ADVERTISEMENT

ಸಂಭ್ರಮದ ತಿಂಥಣಿ ಮೌನೇಶ್ವರ ರಥೋತ್ಸವ

ಹರಿದು ಬಂದ ಭಕ್ತಸಾಗರ; ಮೊಳಗಿದ ಜಯಘೋಷ, ಮುಗಿಲು ಮುಟ್ಟಿದ ಕರತಾಡನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:10 IST
Last Updated 26 ಫೆಬ್ರುವರಿ 2021, 2:10 IST
ತಿಂಥಣಿ ಕೈಲಾಸಕಟ್ಟೆಯಲ್ಲಿ ಸಾಧುಸಂತರ ಸಮಾಗಮ
ತಿಂಥಣಿ ಕೈಲಾಸಕಟ್ಟೆಯಲ್ಲಿ ಸಾಧುಸಂತರ ಸಮಾಗಮ   

ಕಕ್ಕೇರಾ: ಸಮೀಪದ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಗುರುವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.

ಕೊರೊನಾ ಭೀತಿ ಮಧ್ಯೆಯೂ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಾವೈಕ್ಯದ ಸಂಕೇತ ಸಾರುವ ಕೇಸರಿ ಮತ್ತು ಹಸಿರು ಧ್ವಜಗಳನ್ನು ಹೊತ್ತ ಅಲಂಕೃತ ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು.

'ಏಕ್ ಲಾಕ್ ಐಂಸಿ ಹಜಾರ್ ಪಾಚೋಪೀರ ಪೈಗಂಬರ್ ಜೀತಾ ಪೈಗಂಬರ್ ಮೌನೋದ್ದೀನ್ ಕಾಶೀಪತಿ ಗಂಗಾಧರ ಹರಹರ ಮಹಾದೇವ’ ಎಂಬ ಜಯಘೋಷಗಳು ಮೊಳಗಿದವು. ಭಕ್ತರ ಹರ್ಷೋಧ್ಘಾರ, ಕರತಾಡನ ಮತ್ತುವಾದ್ಯಮೇಳಗಳ ಮಧ್ಯೆ ರಥವು ಸುಗಮವಾಗಿ ಬಂದು ತಲುಪಿತು. ಕೆಲವು ಭಕ್ತರು ಬೆಟ್ಟ-ಗುಡ್ಡಗಳ ಮೇಲೆ ನಿಂತು ದೂರದಿಂದಲೇ ರಥೋತ್ಸವವನ್ನು ಕಣ್ತುಂಬಿಕೊಂಡರು.

ADVERTISEMENT

ಸುರಪುರ ಅರಸು ಸಂಸ್ಥಾನದ ಯುವರಾಜ ರಾಜಾ ಲಕ್ಷ್ಮಿನಾರಾಯಣ ನಾಯಕ ರಥಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಅರ್ಪಿಸಿದರು. ಗಂಗಾಧರಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದ ನಂತರ ಸಂಜೆ ಪಲ್ಲಕ್ಕಿ ಮಹಾಸೇವೆ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದ ಮೌನೇಶ್ವರ ಮಹಾಸ್ವಾಮಿಗಳು, ಕುಮಾರ ಸ್ವಾಮೀಜಿ, ಪ್ರಣವ ನಿರಂಜನ, ದೊಡ್ಡೆಂದ್ರ ಸ್ವಾಮೀಜಿ,ಗಂಗಾಧರ ಸ್ವಾಮೀಜಿ, ಶೇಷೇಂದ್ರ ಸ್ವಾಮೀಜಿ, ಬ್ರಹ್ಮನಂದ ಸ್ವಾಮೀಜಿ, ಅರ್ಚಕ ವಿಶ್ವನಾಥ ಸುರಪುರ ಸೇರಿದಂತೆ ಅನೇಕ ಮಠಗಳ ಮಠಾಧೀಶರು, ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಪೊಲೀಸ್‌ಪಾಟೀಲ, ಉಪಾಧ್ಯಕ್ಷ ಮಲಕಪ್ಪ ಉಡೇದ, ಪ್ರಮುಖರಾದ ಚಿನ್ನಪ್ಪ ಗುಡಗುಂಟಿ, ಮಾನಯ್ಯಗೌಡ ದಳಪತಿ, ಭೀಮಣ್ಣ ಕವಲ್ದಾರ್, ಮಮ್ಮದಲಿ ಗೋಡಿಹಾಳ್, ಸೋಪಣ್ಣ ಶಾಂತಪೂರ, ತಿಪ್ಪಣ್ಣ, ಗಂಗಾಧರನಾಯಕ, ದೇವಿಂದ್ರಪ್ಪ ಅಂಬಿಗೇರ, ಸಣ್ಣಮಾನಯ್ಯ ಸಾಹು, ಮನೋಹರ ಕುಂಟೋಜಿ, ಸಂಜೀವನಾಯಕ ಕವಲ್ದಾರ್, ಸಲೀಮಸಾಬ ಕಂಬಾರ, ಕಂದಾಯ ನಿರೀಕ್ಷಕ ವಿಠಲ್ ಬಂದಾಳ್, ಪಿಡಿಒ ದೇವಿಂದ್ರಪ್ಪ ಹಳ್ಳಿ, ದೇವಾಲಯದ ಮೇಲ್ವಿಚಾರಕ ಶಿವನಂದಯ್ಯ ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮುಖಂಡರು ಭಾಗವಹಿಸಿದ್ದರು.

ಕೊರೊನಾ ಕಾರಣ ಮುಂಜಾಗ್ರತಾ ಕೈಗೊಂಡಿದ್ದರೂ ಜಾತ್ರೆ ಅಪಾರವಾಗಿ ಸೇರಿದ್ದ ಜನರ ದಟ್ಟಣೆ ತಡೆಯಲು ಆಗಲಿಲ್ಲ. ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಎಂ.ಪಾಟೀಲ, ಪಿಎಸ್ಐ ಚಂದ್ರ ಶೇಖರ ನಾರಾಯಣಪುರ ನೇತೃತ್ವದಲ್ಲಿ ಬಂದೋಬಸ್ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.