ವಡಗೇರಾ: ಭೀಮಾನದಿಯ ನೀರನ್ನು ನಂಬಿ ಭತ್ತ ಹಾಗೂ ಹತ್ತಿ ಬೆಳೆಯುತ್ತಿರುವ ರೈತರ ಬೆಳೆಗೆ ಸಕಾಲದಲ್ಲಿ ವಿದ್ಯುತ್ ಸರಬರಾಜು ಮಾಡದೆ ಇರುವುದರಿಂದ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನೀರಿನ ಕೊರತೆಯಾಗಿ ರೈತರ ಬೆಳೆಗಳು ಒಣಗುತ್ತಿದೆ.
ವಡಗೇರಾ ತಾಲ್ಲೂಕಿನ ಹಾಲಗೇರಾ, ಗೊಡಿಯಾಳ, ಕುಮನೂರು, ಗಡ್ಡೆಸೂಗುರು ಸೇರಿ ಇನ್ನೂ ಹಲವು ಗ್ರಾಮಗಳಲ್ಲಿ ಭೀಮಾ ತೀರದ ರೈತರು ಕರೆಂಟ್ ಕಣ್ಣಾ ಮುಚ್ಚಾಲೆಯಿಂದ ಕಂಗಲಾಗಿದ್ದಾರೆ. ನದಿಯಲ್ಲಿ ಸಾಕಷ್ಟು ನೀರು ಇದ್ದರೂ ವಿದ್ಯುತ್ ಸಮರ್ಪಕವಾಗಿ ಪೂರೈಕೆ ಆಗದೇ ಇರುವುದರಿಂದ ಭೀಮಾನದಿಯಿಂದ ಐಪಿಸೆಟ್‌ಗಳ ಮೂಲಕ ಭತ್ತ ಹಾಗೂ ಹತ್ತಿ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ಐಪಿಸೆಟ್‌ಗಳಿಗೆ ನಿಯಮದ ಪ್ರಕಾರ ಜೆಸ್ಕಾಂ ಅಧಿಕಾರಿಗಳು 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ, ವಿವಿಧ ನೆಪವೊಡ್ಡಿ ಕರೆಂಟ್ ಸ್ಥಗಿತ ಮಾಡುತ್ತಾರೆ. ರೈತರು ಕೂಲಿ ಕಾರ್ಮಿಕರನ್ನು ಕೂಲಿಗೆ ಹಚ್ಚಿ ಭತ್ತ ನಾಟಿ ಮಾಡಿಸಿದ್ದಾರೆ. ಇನ್ನೂ ಬಹುತೇಕ ರೈತರು ಭತ್ತ ನಾಟಿ ಮಾಡಬೇಕಿದೆ. ಆದರೆ, ನೀರಿನ ಸಮಸ್ಯೆ ಎದುರಾಗಿದೆ.
ಒಂದು ಕಡೆ ನಾಟಿ ಮಾಡಿರುವ ಭತ್ತವು ನೀರಿನ ಕೊರತೆಯಿಂದ ಒಣಗುತ್ತಿದ್ದರೆ, ನೀರಿನ ಕೊರತೆಯಿಂದ ಭತ್ತದ ಜಮೀನು ಬಿರುಕುಬಿಟ್ಟಿದೆ. ಹತ್ತಿ ಬೆಳೆಗೂ ನೀರಿನ ಕೊರತೆಯಾಗಿದೆ. ಸಾಲ ಮಾಡಿ ಭತ್ತ ಬೆಳೆಯಲು ಮುಂದಾದ ರೈತರಿಗೆ ನದಿಯಲ್ಲಿ ನೀರು ಇದ್ದರೂ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.
ವಡಗೇರಾ ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಗ್ರಾಮಗಳ ರೈತರು ಆ ರೈತರು ಆಗಮಿಸಿ ಜೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆಯೂ ನಡೆದಿವೆ.
ವಿದ್ಯುತ್ ಸಮರ್ಪಕವಾಗಿ ಸರಬರಾಜು ಮಾಡದೇ ಇರುವುದರಿಂದ ನಾಟಿ ಮಾಡಿದ ಭತ್ತಕ್ಕೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. 7 ಗಂಟೆ ವಿದ್ಯುತ್ ಸರಬರಾಜು ಮಾಡದಿದ್ದರೆ ಹೋರಾಟ ಮಾಡುತ್ತೇವೆಸಂಗಾರೆಡ್ಡಿ, ಗೊಡಿಹಾಳ ರೈತ
ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ರೈತರು ತೀವ್ರ ಕಂಗಾಲಾಗಿದ್ದಾರೆ. ಕೂಡಲೇ ಸಮರ್ಪಕ ವಿದ್ಯುತ್ ಒದಗಿಸಬೇಕು. ರೈತನ ಬಗ್ಗೆ ಸರ್ಕಾರಗಳು ಮೊದಲು ಕಾಳಜಿ ವಹಿಸಬೇಕು.ಮಂಜುನಾಥ ರೆಡ್ಡಿ ಚೆನ್ನೂರ, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಆಷಾಢ ಗಾಳಿಯಿಂದ ಲೈನ್‌ಟ್ರಿಪ್ ಆಗುತ್ತಿದೆ. ಇದರಿಂದಾಗಿ ಸತತವಾಗಿ 7 ಗಂಟೆ ವಿದ್ಯುತ್ ಕೊಡಲು ತೊಂದರೆಯಾಗುತ್ತಿದೆ. ಆದರೂ ಬೆಳಿಗ್ಗೆ ಹಾಗೂ ರಾತ್ರಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ.ಥಾಮಸ್ ವಡಗೇರಾ, ವಿದ್ಯುತ್ ವಿತರಣಾ ಕೇಂದ್ರದ ಜೆಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.