ADVERTISEMENT

ಸುರಪುರದಲ್ಲಿ ಟ್ರಾಫಿಕ್ ಜಾಮ್: ಜನರ ಪರದಾಟ

ಅಶೋಕ ಸಾಲವಾಡಗಿ
Published 16 ಜನವರಿ 2025, 4:51 IST
Last Updated 16 ಜನವರಿ 2025, 4:51 IST
ಸುರಪುರದ ಗಾಂಧಿವೃತ್ತದಲ್ಲಿ ಉಂಟಾಗಿರುವ ಟ್ರಾಫಿಕ್ ಜಾಮ್‍ನಿಂದ ಸವಾರರು ಪರದಾಡುತ್ತಿರುವುದು
ಸುರಪುರದ ಗಾಂಧಿವೃತ್ತದಲ್ಲಿ ಉಂಟಾಗಿರುವ ಟ್ರಾಫಿಕ್ ಜಾಮ್‍ನಿಂದ ಸವಾರರು ಪರದಾಡುತ್ತಿರುವುದು   

ಸುರಪುರ: ನಗರದ ಜನನಿಬಿಡ ಗಾಂಧಿ ವೃತ್ತ, ಬಸ್‍ನಿಲ್ದಾಣ ಇತರ ಪ್ರಮುಖ ಸಂಚಾರ ದಟ್ಟಣೆಯ ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ನಿತ್ಯದ ಸಮಸ್ಯೆಯಾಗಿ ಕಾಡುತ್ತಿದೆ.

ಅದರಲ್ಲೂ ಗಾಂಧಿ ವೃತ್ತದಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಉಂಟಾಗುವ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಪ್ರಯಾಣಿಕರು, ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ.

ಗಾಂಧಿವೃತ್ತ ನಾಲ್ಕೈದು ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವೃತ್ತ ಬಸ್ ನಿಲ್ದಾಣಕ್ಕೆ ಅನತಿ ದೂರದಲ್ಲಿ ಇದೆ. ಸಾರಿಗೆ ಬಸ್‍ಗಳು ಇದೇ ಮಾರ್ಗದ ಮೂಲಕ ಬರುತ್ತವೆ. ವಾಹನ ದಟ್ಟಣೆ ಅಧಿಕವಾಗಿರುವುದು ಮತ್ತು ರಸ್ತೆ ಇಕ್ಕಟ್ಟಾಗಿರುವುದರಿಂದ ಎದುರುಗಡೆ ಬಸ್ ಬಂದರೆ ಜಾಮ್ ಉಂಟಾಗುತ್ತದೆ
ನೋಡು ನೋಡುತ್ತಿದ್ದಂತೆ ರಸ್ತೆಯ ಎಲ್ಲ ಕಡೆ ವಾಹನಗಳ ಸಾಲು ನಿಂತು ಬಿಡುತ್ತದೆ. ಐದಾರು ಪೊಲೀಸರು, ಗೃಹ ರಕ್ಷಕರೊಂದಿಗೆ ಫೀಲ್ಡ್‍ಗೆ ಇಳಿದು ವಾಹನಗಳನ್ನು ತೆರವುಗೊಳಿಸಿ ಜಾಮ್ ನಿಯಂತ್ರಿಸುತ್ತಾರೆ. ಕೆಲ ಹೊತ್ತಿನಲ್ಲೆ ಸಮಸ್ಯೆ ಮತ್ತೆ ಉದ್ಭವಿಸುತ್ತದೆ.

ADVERTISEMENT

ತಹಶೀಲ್ದಾರ್ ಕಚೇರಿ ರಸ್ತೆ, ಹನುಮಾನ ಟಾಕೀಜ ರಸ್ತೆ, ಗಾಂಧಿವೃತ್ತಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡೆ ನಿಲ್ಲಿಸುವುದು ಮತ್ತು ರಸ್ತೆಗಳ ಮೇಲೆ ತರಕಾರಿ, ಹಣ್ಣು ಮಾರಾಟ ಮಾಡುವುದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎನ್ನುತ್ತಾರೆ ಪೊಲೀಸರು.

ಟ್ರಾಫಿಕ್ ಜಾಮ್‍ನಿಂದ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು, ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ತೊಂದರೆ ಆಗುತ್ತಿದೆ. ಅಪಘಾತಗಳೂ ಆಗಿವೆ. ಈ ಸಮಸ್ಯೆಯಿಂದ ದೂರದ ಊರುಗಳಿಗೆ ಸಂಚರಿಸುವ ಹಲವು ಬಸ್‍ಗಳು ನಿಲ್ದಾಣಕ್ಕೆ ಬಾರದೆ ಬೈಪಾಸ್ ರಸ್ತೆಯ ಮೂಲಕ ಸಂಚರಿಸಿ ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತದಲ್ಲಿ ಪ್ರಯಾಣಿಕರನ್ನು ಇಳಿಸುತ್ತಾರೆ ಎಂಬ ಆರೋಪವೂ ಇದೆ.

’ಸಂಬಂಧಪಟ್ಟ ಅಧಿಕಾರಿಗಳು ಟ್ರಾಫಿಕ್ ಜಾಮ್ ಉಂಟಾಗದಂತೆ ಯೋಜನೆ ರೂಪಿಸಬೇಕು. ಏಕಮುಖ ಸಂಚಾರ ವ್ಯವಸ್ಥೆ ಮಾಡಿದರೆ ಒಳ್ಳೆಯದು. ಪ್ರಯಾಣಿಕರಿಗೆ, ಜನರಿಗೆ ತೊಂದರೆಯಾಗದ ಹಾಗೆ ಸಾರಿಗೆ ನಿಯಂತ್ರಿಸುವ ಕೆಲಸ ಮಾಡಬೇಕು‘ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಪೊಲೀಸರ ಕೊರತೆ ಇದೆ. ಟ್ರಾಫಿಕ್ ಜಾಮ್ ನಿಯಂತ್ರಿಸುವುದು ದೊಡ್ಡ ಕೆಲಸವಾಗಿದೆ. ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದರೆ ದಂಡ ವಿಧಿಸಲಾಗುವುದು
ಆನಂದ ವಾಗ್ಮೋಡೆ ಪೊಲೀಸ್ ಇನ್‍ಸ್ಪೆಕ್ಟರ್‌
ಟ್ರಾಫಿಕ್ ಜಾಮ್‍ನಿಂದ ಹಲವಾರು ಸಲ ಸರಿಯಾದ ಸಮಯಕ್ಕೆ ಕೋರ್ಟ್ ಕಲಾಪಕ್ಕೆ ಹಾಜರಾಗುವಲ್ಲಿ ವಿಳಂಬವಾಗಿದೆ. ನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು ಮಾಡಬೇಕು
ಆದಪ್ಪ ಹೊಸ್ಮನಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.