ADVERTISEMENT

ಶಿರವಾಳ ಗ್ರಾಮದಲ್ಲಿ ನಾಳೆ ತಾಲ್ಲೂಕು ಮಟ್ಟದ ಅಧಿಕಾರಿಗಳ ವಾಸ್ತವ್ಯ

ಟಿ.ನಾಗೇಂದ್ರ
Published 19 ಫೆಬ್ರುವರಿ 2021, 2:57 IST
Last Updated 19 ಫೆಬ್ರುವರಿ 2021, 2:57 IST
ಶಹಾಪುರದ ಶಿರವಾಳದಲ್ಲಿ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು
ಶಹಾಪುರದ ಶಿರವಾಳದಲ್ಲಿ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು   

ಶಿರವಾಳ (ಶಹಾಪುರ): ಜಿಲ್ಲಾಧಿಕಾರಿ ನಡೆ, ಹಳ್ಳಿಕಡೆ ಎಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಫೆ.20ರಂದು ತಾಲ್ಲೂಕುಮಟ್ಟದ ಅಧಿಕಾರಿಗಳು ವಾಸ್ತವ್ಯ ಮಾಡಲಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆಯ ಕಾರ್ಯ ಭರದಿಂದ ಸಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಒಡಲುರಿಯು ಹೆಚ್ಚಾಗಿದೆ.

ಗ್ರಾಮದ ಪ್ರೌಢಶಾಲೆಯಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ಗ್ರಾಮದ ಒಟ್ಟು ಜನಸಂಖ್ಯೆ 11,647 ಇದೆ. 2011ರ ಜನಗಣತಿಯ ಪ್ರಕಾರ 3,961 ಮನೆಗಳಿವೆ. ಕಂದಾಯ ಇಲಾಖೆಯ ಸಿಬ್ಬಂದಿ ಜೊತೆಗೂಡಿ ಕಳೆದ ಹಲವು ದಿನಗಳಿಂದ ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಸುಮಾರು 50 ಜನರಿಗೆ ಪಿಂಚಣಿಯ ಪ್ರಮಾಣ ಪತ್ರ ನೀಡುವ ಉದ್ದೇಶ ಇದೆ. ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದು, ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ ಎಂದು ಗ್ರಾಮಲೆಕ್ಕಿಗ ಗೋವಿಂದ ಆರ್. ಮಾಹಿತಿ ನೀಡಿದರು.

ಗ್ರಾಮ ವಾಸ್ತವ್ಯದಲ್ಲಿ ಕೇವಲ ಪಹಣಿಯಲ್ಲಿನ ಹೆಸರು ಸರಿಪಡಿಸುವುದು. ವಾರಸುದಾರರ ಹೆಸರು ಸೇರ್ಪಡೆ ಮಾತ್ರ ಅವಕಾಶ ನೀಡಿದರೆ ಸಾಲದು. ಕಂದಾಯ ಇಲಾಖೆಯ ಭ್ರಷ್ಟಾಚಾರದ ಕಿರೀಟದಂತಿರುವ ಸರ್ವೇ ಇಲಾಖೆಯಲ್ಲಿ ಮುಖ್ಯವಾಗಿ ಫಾರಂ ನಂ.10, ಆಕಾರ ಬಂದ್, ಪೋಡಿ. ದರಕಾಸ್ತುಪೋಡಿ, ಹದ್ದುಬಸ್ತು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಅಧಿಕಾರಿಗಳು ಸ್ಥಳದಲ್ಲಿಯೇ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ತಾಂತ್ರಿಕ ನೆಪವೊಡ್ಡಿ ಅರ್ಜಿ ನೀಡಿ ಇಲ್ಲವೆ ಮನವಿ ಕೊಡಿ ಎನ್ನುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಇದು ಕಾಟಾಚಾರದ ಗ್ರಾಮ ವಾಸ್ತವ್ಯ ಆಗಬಾರದು. ಇಲ್ಲವೆ ಅರ್ಜಿ ಸಲ್ಲಿಸಿದ ರೈತರ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಗುರುತಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಅವರು ಒತ್ತಾಯಿಸಿದ್ದಾರೆ.

ADVERTISEMENT

ಗ್ರಾಮದ ಒಡಲುರಿ: ಗ್ರಾಮದಿಂದ ಕೂಗಳತೆಯ ದೂರದಲ್ಲಿ ಭೀಮಾ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಎರಡು ವರ್ಷದ ಹಿಂದೆ ಮಾಡಲಾಗಿತ್ತು. ನಿರ್ವಹಣೆ ಹಾಗೂ ಕಳಪೆಮಟ್ಟದ ಕಾಮಗಾರಿಯಿಂದ ಗ್ರಾಮದ ಅರ್ಧ ಭಾಗಕ್ಕೆ ನೀರಿನ ವ್ಯವಸ್ಥೆ ಇದೆ. ಇನ್ನುಳಿದ ಪ್ರದೇಶದ ನಿವಾಸಿಗರಿಗೆ ಹಳ್ಳದ ನೀರೇ ಗತಿ. ಪರಿಶಿಷ್ಟ ಜಾತಿಯ ಬಡಾವಣೆಯಾದ 4 ಮತ್ತು 5ರಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇ ಸಾಧನೆಯಾಗಿದೆ. ಹನಿ ನೀರು ವಿತರಿಸಿಲ್ಲ. ಮತ್ತೆ ಬೇಸಿಗೆ ಆರಂಭವಾಗುತ್ತಲಿದೆ. ಗ್ರಾಮ ವಾಸ್ತವ್ಯ ಮಾಡುತ್ತಿರುವ ಅಧಿಕಾರಿಗಳು ಜನರ ಸಮಸ್ಯೆಗೆ ಧ್ವನಿಯಾಗಬೇಕು ಎಂದು ಗ್ರಾಮದ ನಿವಾಸಿ ಮಂಜುಳಾ ಮನವಿ ಮಾಡಿದರು.

ಗ್ರಾಮದಲ್ಲಿ ರಸ್ತೆ ನಿರ್ಮಿಸಿದ್ದಾರೆ. ಆದರೆ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತದೆ. ಕೆಲವು ಕಡೆ ಹೂಳು ತುಂಬಿದ ಚರಂಡಿಯಲ್ಲಿ ದುರ್ವಾಸನೆಯಿಂದ ನಲುಗಿ ಹೋಗಿದ್ದೇವೆ. ಅಭಿವೃದ್ದಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಹರಿದು ಬಂದರೂ ಜನತೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಸೋತಿದ್ದಾರೆ. ಗ್ರಾಮದಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಯತ್ನವನ್ನು ಅಧಿಕಾರಿಗಳು ಮಾಡಬೇಕು ಎಂದು ಗ್ರಾಮ ನಿವಾಸಿ ಶಾಂತಪ್ಪ ಮ್ಯಾಗೇರಿ ಒತ್ತಾಯಿಸಿದರು.

***

ದಕ್ಷಿಣದ ವಾರಣಾಸಿ

ಶಿರವಾಳ ಗ್ರಾಮ ಹಲವು ರೋಚಕಗಳನ್ನು ಒಡಲಿನಲ್ಲಿ ತುಂಬಿಕೊಂಡಿದೆ. ಇಲ್ಲಿನ ಪಂಚಕೂಟ ವಾಸ್ತುಶೈಲಿ ಅಪೂರ್ವವಾಗಿದೆ. ಪಂಚಲಿಂಗೇಶ್ವರ ದೇಗುಲವು ದಕ್ಷಿಣದ ವಾರಣಾಸಿ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ಇತಿಹಾಸದ ಕತೆ ಸಾರುವ ಇಲ್ಲಿನ ಶಿಲ್ಪಕಲಾ ಕೆತ್ತನೆಗಳು ದನದ ಕೊಟ್ಟಿಗೆ ಹಾಗೂ ಶೌಚಾಲಯದ ಕಲ್ಲುಗಳಾಗಿವೆ. ಅಪರೂಪದ ವಾಸ್ತು ಶಿಲ್ಪಗಳು ಸಂರಕ್ಷಣೆಯಿಲ್ಲದೆ ಹಾಳಾಗಿವೆ. ಅವೆಲ್ಲವುಕ್ಕೂ ಈಗ ಮರು ಜಿವ ನೀಡಬೇಕಾಗಿದೆ.

***

ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಭೀಕರವಾಗಿದೆ. ಹಳ್ಳದ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ

- ಮಂಜುಳಾ, ಗ್ರಾಮದ ನಿವಾಸಿ

***

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತದೆ. ಅಭಿವೃದ್ದಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಬಂದಿದೆ. ಕೆಲಸವಾಗಿಲ್ಲ

- ಶಾಂತಪ್ಪ ಮ್ಯಾಗೇರಿ, ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.