ಸೈದಾಪುರ ಪಟ್ಟಣದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣಕ್ಕೆ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯಿಂದ ಬಂದೋಬಸ್ತ್.
ಸೈದಾಪುರ: ವೇತನ ಹೆಚ್ಚಳ ಸೇರಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದ ಪರಿಣಾಮ ಪಟ್ಟಣದಲ್ಲಿ ಬಸ್ ಸಂಚಾರ ಇಲ್ಲದೇ ಮಂಗಳವಾರ ಗ್ರಾಮೀಣ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು, ರೋಗಿಗಳು ಪರದಾಡಿದರು.
ಸಾರ್ವಜನಿಕರು ಪ್ರಯಾಣಕ್ಕಾಗಿ ಖಾಸಗಿ ವಾಹನಗಳ ಮೊರೆ ಹೋಗುವ ದೃಶ್ಯ ಕಂಡು ಸಾಮಾನ್ಯವಾಗಿತ್ತು. ಬಸ್ ಬಂದ್ ಆಗಿದ್ದರೂ ಸರ್ಕಾರಿ, ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳಿಗೆ ರಜೆ ಯಾವುದೇ ರೀತಿಯ ರಜೆ ಇರಲಿಲ್ಲ. ಎಂದಿನಂತೆ ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿರುವ ಆಟೊ, ಕ್ರೂಸರ್, ಟೆಂಪೊ, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದರು. ಸಂಜೆ ಮನೆಗೆ ತೆರಳಲು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.
ಕೆಲ ವಿದ್ಯಾರ್ಥಿಗಳು ಬಸ್‍ನಿಲ್ದಾಣಕ್ಕೆ ಬಂದು ಕೆಲ ಸಮಯ ಬಸ್‍ಗಾಗಿ ಕಾಯ್ದು ಕೊನೆಗೆ ಖಾಸಗಿ ವಾಹನಗಳ ಟಾಪ್ ಮೇಲೆ ಕುಳಿತುಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಬಸ್ ಸಂಚಾರವನ್ನೆ ಆಶ್ರಯಿಸಿದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ, ಜನತೆಗೆ ಬಸ್ ಬಂದ್ ಬಿಸಿ ತಟ್ಟಿತ್ತು.
ಬಸ್ ನಿಲ್ದಾಣ ಮುಷ್ಕರದಿಂದ ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿತ್ತು. ಬಸ್ ನಿಲ್ದಾಣದಲ್ಲಿ ಕೆಲ ಬಸ್‌ಗಳು ಸಂಜೆವರೆಗೆ ನಿಂತಲ್ಲೇ ನಿಂತಿದ್ದವು. ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
‘ಸಾರಿಗೆ ಮುಷ್ಕರ ಆಗಸ್ಟ್ 7ರವರಗೆ ನ್ಯಾಯಾಲಯದ ಆದೇಶದ ಮೇರೆಗೆ ಮುಂದೂಡಲಾಗಿದ್ದು, ನಾಳೆಯಿಂದ ಯಥಾಪ್ರಕಾರ ಸಾರಿಗೆ ಸಂಚಾರ ಪ್ರಾರಂಭವಾಗುತ್ತದೆ ಎಂದು ಮೇಲಧಿಕಾರಿಗಳು ನಮಗೆ ತಿಳಿಸಿದ್ದಾರೆ’ ಎಂದು ಸೈದಾಪುರ ಸಾರಿಗೆ ನಿಯಂತ್ರಕ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಂಭಾವಿಗೂ ತಟ್ಟಿದ ಮುಷ್ಕರದ ಬಿಸಿ
ಕೆಂಭಾವಿ: ಮಂಗಳವಾರ ರಾಜ್ಯವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರದ ಬಿಸಿ ಪಟ್ಟಣಕ್ಕೂ ತಟ್ಟಿತು.
ಮುಷ್ಕರ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಬಸ್‍ಗಳು ನಿಂತಿದ್ದು ಬಸ್‍ಗಳ ಸುರಕ್ಷತೆ ದೃಷ್ಟಿಯಿಂದ ಅವುಗಳನ್ನು ಕಾಯುವುದೇ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಬೆಳಿಗ್ಗೆಯಿಂದಲೇ ಬಸ್ ನಿಲ್ದಾಣದಲ್ಲಿ ತಮ್ಮ ಬಸ್‍ಗಳನ್ನು ನಿಲುಗಡೆ ಮಾಡಿ ಬಹುತೇಕ ಚಾಲಕರು ತಮ್ಮ ಊರುಗಳಿಗೆ ತೆರಳಿದ್ದರಿಂದ ಬಸ್ ನಿಲ್ದಾಣ ಬಸ್‍ಗಳಿಂದ ತುಂಬಿತ್ತು. ಮುಷ್ಕರ ಕುರಿತು ಪ್ರಯಾಣಿಕರಿಗೆ ಗೊತ್ತಿಲ್ಲದೆ ಇರುವುದರಿಂದ ದೂರದ ಊರುಗಳಿಗೆ ತೆರಳುವ ಅನೇಕ ಪ್ರಯಾಣಿಕರು ಪರದಾಡುವಂತಾಯಿತು.
ಸಿಕ್ಕಿಸಿಕ್ಕ ಕ್ರೂಸರ್, ಟಂಟಂ ಸೇರಿದಂತೆ ಅನೇಕ ಖಾಸಗಿ ವಾಹನಗಳಲ್ಲಿ ಜನ ಪ್ರಯಾಣ ಮಾಡಿದರು. ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ದುಪ್ಪಟ್ಟು ಹಣ ಹಣ ನೀಡಿ ಹೋಗುತ್ತಿದ್ದ ದೃಶ್ಯವೂ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.