ADVERTISEMENT

ಯಾದಗಿರಿ | ಸೈನಿಕರ ನೆರವಿಗೆ ವೀರ್‌ ಪರಿವಾರ್‌ ಸಹಾಯಕ ಯೋಜನೆ: ನ್ಯಾ.ಮರಿಯಪ್ಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 3:16 IST
Last Updated 20 ಜನವರಿ 2026, 3:16 IST
ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಸೈನಿಕರ ಕುಂದು-ಕೊರತೆ ಸಂಭೆಯಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು
ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಸೈನಿಕರ ಕುಂದು-ಕೊರತೆ ಸಂಭೆಯಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು   

ಯಾದಗಿರಿ: ‘ದೇಶದ ರಕ್ಷಣೆಯಲ್ಲಿ ತೊಡಗಿದ ಸೈನಿಕರು ತಮ್ಮ ಕುಟುಂಬಕ್ಕೆ ‍ಅಗತ್ಯ ಸಮಯ ನೀಡಲಾಗದು. ಆದ್ದರಿಂಸ ಸೈನಿಕರ ಕುಟುಂಬಗಳ ನೆರವಿಗೆ ವೀರ್ ಪರಿವಾರ್‌ ಸಹಾಯಕ್‌ ಯೋಜನೆ ಜಾರಿ ಮಾಡಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮರಿಯಪ್ಪ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಸೈನಿಕರ, ವೀರನಾರಿಯರ, ಅವಲಂಬಿತರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸೈನಿಕರು ಮತ್ತು ಮಾಜಿ ಸೈನಿಕರು ಹೆಚ್ಚಿನ ಅವಧಿ ತಮ್ಮ ಕಾರ್ಯದಲ್ಲೇ ಮಗ್ನರಾಗಿರುವ ಹಿನ್ನೆಲೆ ಯಾವ ಕೆಲಸಗಳು ಯಾವ ಕಚೇರಿಯಲ್ಲಿ ಎನ್ನುವ ಮಾಹಿತಯ ಕೊರತೆ ಕಾಡಬಹುದು. ಆದ್ದರಿಂದ ನಮ್ಮ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿ ಮತ್ತು ಅಗತ್ಯವಾದ ಪತ್ರಗಳ ಕರಡುಗಳು ತಯಾರಿಸಿ ಕೊಡಲಿದೆ’ ಎಂದು ತಿಳಿಸಿದರು.

‘ಲೀಗಲ್‌ ಕ್ಲೀನಿಕ್‌ಗಳ ಮೂಲಕ ಸೈನಿಕ, ಮಾಜಿ ಸೈನಿಕರ ಕುಟುಂಬಗಳ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದನೆ ಮಾಡಲಾಗುವುದು. ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರನ್ನು ನೇಮಕ ಮಾಡಿಕೊಡುತ್ತೇವೆ’ ಎಂದು ಹೇಳಿದರು.

ADVERTISEMENT

‘ನಮ್ಮ ಜಿಲ್ಲೆಯಲ್ಲಿ ಇಬ್ಬರು ಮಾಜಿ ಸೈನಿಕರನ್ನು ಪಿಎಲ್‌ವಿ ಎಂದು ನೇಮಕ ಮಾಡಿಕೊಳ್ಳಲಾಗಿದೆ. ಮಾಜಿ ಸೈನಿಕರಲ್ಲಿ ಕಾನೂನು ಪದವಿದರರಿದ್ದರೆ ಅವರನ್ನು ಪ್ಯಾನಲ್‌ ಅಡ್ವೊಕೇಟ್‌ ಎಂದು ನೇಮಕ ಮಾಡಲಾಗುವುದು. ಜತೆಗೆ ಕಾನೂನು ಸಂಬಂಧಿತ ನೆರವುವನ್ನು ಒದಗಿಸಲಾಗುತ್ತದೆ’ ಎಂದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿನ ಎಲ್ಲಾ ಸೈನಿಕರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದಾಖಲೆಗಳು ಒದಗಿಸಿದರೆ ಅವರು ಕೂಡಲೇ ಕ್ರಮವಹಿಸುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಮಾಜಿ ಸೈನಿಕರಲ್ಲಿ 40 ಜನರನ್ನು ಮಾತ್ರ ಸಂಪರ್ಕಿಸಲು ಸಾಧ್ಯವಾಯಿತು. ಇನ್ನುಳಿದ 90 ಜನರು ಸಂಪರ್ಕಕ್ಕೆ ಸಿಗಲಿಲ್ಲ. ಆದ್ದರಿಂದ ಸೈನಿಕರು ಮತ್ತು ಮಾಜಿ ಸೈನಿಕರು ಎಲ್ಲರೂ ಒಗ್ಗೂಡಿ ಸಂಘ ರಚಿಸಬೇಕಿದೆ’ ಎಂದು ಕರೆ ನೀಡಿದರು.

‘ನಮ್ಮ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಸೇವೆ ಅತ್ಯವಶ್ಯ. ಸೈನ್ಯದಲ್ಲಿರುವಾಗ ಸಮಸ್ಯೆಯಾಗದು. ಆದರೆ, ನಿವೃತ್ತಿಯ ನಂತರ ಸಮಸ್ಯೆಯಾಗುತ್ತಿದೆ. ಹೊಸ ಜಿಲ್ಲೆಯಲ್ಲಿ ನಮಗೆ ಇಸಿಎಚ್‌ ಕಚೇರಿಯಿಲ್ಲ, ಸೈನಿಕರಿಗೆ ಆಸ್ಪತ್ರೆ ಇಲ್ಲ. ಕನಿಷ್ಟ ಪ್ರಾಥಮಿಕ ಚಿಕಿತ್ಸೆಗೆ ಒಂದು ಆಸ್ಪತ್ರೆ ವ್ಯವಸ್ಥೆ ಮಾಡಿದರೆ ಒಳ್ಳೆದು’ ಎಂದು ಕೋರಿದರು.

‘ನಮ್ಮ ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಸೈನಿಕರಿರುವುದು ಯಾದಗಿರಿ ಜಿಲ್ಲೆಯಲ್ಲಿ. ಸೈನಿಕ್‌ ಕಲ್ಯಾಣ ಬೋರ್ಡ್‌ ಮೂಲಕ ಮಾಜಿ ಸೈನಿಕರಿಗೆ ಸ್ವಲ್ಪ ಉತ್ತಮ ನೆರವು ಸಿಗುತ್ತಿದೆ’ ಎಂದು ತಿಳಿಸಿದರು.

‘ಬೋರ್ಡ್‌ ಕಡಿಮೆ ಸಂಖ್ಯೆಯಲ್ಲಿರುವ ಜಿಲ್ಲೆಗಳನ್ನು ಗುರುತಿಸಿ, ಅಲ್ಲಿನವರಿಗೆ ಸೌಕರ್ಯ ಸಿಗುವ ಕುರಿತು ಪರಿಶೀಲನೆ ನಡೆಸಲು ಸಮಿತಿ ಸೂಚಿಸಿತು. ಆದರೆ, ಸೈನಿಕರಿಗೆ ಸಭೆಯ ಕುರಿತು ಮಾಹಿತಿ ನೀಡಲಾಗಲಿಲ್ಲ. ದೇಶದ ರಕ್ಷಣೆಗೆ ಹೋರಾಡಿ ಪ್ರಾಣ ತೊರೆದ ಸೈನಿಕರ ಸ್ಮಾರಕವಿಲ್ಲ. ಜಿಲ್ಲಾಡಳಿತ ಈ ಕುರಿತು ಕ್ರಮವಹಿಸಲಿ’ ಎಂದರು.

ಕೆ ಅಂಡ್‌ ಕೆ ಉಪವಲಯದ ಕಮಾಂಡೆಂಟ್‌ ಕಶಪ್‌, ಉಪಾಧ್ಯಕ್ಷ ಎಂ.ಎಸ್.ಜಾನಿ ಮತ್ತು ಆನಂದ, ಖಜಾಂಚಿ ಮರೆಪ್ಪ, ತಾಲ್ಲೂಕು ಅಧ್ಯಕ್ಷ ವೀರೇಶ ಮತ್ತು ಮಲ್ಲಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.