ADVERTISEMENT

ಯಾದಗಿರಿ ಜಿಲ್ಲೆಗೆ ಎರಡು ಪಿಯು ಕಾಲೇಜು ಮಂಜೂರು

ವಡಗೇರಾ ತಾಲ್ಲೂಕಿನ ವಡಗೇರಾ, ಹುಣಸಗಿ ತಾಲ್ಲೂಕಿನ ಕೋಳಿಹಾಳದಲ್ಲಿ ಪಿಯು ಕಾಲೇಜು

ಬಿ.ಜಿ.ಪ್ರವೀಣಕುಮಾರ
Published 30 ಸೆಪ್ಟೆಂಬರ್ 2022, 22:15 IST
Last Updated 30 ಸೆಪ್ಟೆಂಬರ್ 2022, 22:15 IST
ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಈ ಹಿಂದೆ ಪದವಿ ಪೂರ್ವ ಕಾಲೇಜು ನಡೆಯುತಿತ್ತು
ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಈ ಹಿಂದೆ ಪದವಿ ಪೂರ್ವ ಕಾಲೇಜು ನಡೆಯುತಿತ್ತು   

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ವಡಗೇರಾ ಮತ್ತು ಹುಣಸಗಿ ತಾಲ್ಲೂಕಿನ ಕೋಳಿಹಾಳ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸರ್ಕಾರವು ಮಂಜೂರು ಮಾಡಿದೆ. ರಾಜ್ಯದಲ್ಲಿ ಒಟ್ಟು 46 ಪಿಯು ಕಾಲೇಜು ಮಂಜೂರಾಗಿವೆ.

2022–23ನೇ ಸಾಲಿಗೆ ಹೊಸ ಕಾಲೇಜು ಕಾಲೇಜುಗಳನ್ನು ಸರ್ಕಾರ ಮಂಜೂರು ಮಾಡಿದೆ. ಮಂಜೂರಾದ ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಲು ಇನ್ನೂ ಸಮಯ ಬೇಕಾಗಬಹುದು ಎನ್ನಲಾಗುತ್ತಿದೆ.

ಡಾ.ಎ.ಬಿ.ಮಾಲಕರಡ್ಡಿ ಆರೋಗ್ಯ ಸಚಿವರಾಗಿದ್ದ ವೇಳೆ ವಡಗೇರಾ ಪಟ್ಟಣಕ್ಕೆ ಪದವಿಪೂರ್ವ ಕಾಲೇಜು ಮಂಜೂರಾಗಿತ್ತು. ಆದರೆ, ಕೆಲ ವರ್ಷಗಳ ನಂತರ ಕಾಲೇಜು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿಗೆ ಸ್ಥಳಾಂತರಕ್ಕೆ ನಿರ್ಧರಿಸಲಾಯಿತು. ಆದರೆ, ಇದಕ್ಕೆ ಡಾ.ಮಾಲಕರಡ್ಡಿ ಅವರ ಪ್ರಯತ್ನದಿಂದ ಸ್ಥಳಾಂತರ ರದ್ದಾಯಿತು.

ADVERTISEMENT

2009-10 ಸಾಲಿನಲ್ಲಿ ಆಗಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಯವರ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸರ್ಕಾರಿ ಮಾರಿಕಾಂಬ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಕಾಲೇಜಿಗೆ ಸಿಬ್ಬಂದಿ ಜೊತೆಗೆ ಕಾಲೇಜು ಸ್ಥಳಾಂತರ ಮಾಡಲಾಗಿತ್ತು. ಈಗ ಮತ್ತೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಪ್ರಯತ್ನದಿಂದ ಮಂಜೂರಾಗಿದೆ.

‘ವಡಗೇರಾ, ಬೆಂಡೆಬೆಂಬಳಿ ಮತ್ತು ದೋರನಹಳ್ಳಿ ಮೂರು ಪದವಿಪೂರ್ವ ಕಾಲೇಜಿಗಾಗಿ ಮನವಿ ಸಲ್ಲಿಸಿದ್ದೆ. ಆದರೆ, ವಡಗೇರಾಕ್ಕೆ ಮಾತ್ರ ಕಾಲೇಜನ್ನು ಮಂಜೂರು ಮಾಡಿದೆ. ಬೆಂಡೆಬೆಂಬಳಿ ಹಾಗೂ ದೋರನಹಳ್ಳಿಗೂ ಕಾಲೇಜು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮತ್ತೆ ಕೋರುವೆ’ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ ತಿಳಿಸಿದರು.

‘ಮಂಜೂರಾದ ಕಾಲೇಜುಗಳಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಆರಂಭಿಸಬೇಕು. ಪೂರ್ಣಪ್ರಮಾಣಲ್ಲಿ ಸಿಬ್ಬಂದಿಯನ್ನು ನೇಮಿಸಬೇಕು. ಸ್ವಂತ ಕಟ್ಟಡ ನಿರ್ಮಿಸಬೇಕು ಮತ್ತು ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಕಾಂಗ್ರೆಸ್ ನಾಯಕ ಡಾ. ಭೀಮಣ್ಣ ತಿಳಿಸಿದರು.

14 ಕಾಲೇಜುಗಳಿಗೆ ಮನವಿ

ಯಾದಗಿರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಹೊಸದಾಗಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು 2020ರಲ್ಲಿ ರಾಜ್ಯ ಸರ್ಕಾರಕ್ಕೆ ಕೋರಲಾಗಿತ್ತು.

ಗುರಮಠಕಲ್ ತಾಲ್ಲೂಕಿನ ಎಲ್ಹೇರಿ, ಕಂದಕೂರ ಪ್ರೌಢಶಾಲೆ, ವಡಗೇರಾ ತಾಲ್ಲೂಕಿನ ವಡಗೇರಾ, ಹೈಯಾಳ (ಬಿ), ಶಹಾಪುರ ತಾಲ್ಲೂಕಿನ ದೋರನಹಳ್ಳಿ, ಗೋಗಿ (ಕೆ), ಖಾನಾಪುರ, ಯಾದಗಿರಿ ತಾಲ್ಲೂಕಿನ ಸೈದಾಪುರ, ಲಿಂಗೇರಿ ಸ್ಟೇಷನ್, ಸುರಪುರ ತಾಲ್ಲೂಕಿನ ಮಲ್ಲಾ (ಬಿ), ಹುಣಸಗಿ ತಾಲ್ಲೂಕಿನ ದೇವತ್ಕಲ್,ಮುದನೂರ (ಕೆ),ಕೋಳಿಹಾಳ, ಹುಣಸಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯನ್ನು ಉನ್ನತೀಕರಿಸಿ ಸಂಯುಕ್ತ ಕಾಲೇಜುಗಳನ್ನು ಆರಂಭಿಸಲು ಮನವಿ ಮಾಡಲಾಗಿತ್ತು.

ವಡಗೇರಾ, ಬೆಂಡೆಬೆಂಬಳಿ ಮತ್ತು ದೋರನಹಳ್ಳಿ ಮೂರು ಪದವಿಪೂರ್ವ ಕಾಲೇಜಿಗಾಗಿ ಮನವಿ ಸಲ್ಲಿಸಿದ್ದೆ. ಬೆಂಡೆಬೆಂಬಳಿ ಹಾಗೂ ದೋರನಹಳ್ಳಿಗೂ ಕಾಲೇಜು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮತ್ತೆ ಕೋರುವೆ.
ವೆಂಕಟರಡ್ಡಿ ಮುದ್ನಾಳ, ಶಾಸಕ

ಸರ್ಕಾರ ಜಿಲ್ಲೆಗೆ ಎರಡು ಪದವಿಪೂರ್ವ ಕಾಲೇಜು ಮಂಜೂರು ಮಾಡಿದೆ. ಮೇಲಾಧಿಕಾರಿಗಳ ಆದೇಶದ ಮೇರೆಗೆ ತರಗತಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು
ಮರಿಸ್ವಾಮಿ, ಉಪನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ

ವಡಗೇರಾ ತಾಲ್ಲೂಕು ಕೇಂದ್ರಕ್ಕೆ ರಾಜ್ಯ ಸರ್ಕಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರಾತಿ ಮಾಡಿರುವುದು ಉತ್ತಮ. ಕಾಲೇಜಿನಲ್ಲಿ ಎಲ್ಲ ಕೋರ್ಸ್‌ಗಳನ್ನು ಆರಂಭಿಸಬೇಕು
ಡಾ. ಭೀಮಣ್ಣ, ಕಾಂಗ್ರೆಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.