ADVERTISEMENT

‘ಶಿಕ್ಷಣದಲ್ಲಿ ಮದ್ಯ ಪಾನ ಜಾಗೃತಿಯ ಪಠ್ಯ ಸೇರ್ಪಡೆಗೆ ಮನವಿ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:40 IST
Last Updated 14 ಡಿಸೆಂಬರ್ 2025, 6:40 IST
ಶರಣಪ್ಪ ಸಲಾದಪುರ
ಶರಣಪ್ಪ ಸಲಾದಪುರ   

ಯಾದಗಿರಿ: ‘ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಶಾಲಾ ಪಠ್ಯಪುಸ್ತಕದ ಪಾಠವನ್ನು ಸೇರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದರು.

‘ಶಾಲಾ ಹಂತದಿಂದಲೇ ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ವೈಯಕ್ತಿಕ ಬದುಕು ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿಸಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಮಾತನಾಡುತ್ತೇನೆ. ಮದ್ಯ ಪಾನ ತ್ಯಜಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ತರಲು ಸ್ವಾಮೀಜಿಗಳು, ಶಿಕ್ಷಣ ತಜ್ಞರೊಂದಿಗೂ ಸಭೆ ಮಾಡಲಾಗುವುದು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜನಜಾಗೃತಿ ಕಾರ್ಯಗಳಿಗೆ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮದ್ಯ ಸೇವನೆಯಿಂದ ಉಂಟಾಗುತ್ತಿರುವ ಸಾವು ಹಾಗೂ ರೋಗ-ರುಜಿನಗಳ ಬಗ್ಗೆ ವಿವರವಾದ ವರದಿ ಒದಗಿಸುವಂತೆ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ ಸೂಚನೆ ನೀಡಲಾಗಿದೆ’ ಎಂದರು.

ADVERTISEMENT

‘ಪ್ರತಿಯೊಂದು ಶಾಲಾ, ಕಾಲೇಜುಗಳಲ್ಲಿ ಕ್ರೀಡಾಂಗಣ ನಿರ್ಮಿಸಿ, ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಳ್ಳವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸುವಂತೆ ಕ್ರೀಡಾ ಹಾಗೂ ಶಾಲಾ ಶಿಕ್ಷಣ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಪುರ್ನವಸತಿ ಕೇಂದ್ರಗಳಿಗೆ ತಿಂಗಳಿಗೆ ಎರಡು ಬಾರಿ ಕಡ್ಡಾಯವಾಗಿ ಭೇಟಿ ನೀಡಿ, ವರದಿ ಸಲ್ಲಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ತಿಳಿಸಲಾಗಿದೆ’ ಎಂದು ಹೇಳಿದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಹಾಗೂ ಆರೋಗ್ಯ ಇಲಾಖೆಗಳಡಿ ಬರುವ ಮಾನಸಿಕ ಆರೋಗ್ಯ ಪ್ರಾಧಿಕಾರದಿಂದ ತಲಾ ಒಬ್ಬರನ್ನು ಕಾಯಂ ಸದಸ್ಯರನ್ನಾಗಿ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಾಂಧಿಗ್ರಾಮ ಪುರಸ್ಕೃತ ಗ್ರಾಮ ಪಂಚಾಯಿತಿಗಳಲ್ಲಿ ಮದ್ಯ ಬಗ್ಗೆ ಜನಜಾಗೃತಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಕೋರಲಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಭೀಮರಾವ್ ಠಾಣಾಗುಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.