ADVERTISEMENT

ಯಾದಗಿರಿ| ಪ್ರವಾಸದಿಂದ ವೈವಿಧ್ಯತೆಗಳ ಪರಿಚಯ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:29 IST
Last Updated 28 ಸೆಪ್ಟೆಂಬರ್ 2025, 6:29 IST
ಯಾದಗಿರಿಯಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಉದ್ಘಾಟಿಸಿದರು 
ಯಾದಗಿರಿಯಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಉದ್ಘಾಟಿಸಿದರು    

ಯಾದಗಿರಿ: ‘ಪ್ರವಾಸ ಹಲವು ವೈವಿಧ್ಯತೆಗಳನ್ನು ಪರಿಚಯಿಸಿ, ಭಿನ್ನ ಅನುಭವಗಳನ್ನು ನೀಡಿ ಮೈಮನಸ್ಸನ್ನು ಉಲ್ಲಾಸಗೊಳಿಸುತ್ತದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ನಗರದಲ್ಲಿ ಶನಿವಾರ ಜಿಲ್ಲಾ ಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲಾ ದೇಶಗಳಲ್ಲಿ ಪ್ರವಾಸೋದ್ಯಮ ದಿನಾಚರಣೆಯನ್ನು ಸ್ಥಳೀಯ ಉತ್ಸವದಂತೆ ಆಚರಣೆ ಮಾಡಲಾಗುತ್ತಿದೆ. ಆಮೂಲಕ ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಪ್ರವಾಸೋದ್ಯಮದ ಪರಿಣಾಮದ ಕುರಿತು ಜಾಗೃತಿ‌ ಮೂಡಿಸಲಾಗುತ್ತಿದೆ’ ಎಂದರು.

ADVERTISEMENT

‘ದೇಶ ಸುತ್ತು-ಕೋಶ ಓದು ಎನ್ನುವ ಮಾತನ್ನು ಪ್ರವಾಸೋದ್ಯಮ ದಿನದಂದು ಸದಾ ನೆನಪಿಸುತ್ತಲೇ ಇರುತ್ತದೆ. ಪ್ರವಾಸದಲ್ಲಿ ಸಿಗುವ ಅನುಭವ ಪುಸ್ತಕ ಓದುವುದಕ್ಕಿಂತಲು ಹೆಚ್ಚಿನದು. ಹೀಗಾಗಿ, ಪ್ರಸ್ತುತ ದಿನಗಳಲ್ಲಿ ಪ್ರವಾಸವು ಉದ್ಯಮವಾಗಿ ಬೆಳೆದು, ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ’ ಎಂದು ಹೇಳಿದರು.

‘ಪ್ರವಾಸ ಎಂದರೆ ಕೇವಲ ಸುತ್ತಾಟವಲ್ಲ. ಅದರಲ್ಲಿ ಕಲಿಕೆ ಇರುತ್ತದೆ. ಕೃಷಿ ಪ್ರವಾಸೋದ್ಯಮ, ಅಡುಗೆ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ. ಪರಂಪರೆಯ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ನೌಕಾಯಾನ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮವಾಗಿ ಹಲವು ಬಗೆಯಲ್ಲಿ ವಿಸ್ತರಿಸಿಕೊಂಡಿದೆ’ ಎಂದರು.

‘ಪ್ರವಾಸೋದ್ಯಮದಿಂದ ಸಾರಿಗೆ, ಹೊಟೇಲ್ ಉದ್ಯಮಕ್ಕೆ ನೇರ ಲಾಭವಾದರೂ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಸುತ್ತದೆ. ಜತೆಗೆ ದೇಶಕ್ಕೆ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ. ನಮ್ಮ ಭಾಗದ ಪ್ರವಾಸಿ ತಾಣಗಳಲ್ಲಿ ಪಾರಂಪರಿಕ ನಡಿಗೆಗಳನ್ನು ಆಯೋಜಿಸುವುದರ ಮೂಲಕ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದಾಗಿದೆ’ ಎಂದು ಹೇಳಿದರು.

ಗೃಹ ರಕ್ಷಕ ದಳ ಜಿಲ್ಲಾ ಕಮಾಂಡೆಂಟ್ ವೀರಣ್ಣ ಬಡಿಗೇರ ಮಾತನಾಡಿ, ‘ಜಿಲ್ಲೆಯಲ್ಲಿ ಕೋಟೆ, ಲುಂಬಿನಿ ಉದ್ಯಾನ, ಧಬ್ ದಬಿ ಜಲಪಾತ, ಸ್ಲೀಪಿಂಗ್ ಬುದ್ಧ, ಸುರಪುರ ಕೋಟೆ, ನಾರಾಯಣಪುರ ಜಲಾಶಯದಂತಹ ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಿಗೆ ಭೇಟಿ ನೀಡಿ, ಪರಿಚಯಸ್ಥರಿಗೂ ಅವುಗಳ ಬಗ್ಗೆ ತಿಳಿಸಬೇಕು’ ಎಂದರು.

‘ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಂಡು, ಪ್ರವಾಸಿ ಮಿತ್ರರಾಗಿ ಕೆಲಸ ಮಾಡುವ ಆಸಕ್ತರು ನಮ್ಮ ಇಲಾಖೆಯಲ್ಲಿ ಇದ್ದಾರೆ. ಪ್ರವಾಸೋದ್ಯಮ ಇಲಾಖೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಮಿತ್ರರನ್ನು ನೇಮಕ ಮಾಡಿಕೊಂಡು, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಯೋಜನಾ ನಿರ್ದೇಶಕ ರಿಜ್ವಾನ್ ಪಟೇಲ್, ಬಾಲ ಭವನದ ವ್ಯವಸ್ಥಾಪಕ ಅನಿಲ್‌ಕುಮಾರ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮಚಂದ್ರ ಕಟ್ಟಿಮನಿ ಉಪಸ್ಥಿತರಿದ್ದರು. 

ದೇಶ ಸುತ್ತಿ ಕೋಶ ಓದು ಎಂಬ ಮಾತಿನಂತೆ ಹೆಚ್ಚೆಚ್ಚು ಪ್ರವಾಸ ಮಾಡಿ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡು ಪ್ರವಾಸೋದ್ಯಮ ತಾಣಗಳ ಸ್ವಚ್ಛತೆ ಅಭಿವೃದ್ಧಿಗೆ ಸಹಕರಿಸೋಣ
ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.