ADVERTISEMENT

ಯಾದಗಿರಿ | ಮೂರು ಕ್ಷೇತ್ರಗಳಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು

ಜಿಲ್ಲೆಯ ನಾಲ್ಕೂ ಮತಕ್ಷೇತ್ರ ವಶಕ್ಕೆ ಪಡೆಯಲು ಬಿಜೆಪಿ ಯೋಜನೆ

ಬಿ.ಜಿ.ಪ್ರವೀಣಕುಮಾರ
Published 24 ಫೆಬ್ರುವರಿ 2023, 19:30 IST
Last Updated 24 ಫೆಬ್ರುವರಿ 2023, 19:30 IST
   

ಯಾದಗಿರಿ: 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ಈ ಬಾರಿ ನಾಲ್ಕೂ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದು, ಆಕಾಂಕ್ಷಿಗಳ ದಂಡು ಹೆಚ್ಚಿದೆ.

ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಯಾದಗಿರಿ, ಸುರಪುರ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ, ಶಹಾಪುರ ಕಾಂಗ್ರೆಸ್‌, ಗುರುಮಠಕಲ್‌ ಕ್ಷೇತ್ರದಲ್ಲಿ ಜೆಡಿಎಸ್‌ ಗೆದ್ದಿದೆ. 2023ರ ಚುನಾವಣೆಯಲ್ಲಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಯೋಜನೆ ರೂಪಿಸಿಕೊಂಡಿವೆ.

ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚು: ಸುರಪುರ ಹೊರತು ಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಒಳಗೊಳಗೆ ತಾವು ಆಕಾಂಕ್ಷಿ ಎಂದು ತಮ್ಮ ಬೆಂಬಲಿಗರ ಮೂಲಕ ತೋರ್ಪಡಿಸಿಕೊಳ್ಳುತ್ತಿದ್ದಾರೆ.

ADVERTISEMENT

ಯಾದಗಿರಿ ಮತಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಪುನರಾಯ್ಕೆ ಬಯಸಿದ್ದಾರೆ. ಆದರೆ, ಇವರ ಜೊತೆಗೆ ಅನೇಕರು ಟಿಕೆಟ್‌ ಆಕಾಂಕ್ಷಿಗಳೆಂದು ಬಹಿರಂಗವಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ಮಾಜಿ ಶಾಸಕ, ಹಾಲಿ ಶಾಸಕರ ಸಹೋದರ ಡಾ.ವೀರಬಸವಂತರೆಡ್ಡಿ ಮುದ್ನಾಳ ಹೈಕಮಾಂಡ್‌ ಸೂಚಿಸಿದರೆ ಸ್ಪರ್ಧಿಸುವುದಾಗಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. ಕಳೆದ ಬಾರಿ ಕ್ಷೇತ್ರವನ್ನು ಬಿಟ್ಟು ಕೊಟ್ಟ ಅವರಿಗೆ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇದೆ. ಹೀಗಾಗಿ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿಯೂ ತಾವು ಪಕ್ಷಕ್ಕಾಗಿ ದುಡಿದಿದ್ದು, ತಾವು ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಸ್ಪರ್ಧೆಯ ಇಂಗಿತವನ್ನು ತೋರ್ಪಡಿಸಿಕೊಂಡಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ತಮಗೆ ಪಕ್ಷವೂ ಗುರುತಿಸಲಿದೆ ಎಂದು ಬೆಂಬಲಿಗರ ಜೊತೆಗೆ ಹೇಳಿಕೊಳ್ಳುತ್ತಿದ್ದಾರೆ.

ನಗರಸಭೆ ಸದಸ್ಯ ಅಂಬಯ್ಯ ಶಾಬಾದಿಯವರು ಮನೆ ಮನೆಗೆ ಬಿಜೆಪಿ ಕಾರ್ಯಕ್ರಮಗಳನ್ನು ತಮ್ಮ ಬೆಂಬಲಿಗರ ಜೊತೆಗೆ ತೆರಳಿ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ಮೂಲಕ ಆಕಾಂಕ್ಷಿ ಪಟ್ಟಿಗೆ ಸೇರಿದ್ದಾರೆ.

ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಪುತ್ರಿ ಡಾ.ಅನುರಾಗ ಮಾಲಕರಡ್ಡಿ ಈಗಾಗಲೇ ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೂ ತಮ್ಮ ತಂದೆಯವರು ಬಿಜೆಪಿಯಲ್ಲಿರುವುದರಿಂದ ಬಿಜೆಪಿ ಟಿಕೆಟ್‌ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ ಮಾಗನೂರ, ಜಿಲ್ಲಾ ಉಪಾಧ್ಯಕ್ಷ ಚನ್ನಾರೆಡ್ಡಿ ಬಿಳ್ಹಾರ ಯಾದಗಿರಿ ಮತಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಗುರುಮಠಕಲ್‌ ಮತಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕ್ಷೇತ್ರ ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ ಸಾಗಿದೆ. ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಬಿಜೆಪಿ ರಾಜ್ಯ ವಿಶೇಷ ಸದಸ್ಯೆ ನಾಗರತ್ನ ಕುಪ್ಪಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ, ಕಾಡಾ ಮಾಜಿ ಅಧ್ಯಕ್ಷ ಗಿರೀಶ ಮಟ್ಟೆಣ್ಣನವರ್‌ ಟಿಕೆಟ್‌ ಆಕಾಂಕ್ಷಿ ರೇಸ್‌ನಲ್ಲಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಮೂವರಿದ್ದು, ಯಾರಿಗೂ ಟಿಕೆಟ್‌ ಸಿಗುತ್ತದೆ ಎಂದು ಜನರಲ್ಲಿ ಕುತೂಹಲ ಮನೆ ಮಾಡಿದೆ. ಮಾಜಿ ಶಾಸಕ ಗುರುಪಾಟೀಲ ಶಿರವಾಳ ಟಿಕೆಟ್‌ ಆಕಾಂಕ್ಷಿಯಾಗಿದ್ದರೆ, ಇದಕ್ಕೆ ಹೊಸ ಸೇರ್ಪಡೆಯಾಗಿ ಅಮೀನರೆಡ್ಡಿ ಯಾಳಗಿ, ಡಾ.ಚಂದ್ರಶೇಖರಗೌಡ ಸುಬೇದಾರ ಇದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ವಿವಿಧ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ತಾವು ಟಿಕೆಟ್‌ ಆಕಾಂಕ್ಷಿಗಳೆಂದು ತೋರ್ಪಡಿಸಿಕೊಳ್ಳುತ್ತಿದ್ದಾರೆ.

ಇನ್ನೂ ಸುರಪುರ ಮತಕ್ಷೇತ್ರ ಎಸ್‌ಟಿಗೆ ಮೀಸಲಾಗಿದ್ದು, ಹಾಲಿ ಶಾಸಕ ರಾಜೂಗೌಡ ಅವರಿಗೆ ಟಿಕೆಟ್‌ ಖಚಿತ ಎನ್ನಲಾಗಿದೆ. ಇವರಿಗೆ ಯಾರೂ ಪೈಪೋಟಿ ಇಲ್ಲ. ಹೀಗಾಗಿ ಇಲ್ಲಿ ಟಿಕೆಟ್‌ಗಾಗಿ ಗೊಂದಲವಿಲ್ಲ. ಉಳಿದ ಮೂರು ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿದ್ದು, ಕಾರ್ಯಕರ್ತರಲ್ಲಿ ಟಿಕೆಟ್‌ ಕುರಿತು ಗೊಂದಲವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.