ADVERTISEMENT

ನೆರೇಗಾ ಸಮರ್ಪಕ ಜಾರಿಗೆ ಆಗ್ರಹ

ಶಹಾಪುರ: ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 6:09 IST
Last Updated 8 ಅಕ್ಟೋಬರ್ 2022, 6:09 IST
ಶಹಾಪುರ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು
ಶಹಾಪುರ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು   

ಶಹಾಪುರ: ‘ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿಗೊಳಿಸಬೇಕು. ತಾಲ್ಲೂಕಿನ ನಾಗನಗಟಿ ಗ್ರಾ.ಪಂ ಪಿಡಿಒ ಹಾಗೂ ಕಂಪ್ಯೂಟರ್ ಅಪರೇಟರ್ ಅವರನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿ ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ದುಡಿಯುವ ಜನರಿಗೆ ವರವಾಗ ಬೇಕಾಗಿದ್ದ ಯೋಜನೆ ಕೂಲಿಕಾರರಿಗೆ ಶಾಪವಾಗಿ ಕಾಡುತ್ತಿದೆ. ಕೂಲಿಕಾರರಿಗೆ ಸಮಯಕ್ಕೆ ಸರಿಯಾಗಿ ಕೆಲಸ ನೀಡದೆ ಇಲ್ಲದ ಸಬೂಬು ಹೇಳುತ್ತಿದ್ದಾರೆ. ಇಲ್ಲದ ತಾಂತ್ರಿಕ ನೆಪವನ್ನು ಮುಂದೆ ಮಾಡಿ ಶ್ರಮಿಕ ವರ್ಗಕ್ಕೆ ಕೂಲಿ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಹೊಸಕೇರಾ, ನಾಗನಟಗಿ, ಹೊತಪೇಟ ಸಗರ, ರಸ್ತಾಪುರ, ಕನ್ಯಾಕೊಳ್ಳರ, ಇಬ್ರಾಹಿಂಪುರ, ಖಾನಾಪುರ, ಕೊಳ್ಳುರ (ಎಂ) ಗ್ರಾ.ಪಂ ಗಳಲ್ಲಿ ದುಡಿದ ಕೂಲಿಕಾರರ ಸಂಬಳ ಮತ್ತು ಕೆಲಸ ನೀಡಬೇಕು. ನಾಗನಟಗಿ ಗ್ರಾಮ ಪಂಚಾಯಿತಿಯ ಬಾಣತಿಹಾಳ ಗ್ರಾಮದ ಕೃಷಿ ಕೂಲಿಕಾರ ಭೀಮಣ್ಣ ಅವರು
ಕೆಲಸ ಮಾಡುವ ವೇಳೆ ಕಾಲು ಮುರಿದಿದ್ದು ಪರಿಹಾರ ಧನ ಕೊಡಬೇಕು ಎಂದು ಅವರು
ಆಗ್ರಹಿಸಿದರು.

ADVERTISEMENT

ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ದಾವಸಾಬ್ ನದಾಫ್,ರಂಗಮ್ಮ ಕಟ್ಟಿಮನಿ, ಅಂಬ್ಲಯ್ಯ ಬೇವಿನಕಟ್ಟಿ, ದೇವಪ್ಪ ಹಳ್ಳಿ, ಭೀಮಣ್ಣ ನಾಯ್ಕೋಡಿ, ಮಲ್ಲಿಕಾರ್ಜುನ ಪೂಜಾರಿ, ಗುಲಾಮ ಹುಸೇನ್, ಅಯ್ಯಪ್ಪ ಕೊಂಬಿನ್, ಶಿವಪ್ಪ ವಿಭೂತಿಹಳ್ಳಿ, ಈಶ್ವರ ದರಿಯಾಪುರ, ಇಮಾಮಸಾಬ, ಸೋಪಣ್ಣ ಕರಣಿಗಿ, ಸಾಯಿಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.