ವಡಗೇರಾ: ತುಮಕೂರ ಗ್ರಾಮದಲ್ಲಿ 18 ವರ್ಷಗಳ ಕಾಲ ನಡೆದ ಮದೀನಾ ಮಜೀದ್ ಮತ್ತು ಜಾಮಿಯಾ ಮಜೀದ್ ಸುನ್ನಿ ಗುಂಪಿನವರ ಶೀಥಲ ಸಮರ ಅಂತ್ಯಗೊಂಡು ಎರಡು ಗುಂಪಿನವರು ಶನಿವಾರ ಸಂತೋಷದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಘಟನೆಯ ವಿವಿರ: ವಡಗೇರಾ ತಾಲ್ಲೂಕಿನ ತುಮಕೂರ ಗ್ರಾಮದಲ್ಲಿ ಸುಮಾರು 18 ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ಎರಡು ಮಜೀದ್‌ನವರು ಕೋರ್ಟ್ ಕಚೇರಿ ಅಂತ ಅಲೆದಾಡುತಿದ್ದರು. ಇದರಿಂದ ಗ್ರಾಮದಲ್ಲಿ ಒಂದು ರೀತಿಯ ಆತಂಕಕ್ಕೆ ಎಡೆಮಾಡಿಕೊಡುವುದರ ಜತೆಗೆ ಬೂದಿಮುಚ್ಚಿದ ಕೆಂಡದಂತೆ ಇತ್ತು.
ಇದನ್ನು ಅರಿತ ವಡಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಬೂಬ ಅಲಿ ಶುಕ್ರವಾರ ಬಕ್ರೀದ್ ಹಬ್ಬದ ಪ್ರಯುಕ್ತ ಎರಡೂ ಗುಂಪಿನ ಮುಖಂಡರನ್ನು ಪೊಲೀಸ್ ಠಾಣೆಗೆ ಕರೆದು ಸಮಸ್ಯೆಗಳನ್ನು ಆಲಿಸಿದರು. ಎರಡೂ ಗುಂಪಿನವರಿಗೆ ಗ್ರಾಮದ ಹಿತದೃಷ್ಟಿಯಿಂದ ತಿಳಿ ಹೇಳಿ ರಾಜೀ ಸಂಧಾನ ಮಾಡಿಸಿದರು. ‘ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಸೇರಿ ಧಾರ್ಮಿಕ ಹಬ್ಬಗಳನ್ನು ಆಚರಿಸಬೇಕು. ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಮುಖಂಡರು ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ಆಗ ಮದೀನಾ ಮಜೀದ್ ಮತ್ತು ಜಾಮಿಯಾ ಮಜೀದ್ ಸುನ್ನಿ ಎರಡೂ ಗುಂಪಿನವರು, ‘ಬಕ್ರೀದ್ ಹಬ್ಬವನ್ನು ಒಟ್ಟಾರೆಯಾಗಿ ಸೇರಿ ಆಚರಿಸುತ್ತೇವೆ. ಇನ್ನು ಮುಂದೆ ಯಾವುದೇ ಮನಸ್ತಾಪ ಇಲ್ಲದೆ ಹಬ್ಬಗಳನ್ನು ಆಚರಿಸಿಕೊಂಡು ಹೋಗುತ್ತೇವೆ’ ಎಂದು ವಾಗ್ದಾನ ಮಾಡಿದರು.
ನುಡಿದಂತೆ ಶನಿವಾರ ಎರಡೂ ಗುಂಪಿನವರು ಬಕ್ರೀದ್ ಹಬ್ಬದ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಪ್ರತಿ ವರ್ಷ ಮುಸ್ಲಿಂ ಸಮುದಾಯದವರು ಹಬ್ಬ ಆಚರಣೆ ಮಾಡಬೇಕಾದರೆ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಡಿಆರ್ ಪೊಲೀಸ್ ವಾಹನವನ್ನು ನಿಲ್ಲಿಸುತಿದ್ದರು. ಈ ವರ್ಷ ಮುಸ್ಲಿಂ ಸಮುದಾಯದವರು ಯಾವುದೇ ಪೊಲೀಸ್ ಬಂದೋಬಸ್ತ್ ಇಲ್ಲದೆ ಹಬ್ಬವನ್ನು ಶಾಂತರೀತಿಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಬಾಷುಮೀಯ ಮುಲ್ಲಾ, ಖದೀರ ಪಟೇಲ್, ದಾವುಲ ಸಾಬ್ ಮರಡಿ, ಚೌಡಯ್ಯ ಬಾವೂರ, ಅಬ್ದುಲ್ ಕೊರಬಾ, ಸಂತೋಷ ಕೇರಿ, ತಿಪ್ಪಣ್ಣ ಬಲವಂತನವರು, ಬಸವರಾಜ ಪಿಲ್ಲಿ, ಡೊಂಗ್ರೆಸಾಬ್, ಬಸವರಾಜ ದೊರೆ, ಅಬ್ದುಲ ಮಸರಕಲ್, ಗಜನಿಸಾಬ ಪಿ.ಬಸ್ಸು, ವೆಂಕಟೇಶ ಮದನೂರ, ಪೀರು ಮುಲ್ಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.