ವಡಗೇರಾ (ಯಾದಗಿರಿ ಜಿಲ್ಲೆ): ‘ಸಹಿ ಮಾಡು ಎಂದು ಈ ಹಿಂದೆ ಯಾರಾದರೂ ಹೇಳಿದರೆ ನನಗೆ ನಾಚಿಕೆಯಾಗುತ್ತಿತ್ತು. ನನಗೆ ಸಹಿ ಮಾಡಲು ಬರುತ್ತಿರಲಿಲ್ಲ. ಬರೀ ಹೆಬ್ಬೆಟ್ಟು ಒತ್ತುತ್ತಿದ್ದೆ. ಆದರೀಗ ನಾನು ಹೆಸರು ಬರೆಯುವುದನ್ನೂ ಕಲಿತಿದ್ದೇನೆ...’
ಇದು ತಾಲ್ಲೂಕಿನ ಗೋನಾಲ ಗ್ರಾಮದ ಕೃಷಿ ಕಾರ್ಮಿಕ ಮಹಿಳೆ ದೇವಿಂದ್ರಮ್ಮ ಅವರ ಆತ್ಮವಿಶ್ವಾಸದ ನುಡಿ.
‘ನಾನು ಸ್ವ–ಸಹಾಯ ಸಂಘವೊಂದರ ಸದಸ್ಯೆ. ಮೊದಲೆಲ್ಲ ಬ್ಯಾಂಕ್‌ಗೆ ಹೋದಾಗ ಹೆಬ್ಬೆಟ್ಟು ಒತ್ತುತ್ತಿದ್ದೆ. ಈಗ ಸಹಿ ಮಾಡುವ ಜಾಗದಲ್ಲಿ ನನ್ನ ಹೆಸರು ಬರೆಯುತ್ತಿದ್ದೇನೆ’ ಎಂದು ದೇವಿಂದ್ರಮ್ಮ ಹೆಮ್ಮೆಯಿಂದ ಹೇಳುತ್ತಾರೆ.
ದಿನವಿಡೀ ಕೂಲಿ ಮಾಡಿ ದಣಿದರೂ, ಉಂಡು–ಮಲಗುವ ಮುನ್ನ ಅವರು ಮೂಲಾಕ್ಷರ ಕಲಿಯುತ್ತಿದ್ದಾರೆ. ಬರೀ ದೇವಿಂದ್ರಮ್ಮ ಮಾತ್ರವಲ್ಲ, ತಾಲ್ಲೂಕಿನಲ್ಲಿ ಹಲವು ಸ್ವ–ಸಹಾಯ ಗುಂಪುಗಳ ಅನಕ್ಷರಸ್ಥ ಸದಸ್ಯೆಯರು ತಮ್ಮ ಬದುಕಿನ ಇಳಿಗಾಲದಲ್ಲಿ ಅಕ್ಷರ ಕಲಿಕೆ ಆರಂಭಿಸಿದ್ದಾರೆ. ಕೆಲವರು ಪಾಟಿ–ಬಳಪ ಬಳಿಸಿದರೆ, ಹಲವರು ಮನೆಯಲ್ಲಿ ಹಾಕಿದ ಶಹಾಬಾದ್/ಕಪ್ಪುಕಲ್ಲು ಮೇಲೆ ಮೂಲಾಕ್ಷರ ಬರೆಯುತ್ತ–ಓದುತ್ತ ಅಕ್ಷರ ಜ್ಞಾನ ಪಡೆಯುತ್ತಿದ್ದಾರೆ. ಅವರನ್ನು ನವಸಾಕ್ಷರರನ್ನಾಗಿಸಲು ಎನ್‌ಆರ್‌ಎಲ್‌ಎಂ, ಎಲ್‌ಸಿಆರ್‌ಪಿ, ಎಂಬಿಕೆ, ಕೃಷಿ–ಪಶು ಸಹಾಯಕಿಯರು ಶ್ರಮಿಸುತ್ತಿದ್ದಾರೆ.
ವಡಗೇರಾ ತಾಲ್ಲೂಕಿನ ಗೋನಾಲ, ಕುರಕುಂದಾ, ತಡಿಬಿಡಿ, ಐಕೂರ, ಹಯ್ಯಾಳ(ಬಿ), ಹಾಲಗೇರಾ, ತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ದಿನಗಳಿಂದ ಈ ಕಲಿಕೆ ಸಾಗಿದೆ.
ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಾರು ಮಹಿಳಾ ಸ್ವ–ಸಹಾಯ ಸಂಘಗಳಿವೆ. ಪ್ರತಿ ಸಂಘದಲ್ಲಿ ಸುಮಾರು 10ರಿಂದ 15 ಸದಸ್ಯರಿದ್ದಾರೆ. ಅದರಲ್ಲಿರುವ ಅನಕ್ಷರಸ್ಥರಿಗೆ ಮೂಲಾಕ್ಷರ ಕಲಿಸುವ ಕೆಲಸ ನಡೆಯುತ್ತಿದೆ.
ಅನಕ್ಷರಸ್ಥ ಸದಸ್ಯೆಯರಲ್ಲಿ ಬಹುತೇಕರೂ ಕೃಷಿ ಕೂಲಿ ಕಾರ್ಮಿಕರು. ದಿನವಿಡೀ ದುಡಿದು ಬರುವ ಅವರಿಗೆ ಸಂಜೆ 7 ಗಂಟೆ ಹೊತ್ತಿಗೆ ಅಕ್ಷರ ಜ್ಞಾನ ನೀಡಲಾಗುತ್ತಿದೆ. ಐದಾರು ಮಂದಿ ಮನೆಗಳಿಗೆ ಹೋಗಿ ಮೂಲಾಕ್ಷರ ಕಲಿಸಲಾಗುತ್ತಿದೆ.
ಪಂಚಾಯಿತಿಗಳ ನೆರವು: ಮಹಿಳಾ ಸ್ವ–ಸಹಾಯ ಸಂಘದ ಸದಸ್ಯರ ಕಲಿಕೆಗೆ ಪಂಚಾಯಿತಿಗಳು ನೋಟ್‌ಬುಕ್, ಪೆನ್ಸಿಲ್, ಬಳಪ ಹಾಗೂ ಸ್ಲೇಟ್‌ನಂಥ (ಪಾಟಿ) ಕಲಿಕೋಪಕರಣ ಒದಗಿಸುತ್ತಿವೆ.
ಅನಕ್ಷರಸ್ಥ ಮಹಿಳೆಯರಿಗೆ ಕಲಿಸುವುದರಲ್ಲಿ ಸಿಗುವ ಖುಷಿ ಬೇರೆ ಯಾವುದರಲ್ಲೂ ಸಿಗಲ್ಲ. ಅವರೂ ಅಷ್ಟೇ ಗಮನವಿಟ್ಟು ಕಲಿಯುತ್ತಿದ್ದಾರೆಅಂಜನಾ ತಡಿಬಿಡಿ ಎಂಬಿಕೆ ಮುಖ್ಯ ಪುಸ್ತಕ ಬರಹಗಾರ್ತಿ
ಅನಕ್ಷರಸ್ಥ ಮಹಿಳೆಯರಿಗೆ ಅವರ ಹೆಸರು ಸಂಘದ ಹೆಸರು ಅವರ ಮನೆಯವರ ಹೆಸರು ಬರೆಯಲು ಸಹಿ ಮಾಡಲು ಕಲಿಸುತ್ತಿದ್ದೇವೆ. ಮುಂದೆ ಓದು–ಬರಹ ಕಲಿಸಲಾಗುವುದುರಾಜೇಶ್ವರಿ ಮಾತ ವಡಗೇರಾ ತಾಲ್ಲೂಕು ಸಂಪನ್ಮೂಲ ವ್ಯಕ್ತಿ
‘ಸಾಕ್ಷರರನ್ನಾಗಿಸುವ ಉದ್ದೇಶ’
‘ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಡಿಯಾ ನಿರ್ದೇಶನದಂತೆ ವಡಗೇರಾ ತಾಲ್ಲೂಕಿನ ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳ ಅನಕ್ಷರಸ್ಥ ಸದಸ್ಯರನ್ನು ಸಾಕ್ಷರರನ್ನಾಗಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನಮ್ಮ ಎಂಬಿಕೆ ಕೃಷಿ ಪಶು ಸಖಿಯರು ಅನಕ್ಷರಸ್ಥ ಸದಸ್ಯೆಯರ ಮನೆಗೆ ನಿತವೂ ಹೋಗಿ ಅವರಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದಾರೆ. ಅವರನ್ನು ಸಾಕ್ಷರರನ್ನಾಗಿ ಮಾಡುವ ಜತೆಗೆ ಅವರನ್ನು ಸ್ವಾವಲಂಬಿ ಬದುಕಿನ ಕಡೆಗೆ ಕರೆದೊಯ್ಯಲು ಉದ್ದೇಶಿಸಿದ್ದೇವೆ’ ಎಂದು ವಡಗೇರಾ ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜನ ಸಂಗ್ವಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.