂದ 50 ಕಿ.ಮೀ ಅಂತರದಲ್ಲಿರುವ ಶಹಾಪುರದಿಂದ ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಬರಬೇಕು. ಅವು ಬರುವಷ್ಟರಲ್ಲಿ ಎಲ್ಲವೂ ಬೂದಿಯಾಗಿರುತ್ತದೆ.

ADVERTISEMENT

‘ಕಳೆದ ಎರಡ್ಮೂರು ತಿಂಗಳ ಹಿಂದೆ ಶಿವಪುರ ಗ್ರಾಮದಲ್ಲಿ ದಾಳಿಂಬೆ ತೋಟದಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿತ್ತು. ಯಾದಗಿರಿಯಿಂದ ಅಗ್ನಿಶಾಮಕ ವಾಹನಗಳು ಬರುವಷ್ಟರಲ್ಲಿ ತೋಟ ಸಂಪೂರ್ಣವಾಗಿ ಹಾನಿಯಾಗಿತ್ತು. ಹಾಗಾಗಿ ಶೀಘ್ರದಲ್ಲೇ ವಡಗೇರಾದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೊಂಗಂಡಿ ಗ್ರಾಮದ ಮುಖಂಡ ಸೂಗರಡ್ಡಿಗೌಡ ಪೊಲೀಸ ಪಾಟೀಲ್ ಒತ್ತಾಯಿಸಿದರು

‘ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಬೆಂಕಿ ಅವಘಡದ 9 ಪ್ರಕರಣಗಳು ದಾಖಲಾಗಿವೆ’ ಎಂದು ಯಾದಗಿರಿ ಅಗ್ನಿಶಾಮಕ ಠಾಣೆಯ ಅಧಿಕಾರಿ ವಿರೇಶ್ ಉಕ್ಕಡ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೆ ಕೆ ಸೆಫ್ -2 ರಲ್ಲಿ ವಡಗೇರಾದಲ್ಲಿ ಅಗ್ನಿಶಾಮಕ ಠಾಣೆ ಮಂಜೂರಾಗಿದೆ ಆದರೆ ಅದು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಬೇಗ ಅಗ್ನಿಶಾಮಕ ಠಾಣೆ ಆರಂಭಿಸಲು ಕ್ರಮ ಕೈಗೊಂಡರೆ ತಾಲ್ಲೂಕಿನ ಜನರ ಆಸ್ತಿ–‍ಪಾಸ್ತಿಗಳ ಹೆಚ್ಚಿನ ಹಾನಿಯನ್ನು ತಪ್ಪಿಸಲು ಅನುಕೂಲವಾಗುತ್ತದೆ’ ಎಂಬುದು ಇಲ್ಲಿನ ಜನರ ಒತ್ತಾಸೆಯಾಗಿದೆ.

ಅಗ್ನಿಶಾಮಕ ಠಾಣೆ ಆರಂಭಕ್ಕಾಗಿ ಪಟ್ಟಣದ ಮೊರಾರ್ಜಿ ವಸತಿ ಶಾಲೆಯ ಎದುರು ಇರುವ ಸರ್ವೆ ನಂ 581 ರಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದೆ.
ಶ್ರೀನಿವಾಸ ಚಾಪೆಲ್ ವಡಗೇರಾ ತಹಶೀಲ್ದಾರ್‌
ಕೇಂದ್ರ ಸರ್ಕಾರದಿಂದ ಕಟ್ಟಡ ಕಟ್ಟಲು ಹಾಗೂ ಮೂಲ ಸೌಕರ್ಯಗಳಿಗಾಗಿ ಅನುದಾನ ಬಂದಿಲ್ಲ. ಅನುದಾನ ಬಂದ ತಕ್ಷಣ ಟೆಂಡರ್ ಕರೆದು ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ರವೀಂದ್ರ ಘಾಡ್ಗೆ ಪ್ರಭಾರ ಜಿಲ್ಲಾ ಅಧಿಕಾರಿ ಅಗ್ನಿಶಾಮಕ ದಳ ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.